ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರನ್ನು ಪ್ರತ್ಯೇಕಿಸುವ ಕಾರ್ಯಸೂಚಿ ಅಪಾಯಕಾರಿ: ಮೂಡ್ನಾಕೂಡು ಚಿನ್ನಸ್ವಾಮಿ

ಜನಸಾಹಿತ್ಯ ಸಮ್ಮೇಳನ
Last Updated 8 ಜನವರಿ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ಪಂಥದ ಸ್ವಾರ್ಥ ಸಾಧನೆಗಾಗಿ ನಾವು– ಅವರು ಎಂಬ ಗೆರೆ ಎಳೆದು ಮುಸ್ಲಿಮರನ್ನು ಪ್ರತ್ಯೇಕಿಸುವ ಕಾರ್ಯಸೂಚಿಯು ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯವನ್ನೂ ಪ್ರವೇಶಿಸಿರುವುದು ಅಪಾಯಕಾರಿ’ ಎಂದು ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದರು.

ನಗರದ ಕೆ.ಆರ್‌. ವೃತ್ತದ ಸಮೀಪದ ಅಲುಮ್ನಿ ಅಸೋಸಿಯೇಷನ್‌ ಸಭಾಂಗಣದ ಆವರಣದಲ್ಲಿನ ಮೈದಾನದಲ್ಲಿ ಭಾನುವಾರ ನಡೆದ ಜನಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಒಂದು ಪಂಥವು ಧರ್ಮವನ್ನು ಗುರಾಣಿ ಮಾಡಿಕೊಂಡು ಮುಗ್ಧ ಜನರನ್ನು ವಿಭಜಿಸುತ್ತಿದೆ. ಆ ಗುಂಪು ದೀರ್ಘಕಾಲದಿಂದ ಮುಸ್ಲಿಮರನ್ನು ರಾಜಕೀಯವಾಗಿ ಪ್ರತ್ಯೇಕಿಸುತ್ತಾ ಬಂದಿದೆ. ಅದು ಈಗ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನ ಕಾರ್ಯಸೂಚಿಯ ಜಾರಿಗೆ ಪ್ರಯತ್ನಿಸುತ್ತಿರುವುದಕ್ಕೆ ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನವೇ ಸಾಕ್ಷಿ’ ಎಂದರು.

‘ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯಲ್ಲಿ ಪರ ಧರ್ಮ ಮತ್ತು ಪರ ವಿಚಾರಗಳಿಗೆ ಗೌರವವಿದೆ. ಆದರೆ, ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಬರಹಗಾರರನ್ನು ಹೊರಗಿಟ್ಟಿರುವ ಸಾಹಿತ್ಯ ಪರಿಷತ್ತು ಕನ್ನಡ ಧರ್ಮಕ್ಕೆ ಅಪಚಾರ ಎಸಗಿದೆ. ತುಳು, ಕೊಡವ, ಅರೆ ಭಾಷೆ, ಕೊಂಕಣಿ ಭಾಷೆಗಳಿಗೆ ಸಮ್ಮೇಳನದಲ್ಲಿ ಪ್ರಾತಿನಿಧ್ಯ ನೀಡಿ, ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ವಿಷಾದನೀಯ’ ಎಂದು ಹೇಳಿದರು.

‘ಹಿಂದಿ, ಹಿಂದೂ, ಹಿಂದುಸ್ತಾನ್‌ ಎನ್ನುವ ಮೂಲಕ ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮದ ಪರಿಕಲ್ಪನೆಯನ್ನು ತೇಲಿಬಿಡಲಾಗಿದೆ. ದಕ್ಷಿಣ ಭಾರತದ ಮೇಲೆ ಹಿಂದಿ ಹೇರಿಕೆಯನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿಯೇ 2011ರ ಜನ ಗಣತಿಯಲ್ಲಿ ಹಿಂದಿ ಭಾಷಿಕರ ಕುರಿತು ಉತ್ಪ್ರೇಕ್ಷಿತ ಅಂಕಿ–ಅಂಶಗಳನ್ನು ದಾಖಲಿಸಲಾಗಿದೆ. ಎಲ್ಲ ರಂಗಗಳಲ್ಲೂ ಗಣನೀಯ ಅಭಿವೃದ್ಧಿ ಸಾಧಿಸಿರುವ ದ್ರಾವಿಡ ಜನಾಂಗ, ದ್ರಾವಿಡ ಸಂಸ್ಕೃತಿ ಮತ್ತು ದ್ರಾವಿಡ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿರುವುದು ನಮ್ಮ (ದ್ರಾವಿಡರ) ಪಾಲಿಗೆ ಮಾರಣಾಂತಿಕ ಹೊಡೆತ’ ಎಂದರು.

ತಥಾಕಥಿತ ಜಾತಿ ವ್ಯವಸ್ಥೆಯನ್ನು ಪೊರೆಯುವ ಹಿಂದೂ ಧರ್ಮವೇ ಸಂಘ ಪರಿವಾರದ ಪಾಲಿಗೆ ಪ್ರಿಯವಾದುದು. ಅದಕ್ಕಾಗಿ ಹಿಂದುತ್ವವು ಗಾಂಧಿ ಮತ್ತು ಅಂಬೇಡ್ಕರ್‌ ಅವರನ್ನು ಅಪ್ರಸ್ತುತಗೊಳಿಸುವ ಕೆಲಸ ಮಾಡುತ್ತಿದೆ. ತಮಿಳುನಾಡಿನ ವೆಂಗವಯಲ್‌ ಗ್ರಾಮದಲ್ಲಿ ದಲಿತರು ದೇವಸ್ಥಾನ ಪ್ರವೇಶಿಸಿದರು ಎಂಬ ಕಾರಣಕ್ಕಾಗಿ ಅವರು ಕುಡಿಯುವ ನೀರಿನ ಟ್ಯಾಂಕ್‌ಗೆ ಮಲ ಸುರಿದಾಗ ರಾಷ್ಟ್ರೀಯತೆಯ ವಕ್ತಾರರು ಬಾಯಿ ಬಿಡಲಿಲ್ಲ. ಇದಕ್ಕಿಂತ ಹೇಯವಾದುದು ಇನ್ನೊಂದು ಇಲ್ಲ ಎಂದು ಹೇಳಿದರು.

ಇತಿಹಾಸ ತಿರುಚುತ್ತಿದ್ದಾರೆ: ‘ಮಕ್ಕಳಿಂದ ನೈಜ ಇತಿಹಾಸವನ್ನು ಮುಚ್ಚಿಟ್ಟು, ಸುಳ್ಳುಗಳನ್ನು ಬೋಧಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಶತಮಾನಗಳ ಕಾಲದ ಮೊಘಲರ ಆಳ್ವಿಕೆ ಮತ್ತು ಜೈನರು, ಬೌದ್ಧ ರಾಜರ ಆಡಳಿತದ ಅವಧಿಯನ್ನು ಪಠ್ಯಕ್ರಮದಿಂದಲೇ ಕಿತ್ತುಹಾಕಲು ಪ್ರಯತ್ನಿಸುತ್ತಿದ್ದಾರೆ. ವೇದಗಳಲ್ಲಿ ಎಲ್ಲವೂ ಇದೆ, ಭಾರತದಲ್ಲಿ ಎಲ್ಲವೂ ಇತ್ತು ಎಂದು ಹೇಳುವುದು ಕೆಲವರಿಗೆ ಕಾಯಿಲೆಯಾಗಿಬಿಟ್ಟಿದೆ’ ಎಂದು ಚಿನ್ನಸ್ವಾಮಿ ಟೀಕಿಸಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸ್ಥಗಿತಗೊಳಿಸಲಾಗಿದೆ. ಇವೆಲ್ಲವೂ ಪರಿಶಿಷ್ಟರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವ ಕಾರ್ಯಸೂಚಿಯ ಭಾಗ. ಧರ್ಮದ ಹೆಸರಿನಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಮುಸ್ಲಿಮರ ಉದ್ಯೋಗವನ್ನೂ ಕಿತ್ತುಕೊಳ್ಳಲಾಗುತ್ತಿದೆ. ‘ಎಲ್ಲರ ಜತೆ–ಎಲ್ಲರ ವಿಕಾಸ’ ಎಂಬ ಮಾತು ಆತ್ಮವಂಚನೆಯಂತೆ ಕಾಣುತ್ತಿದೆ ಎಂದರು.

ರಾಷ್ಟ್ರ ನಿರ್ಮಿಸುವವರು ವ್ಯಾಪಾರಿಗಳು ಅಥವಾ ರಾಜಕಾರಣಿಗಳಲ್ಲ, ಅದನ್ನು ಮಾಡುವವರು ಕವಿಗಳು ಮತ್ತು ಕಲಾವಿದರು. ಸುಳ್ಳು ಮತ್ತು ದ್ವೇಷಗಳಿಂದ ಹಿಂಸೆಯನ್ನು ಪ್ರಚೋದಿಸುತ್ತಾ ಸಾಂಸ್ಕೃತಿಕ ರಾಷ್ಟ್ರೀಯತೆ ಎಂಬ ಹೊಸ ಸಂಕಥನ ಕಟ್ಟಲು ಹೊರಟಿರುವ ಹುಚ್ಚು ಯಜ್ಞಕುದುರೆಯನ್ನು ಪ್ರಜ್ಞಾವಂತರು ಹಿಡಿದು ಕಟ್ಟಿಹಾಕಬೇಕಾಗಿದೆ ಎಂದು ಕರೆ ನೀಡಿದರು.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ದಿಕ್ಸೂಚಿ ಭಾಷಣ ಮಾಡಿದರು. ವಿಶ್ರಾಂತ ಕುಲಪತಿ ಪ್ರೊ.ಎಸ್‌. ಜಾಫೆಟ್‌, ಲೇಖಕ ವಡ್ಡಗೆರೆ ನಾಗರಾಜಯ್ಯ, ಗಾಯಕ ಜನಾರ್ದನ್‌, ಬರಹಗಾರ ಅಗ್ನಿ ಶ್ರೀಧರ್‌ ಮಾತನಾಡಿದರು.

‘ಹೊರಗಟ್ಟುವುದು ಯಾವತ್ತೋ ಆರಂಭವಾಗಿದೆ’
‘ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿ ಅರಿಸಿನ, ಕುಂಕುಮದ ಬಣ್ಣಗಳನ್ನು ಲೇಪಿಸಿ ಮಂದಾಸನದ ಮೇಲೆ ಕೂರಿಸಿದಾಗಲೇ ನಮ್ಮನ್ನು ಹೊರಗಟ್ಟುವ ಕೆಲಸ ಆರಂಭವಾಗಿತ್ತು. ಅದು ಈಗ ಪೂರ್ಣಗೊಳ್ಳುತ್ತಿದೆ. ಕನ್ನಡದ ರಥವನ್ನು ಎಳೆದು, ಜಾತ್ರೆ, ಪರಿಷೆ ಮಾಡಿ ಮುಸ್ಲಿಮರನ್ನು ಹೊರಗಟ್ಟುವುದಕ್ಕೆ ಇಷ್ಟೆಲ್ಲ ಹುನ್ನಾರ ಬೇಕಿತ್ತೆ’ ಎಂದು ಲೇಖಕಿ ಬಾನು ಮುಷ್ತಾಕ್‌ ಪ್ರಶ್ನಿಸಿದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು, ‘ಅವರು ಕೊಲೆ ಮಾಡಿದರೂ ಚರ್ಚೆಯಾಗುವುದಿಲ್ಲ. ಆದರೆ, ನಾವು ಅಯ್ಯೋ ನೋವಾಗುತ್ತದೆ ಎಂದರೂ ದೇಶದ್ರೋಹಿಗಳಾಗುತ್ತೇವೆ ಎಂದು ಉರ್ದು ಕವಿಯೊಬ್ಬರು 1946ರಲ್ಲಿ ಹೇಳಿದ್ದರು. ಅದೇ ಸ್ಥಿತಿ ಈಗಲೂ ಇದೆ. ದ್ವೇಷ ಭಾಷಣ, ಸುಳ್ಳು ಸುದ್ದಿಗಳ ಪ್ರಾಶನದ ನಡುವೆ ನಮ್ಮ ‘ನಂದಿನಿ’ಯನ್ನು ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಆ ಬಗ್ಗೆ ಧ್ವನಿ ಎತ್ತಬೇಕಿದೆ’ ಎಂದರು.

**
ನಮ್ಮನ್ನು ವೇಶ್ಯೆಯರು ಎನ್ನುತ್ತೀರಿ. ತಮ್ಮನ್ನು ತಾವೇ ಇನ್ನೊಂದು ಪಕ್ಷಕ್ಕೆ ಮಾರಿಕೊಂಡು ರಾಜ್ಯದಲ್ಲಿ ಕೋಮುವಾದಿ ಸರ್ಕಾರವನ್ನು ತಂದ ಆ 17 ಮಂದಿ ಶಾಸಕರಿಗೆ ಯಾವ ಪದಗಳಿಂದ ನಿಂದಿಸಲಿ ಹೇಳಿ?
-ಅಕ್ಕೈ ಪದ್ಮಶಾಲಿ

**

ಪಾಪದ ಹಣದಿಂದ ಎಲ್ಲರನ್ನೂ ಕೊಳ್ಳಬಹುದೆಂಬ ಅಹಂಕಾರಿಗಳ ನಡುವೆ, ನಮ್ಮವರೇ ಅವರಿಗೆ ಮಾರಿಕೊಂಡ ದೌರ್ಭಾಗ್ಯದ ನಡುವೆ ನಾವು ಮಾರಾಟಕ್ಕಿಲ್ಲ ಎಂದು ಸಾರಿ ಹೇಳುವ ಜನರು ಒಗ್ಗೂಡಿ ತೋರುತ್ತಿರುವ ಪ್ರತಿರೋಧ ಇದು.
-ಪ್ರಕಾಶ್‌ ರಾಜ್‌, ಚಿತ್ರನಟ

**
ಕನ್ನಡ ಸಾಹಿತ್ಯ ಪರಿಷತ್‌ ಎರಡು ಜಾತಿಗಳ ಕಪಿಮುಷ್ಠಿಯಲ್ಲಿ ಸಿಲುಕಿದೆ. ತೆರೆಮರೆಯಲ್ಲಿ ಕುಳಿತ ಸೂತ್ರಧಾರರ ತಾಳಕ್ಕೆ ತಕ್ಕಂತೆ ಎಲ್ಲವೂ ನಡೆಯುತ್ತಿದೆ.
-ಜಾಣಗರೆ ವೆಂಕಟರಾಮಯ್ಯ, ಕನ್ನಡಪರ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT