ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಯಂತರ ಅಕ್ರಮಕ್ಕೆ ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿತ್ತು ಸಾಕ್ಷ್ಯ!

ವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿತ್ತು ಹಣದ ಕೈ ಬದಲಾವಣೆ ಸುಳಿವು
Last Updated 10 ಅಕ್ಟೋಬರ್ 2021, 21:08 IST
ಅಕ್ಷರ ಗಾತ್ರ

ಬೆಂಗಳೂರು: 2019ರಿಂದ ಈಚೆಗೆ ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳ ಬೃಹತ್‌ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಯುವಾಗಲೇ ಗುತ್ತಿಗೆದಾರರು, ಅಧಿಕಾರಿಗಳು ಮತ್ತು ಅಧಿಕಾರಸ್ಥರ ಮಧ್ಯವರ್ತಿಗಳ ನಡುವೆ ನೂರಾರು ಕೋಟಿ ರೂಪಾಯಿ ಕೈ ಬದಲಾವಣೆ ಆಗಿರುವ ಸುಳಿವು ಕೆಲವರ ವಾಟ್ಸ್‌ಆ್ಯಪ್‌ ಸಂದೇಶಗಳ ಪರಿಶೀಲನೆ ವೇಳೆ ಆದಾಯ ತೆರಿಗೆ (ಐ.ಟಿ) ಇಲಾಖೆಗೆ ಲಭಿಸಿದೆ.

ಕಾಮಗಾರಿಗಳ ಗುತ್ತಿಗೆಗೆ ಟೆಂಡರ್‌ ಪ್ರಕ್ರಿಯೆ, ಅಂದಾಜು ಪಟ್ಟಿ ಪರಿಷ್ಕರಣೆ, ಬಿಲ್‌ ಪಾವತಿ ಮತ್ತಿತರ ಸಂದರ್ಭಗಳಲ್ಲಿ ಹಿರಿಯ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ನಡುವೆ ವಾಟ್ಸ್ ಆ್ಯಪ್‌ ಮೂಲಕ ವಿನಿಮಯವಾಗಿರುವ ಸಂದೇಶಗಳನ್ನು ಐ.ಟಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ. 1,500 ಪುಟಗಳಿಗೂ ಹೆಚ್ಚು ಮಾಹಿತಿಯನ್ನು ತನಿಖಾ ತಂಡ ಡೌನ್‌ಲೋಡ್‌ ಮಾಡಿದ್ದು, ಬೃಹತ್‌ ಕಾಮಗಾರಿಗಳ ಗುತ್ತಿಗೆಯ ಸಮಯದಲ್ಲಿ ತೆರೆಮರೆಯಲ್ಲಿ ನಡೆಯುತ್ತಿದ್ದ ‘ವ್ಯವಹಾರ’ದ ಕುರಿತು ಪ್ರಬಲ ಸಾಕ್ಷ್ಯಗಳು ಲಭಿಸಿವೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬೃಹತ್‌ ಕಾಮಗಾರಿಗಳ ಗುತ್ತಿಗೆಯಲ್ಲಿ ತೆರಿಗೆ ವಂಚನೆ, ಭ್ರಷ್ಟಾಚಾರ ಮತ್ತು ಅಕ್ರಮ ಹಣದ ವರ್ಗಾವಣೆ ಆರೋಪಗಳ ಕುರಿತು ಐ.ಟಿ ಇಲಾಖೆ ತನಿಖೆ ನಡೆಸುತ್ತಿದೆ. ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ಅತ್ಯಾಪ್ತ ಹಾಗೂ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಸಿಬ್ಬಂದಿಯಾಗಿದ್ದ ಆಯನೂರು ಉಮೇಶ್‌, ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಸಹಪಾಠಿ ಅರವಿಂದ್‌, ಬೃಹತ್‌ ಕಾಮಗಾರಿಗಳ ಗುತ್ತಿಗೆ ಪಡೆದಿರುವ 31 ಗುತ್ತಿಗೆದಾರರು, ಹಲವು ಮಂದಿ ಲೆಕ್ಕಪರಿಶೋಧಕರ ಮೇಲೆ ಗುರುವಾರ ದಾಳಿ ಮಾಡಿದ್ದ ಐ.ಟಿ ಅಧಿಕಾರಿಗಳು, ಸತತ ಮೂರು ದಿನ ಶೋಧ ನಡೆಸಿದ್ದಾರೆ.

ಆಯನೂರು ಉಮೇಶ್‌, ಅರವಿಂದ್‌ ಹಾಗೂ ಮುಖ್ಯಮಂತ್ರಿಯವರ ಸಚಿವಾಲಯದಲ್ಲಿದ್ದ ಯಡಿಯೂರಪ್ಪ ಅವರ ಸಂಬಂಧಿ ಶಶಿಧರ ಮರಡಿ ಎಂಬುವವರ ಜತೆ ಜಲ ಸಂಪನ್ಮೂಲ ಇಲಾಖೆಯ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಮುಖ್ಯ ಎಂಜಿನಿಯರ್‌ಗಳು, ಲೋಕೋಪಯೋಗಿ ಇಲಾಖೆಯ ಕೆಲವು ಮುಖ್ಯ ಎಂಜಿನಿಯರ್‌ಗಳು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ನಿರ್ದೇಶಕರ ಹುದ್ದೆಯಲ್ಲಿದ್ದ ಅಧಿಕಾರಿಗಳು, ಆದಾಯ ತೆರಿಗೆ ಇಲಾಖೆಯ ದಾಳಿಗೊಳಗಾಗಿರುವ ಗುತ್ತಿಗೆದಾರರು, ಅವರ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಹಲವು ಮಂದಿ ವಾಟ್ಸ್‌ ಆ್ಯಪ್‌ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವಿವರಗಳನ್ನು ಪರಿಶೀಲಿಸುತ್ತಿರುವ ಆದಾಯ ತೆರಿಗೆ ಇಲಾಖೆಯ ತನಿಖಾ ತಂಡ, ಹಣ ಸಂದಾಯಕ್ಕೆ ಸಂಬಂಧಿಸಿದಂತೆ ಇರುವ ಮಾಹಿತಿಯನ್ನು ಪ್ರತ್ಯೇಕಿಸಿ ಪಟ್ಟಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಹೆಜ್ಜೆ ಹೆಜ್ಜೆಗೂ ಸಂಪರ್ಕ: ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಅರಂಭವಾಗುತ್ತಿದ್ದಂತೆಯೇ ಗುತ್ತಿಗೆದಾರರು ಉಮೇಶ್‌, ಶಶಿಧರ ಮರಡಿ ಮತ್ತು ಅರವಿಂದ್‌ ಅವರನ್ನು ಸಂಪರ್ಕಿಸುತ್ತಿದ್ದರು. ಮುಂದೇನು ಮಾಡಬೇಕು ಎಂಬುದನ್ನು ವಾಟ್ಸ್‌ ಆ್ಯಪ್‌ ಸಂದೇಶದಲ್ಲಿ ಅವರು ಸೂಚಿಸುತ್ತಿದ್ದರು. ಕಾರ್ಯಾದೇಶ ವಿತರಣೆಯವರೆಗೂ ಅದೇ ಮಾರ್ಗದಲ್ಲಿ ಸಂಭಾಷಣೆ ನಡೆಯುತ್ತಿತ್ತು. ಯಾವ ಅಧಿಕಾರಿಯನ್ನು ಸಂಪರ್ಕಿಸಬೇಕು? ಅಲ್ಲಿ ಏನು ಮಾಡಬೇಕು? ಎಂಬ ಸಂದೇಶಗಳೂ ವಾಟ್ಸ್‌ ಆ್ಯಪ್‌ ಮೂಲಕವೇ ತಲುಪುತ್ತಿದ್ದವು. ಬಿಲ್‌ ಪಾವತಿ ಸೇರಿದಂತೆ ಇತರ ಪ್ರಮುಖ ಕೆಲಸಗಳ ಸಂದರ್ಭದಲ್ಲೂ ಇದೇ ಮಾದರಿಯ ‘ವ್ಯವಹಾರ’ ನಡೆದಿ
ರುವುದು ಕಂಡುಬಂದಿದೆ ಎಂಬ ಮಾಹಿತಿ ಲಭಿಸಿದೆ.

‘ಬೃಹತ್‌ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿದ್ದ ಹಿರಿಯ ಅಧಿಕಾರಿಗಳು, ಇಲಾಖಾ ಮುಖ್ಯಸ್ಥರು ಕೂಡ ಇದೇ ರೀತಿ ಮೂವರ ಜತೆ ಮಾತುಕತೆ ನಡೆಸುತ್ತಿದ್ದರು. ಕೆಲವು ಅಧಿಕಾರಿಗಳು ನೇರವಾಗಿಯೇ ‘ಹಣ ತಲುಪಿದೆಯೆ?’ ‘ಇನ್ನು ಮುಂದುವರಿಯಬಹುದೆ?’ ಎಂದು ನಿರ್ದಿಷ್ಟ ಮೊತ್ತ ಉಲ್ಲೇಖಿಸಿ ಖಚಿತಪಡಿಸಿಕೊಂಡಿದ್ದಾರೆ. ಕೆಲವರು ಸಂಖ್ಯೆಯನ್ನು ಮಾತ್ರ ಉಲ್ಲೇಖಿಸಿ, ಮುಂದೆ ಸಂಕೇತಾಕ್ಷರಗಳು, ಕೆಲವು ರಹಸ್ಯ ಪದಗಳನ್ನು (ಕೋಡ್‌ ವರ್ಡ್‌) ಬಳಸಿ ಮಾತುಕತೆ ನಡೆಸಿರುವ ಮಾಹಿತಿವಾಟ್ಸ್‌ಆ್ಯಪ್‌ ಸಂದೇಶಗಳಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರತ್ಯೇಕ ತನಿಖೆಗೆ ಶಿಫಾರಸು ಸಾಧ್ಯತೆ: ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ, ಅಘೋಷಿತ ಆದಾಯದ ಹೊರತಾದ ಅಕ್ರಮಗಳ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ.

ಈ ಸಂಭಾಷಣೆಗಳಲ್ಲಿ ಭಾಗಿಯಾಗಿರುವ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳನ್ನು ವಿಚಾರಣೆ ನಡೆಸುವುದಕ್ಕೂ ಐ.ಟಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಹಂತ ಹಂತವಾಗಿ ನೋಟಿಸ್‌ ಜಾರಿಗೆ ಚಿಂತನೆ ನಡೆದಿದೆ ಎಂದು ಗೊತ್ತಾಗಿದೆ.

ಅಳಿಸಿದ ಸಂದೇಶಗಳಲ್ಲೇನಿದೆ?

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಮೊಬೈಲ್‌ಗಳ ಪೈಕಿ ಕೆಲವರು ತಮ್ಮ ವಾಟ್ಸ್‌ಆ್ಯಪ್‌ ಸಂಭಾಷಣೆಯ ವಿವರಗಳನ್ನು ಅಳಿಸಿ ಹಾಕಿರುವುದು ಕಂಡುಬಂದಿದೆ. ಕೆಲವರು ನಿರ್ದಿಷ್ಟ ವ್ಯಕ್ತಿಯ ಜತೆಗಿನ ಮಾತುಕತೆಯ ಕೆಲವು ಅಂಶಗಳನ್ನು ಅಳಿಸಿ ಹಾಕಿದ್ದಾರೆ. ಅಳಿಸಿದ ಸಂದೇಶಗಳಲ್ಲಿ ಏನು ಮಾಹಿತಿ ಇತ್ತು ಎಂಬುದನ್ನು ಅರಿಯಲು ತಂತ್ರಜ್ಞರ ನೆರವು ಪಡೆಯಲು ಆದಾಯ ತೆರಿಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಸಚಿವರ ಕಚೇರಿಗಳಿಗೂ ನಂಟು?

ಆಯನೂರು ಉಮೇಶ್‌, ಅರವಿಂದ್‌ ಮತ್ತು ಶಶಿಧರ ಮರಡಿ ಜತೆಗೆ ಕಾಮಗಾರಿಗಳ ಗುತ್ತಿಗೆಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮೂಲಕ ನಡೆದಿರುವ ಮಾತುಕತೆಗಳಲ್ಲಿ ರಾಜ್ಯದ ಕೆಲವು ಸಚಿವರ ಕಚೇರಿಯ ಸಿಬ್ಬಂದಿಯೂ ಭಾಗಿಯಾಗಿದ್ದಾರೆ. ಸಚಿವರ ಕಚೇರಿಯಲ್ಲಿನ ಕೆಲವು ಸಿಬ್ಬಂದಿ ನಿರಂತರವಾಗಿ ಈ ಮೂವರ ಜತೆ ಸಂಪರ್ಕದಲ್ಲಿದ್ದು, ಕಾಮಗಾರಿಗಳ ಗುತ್ತಿಗೆ ಕುರಿತು ಚರ್ಚಿಸಿರುವುದು ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT