ಶುಕ್ರವಾರ, ಅಕ್ಟೋಬರ್ 22, 2021
29 °C

ಐಟಿ ದಾಳಿ: ಶಕ್ತಿ ಕೇಂದ್ರದಲ್ಲಿ ಪ್ರಭಾವಿಯಾಗಿದ್ದ ಚಾಲಕ ಉಮೇಶ್‌ನ ಹಿನ್ನೆಲೆ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಗುರುವಾರ ನಡೆಸಿದ ಶೋಧದ ಕೇಂದ್ರ ಬಿಂದುವಾದ ಉಮೇಶ್‌ ಬಿಎಂಟಿಸಿಯ ಪುಟ್ಟೇನಹಳ್ಳಿ ಡಿಪೊದ ಚಾಲಕ ಕಂ. ನಿರ್ವಾಹಕ. ಬಸ್‌ ಓಡಿಸುವುದನ್ನು ಬಿಟ್ಟು ಶಕ್ತಿ ಕೇಂದ್ರದತ್ತ ಜಿಗಿದ ಅವರು ಕೆಲವು ವರ್ಷಗಳಿಂದ ‘ಪ್ರಭಾವಿ’ ವ್ಯಕ್ತಿಯಾಗಿ ಬೆಳೆದಿದ್ದರು.

ಶಿವಮೊಗ್ಗ ಜಿಲ್ಲೆ ಆಯನೂರಿನ ನಿವಾಸಿ ಉಮೇಶ್‌ 2007ರಲ್ಲಿ ಬಿಎಂಟಿಸಿಯ ಚಾಲಕ ಕಂ ನಿರ್ವಾಹಕ ಹುದ್ದೆಗೆ ಆಯ್ಕೆಯಾದರು. ಆದರೆ, ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡಿದ್ದು ಒಂದೇ ವರ್ಷ. 2008ರಲ್ಲಿ ಆಗಿನ ಶಿವಮೊಗ್ಗ ಸಂಸದ ಆಯನೂರು ಮಂಜುನಾಥ ಅವರ ಆಪ್ತ ಸಹಾಯಕನಾಗಿ ನಿಯೋಜನೆ ಮೇರೆಗೆ ತೆರಳಿದ್ದರು. ಮತ್ತೆ ಮರಳಿ ಮಾತೃ ಇಲಾಖೆಗೆ ಹೋಗಲೇ ಇಲ್ಲ.

ಅನ್ಯ ಕಾರ್ಯನಿಮಿತ್ತ ನಿಯೋಜನೆಯಲ್ಲೇ (ಒಒಡಿ) ಮುಂದುವರಿದ ಉಮೇಶ್‌, ನಂತರ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಆಪ್ತ ಸಹಾಯಕರಾದರು. ಜೆಡಿಎಸ್‌–ಬಿಜೆಪಿ ಸಮ್ಮಿಶ್ರ ಸರ್ಕಾರದಿಂದಲೂ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಂತೆಯೇ ಕೆಲಸ ಮಾಡುತ್ತಿದ್ದಾರೆ.

2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಮುಖ್ಯಮಂತ್ರಿ ಸಚಿವಾಲಯದ ಸಿಬ್ಬಂದಿಯಾಗಿ ಒಒಡಿ ಮೇಲೆ ನೇಮಕಗೊಂಡರು. ಯಡಿಯೂರಪ್ಪ ರಾಜೀನಾಮೆ ಬಳಿಕವೂ ಉಮೇಶ್‌ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದಲ್ಲಿದ್ದರೂ ಯಡಿಯೂರಪ್ಪ ಅವರ ಮಗ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಣತಿಯಂತೆ ಕೆಲಸ ಮಾಡುತ್ತಿರುವ ಆರೋಪ ಹಲವು ಬಾರಿ ಕೇಳಿಬಂದಿತ್ತು.

ಧವಳಗಿರಿ ಮೇಲೆ ಪ್ರೀತಿ

ಬಿಎಂಟಿಸಿಯಿಂದ ಮಾಸಿಕ ₹ 32,000 ನಿವ್ವಳ ವೇತನ ಪಡೆಯುವ ಉಮೇಶ್‌, ಬೆಂಗಳೂರಿನ ನಾಗಸಂದ್ರ ಬಳಿ ಬೃಹತ್‌ ಮನೆಯೊಂದನ್ನು ನಿರ್ಮಿಸಿರುವುದನ್ನು ಆದಾಯ ತೆರಿಗೆ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಯಡಿಯೂರಪ್ಪ ಅವರ ಮನೆಯ ಹೆಸರು ‘ಧವಳಗಿರಿ’. ಅವರ ಕುಟುಂಬದವರು ಹೊಂದಿರುವ ಕಂನಿಯ ಹೆಸರೂ ‘ಧವಳಗಿರಿ ಡೆವಲಪರ್ಸ್‌’. ಅದೇ ರೀತಿ ಉಮೇಶ್‌ ತನ್ನ ಮನೆಗೆ ‘ಧವಳಗಿರಿ’ ಎಂದು ಹೆಸರಿಟ್ಟಿದ್ದಾರೆ.

‘ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಪಡೆಯುವ ಗುತ್ತಿಗೆದಾರರ ಮೇಲೆ ದಾಳಿ ಮಾಡಿ, ಶೋಧ ನಡೆಸುವುದು ಸಾಮಾನ್ಯ. ಆದರೆ, ಅವರ ಜತೆಗೆ ಉಮೇಶ್‌ ಮೇಲೂ ದಾಳಿ ನಡೆದಿರುವುದು ಈ ಬಾರಿಯ ಕಾರ್ಯಾಚರಣೆಯ ವಿಶೇಷ. ಗುತ್ತಿಗೆದಾರರು ಮತ್ತು ಅಧಿಕಾರಸ್ಥರ ನಡುವೆ ಉಮೇಶ್‌ ಕೊಂಡಿಯಂತೆ ಕೆಲಸ ಮಾಡಿರುವ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆಗೆ 120 ವಾಹನ

ಗುರುವಾರ ನಡೆದ ಶೋಧ ಕಾರ್ಯಾಚರಣೆಗೆ ಆದಾಯ ತೆರಿಗೆ ಇಲಾಖೆ ಕರ್ನಾಟಕ ಮತ್ತು ಗೋವಾ ವಲಯದ ಅಧಿಕಾರಿಗಳು ಹಲವು ದಿನಗಳಿಂದ ಸಿದ್ಧತೆ ನಡೆಸಿದ್ದರು. ಬೃಹತ್‌ ಕಾರ್ಯಾಚರಣೆಗಾಗಿ 120 ವಾಹನಗಳನ್ನು ಬಾಡಿಗೆಗೆ ಪಡೆಯಲಾಗಿತ್ತು ಎಂಬ ಮಾಹಿತಿ ಲಭಿಸಿದೆ.

ಬುಧವಾರವೇ ಅಧಿಕಾರಿಗಳೆಲ್ಲರೂ ತಮ್ಮ ಕಾರ್ಯಾಚರಣೆಯ ಸಮೀಪದ ಸ್ಥಳಗಳನ್ನು ತಲುಪಿದ್ದರು. ಗುರುವಾರ ನಸುಕಿನಿಂದಲೇ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು