ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಮುಜುಗರ ತಪ್ಪಿಸಿಕೊಳ್ಳಲು ಆರ್‌ಎಸ್‌ಎಸ್‌ ಹೆಸರು ಹೇಳುತ್ತಿರುವ ಸಿದ್ದರಾಮಯ್ಯ'

Last Updated 13 ಫೆಬ್ರುವರಿ 2021, 9:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಮ್ಮ ನಾಯಕತ್ವಕ್ಕೆ ಎದುರಾಗಿರುವ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಕುರುಬ ಸಮಾಜದ ಹೋರಾಟದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌)ವಿದೆಯೆಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್‌ ತಿರುಗೇಟು ನೀಡಿದರು.

ನೂತನ ಕೈಗಾರಿಕಾ ನೀತಿ 2020–25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೂ ಮೊದಲು ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಿದ್ದರಾಮಯ್ಯ ಅವರಿಗೆ ಅಭದ್ರತೆ ಕಾಡುತ್ತಿದೆ. ಕುರುಬರ ನಾಯಕ ಎಂದು ಬಿಂಬಿಸಿಕೊಂಡಿದ್ದ ಅವರಿಗೆ ಲಕ್ಷಾಂತರ ಜನ ಸೇರಿದ್ದ ಸಮಾವೇಶಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆ ಸಮಾಜದ ಸ್ವಾಮಿಗಳು ಖುದ್ದು ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಆಹ್ವಾನ ನೀಡಿದರೂ ಹೋಗಲಿಲ್ಲ. ಇದರಿಂದಾದ ಮುಜುಗರ ತಪ್ಪಿಸಿಕೊಳ್ಳಲು ಆರ್‌ಎಸ್‌ಎಸ್‌ ಹೆಸರು ಹೇಳುತ್ತಿದ್ದಾರೆ. ಆರ್‌ಎಸ್‌ಎಸ್ ಪಾತ್ರವಿದೆ ಎನ್ನುವುದನ್ನು ಪಾದಯಾತ್ರೆ ಆರಂಭವಾಗುವುದಕ್ಕಿಂತ ಮೊದಲೇ ಯಾಕೆ ಹೇಳಲಿಲ್ಲ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಎಲ್ಲದಕ್ಕೂ ಆರ್‌ಎಸ್‌ಎಸ್‌ ಅನ್ನು ಗುರಿಯಾಗಿರಿಸಿ ಹೇಳಿಕೆ ನೀಡುತ್ತಿದ್ದಾರೆ, ಮೊದಲು ಇದನ್ನು ನಿಲ್ಲಿಸಬೇಕು. ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಈ ರೀತಿಯ ಅಪಪ್ರಚಾರ ಮಾಡಬಾರದು’ ಎಂದರು.

ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಗಳ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್‌ ‘ಮೀಸಲಾತಿ ಹೋರಾಟ ಇಂದು, ನಿನ್ನೆಯದಲ್ಲ.ಆಯಾ ಸಮಾಜದ ಸ್ವಾಮೀಜಿಗಳು ಹಾಗೂ ಹಿರಿಯರು ಇದಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಶೀಘ್ರದಲ್ಲಿ ಮುಖ್ಯಮಂತ್ರಿ ಈ ಕುರಿತು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಏಮ್ಸ್‌ ಎಲ್ಲಿ ಸ್ಥಾಪಿಸಬೇಕು ಎನ್ನುವುದರ ಬಗ್ಗೆ ತೀರ್ಮಾನವಾಗಿಲ್ಲ. ಈ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಎಲ್ಲಿಯಾದರೂ ಸ್ಥಾಪನೆಯಾಗಲಿ; ಮೊದಲು ಕರ್ನಾಟಕಕ್ಕೆ ಬರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT