ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡನಾಡು ಜಗತ್ತಿಗೆ ಕೊಟ್ಟ ಕೊಡುಗೆ ಟಿಪ್ಪು: ಲೇಖಕ ಟಿ. ಗುರುರಾಜ್‌

ಕನ್ನಡ ನಾಡು ನುಡಿ– ಟಿಪ್ಪು ಕೊಡುಗೆಗಳು ಗೋಷ್ಠಿಯಲ್ಲಿ ಅಭಿಮತ
Last Updated 8 ಜನವರಿ 2023, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಇಡೀ ಜಗತ್ತಿಗೆ ಕನ್ನಡ ನಾಡು ಕೊಟ್ಟ ಬಹುದೊಡ್ಡ ಕೊಡುಗೆ ಎಂದರೆ ಟಿಪ್ಪು ಸುಲ್ತಾನ್‌ ಎಂದು ಎದೆಯುಬ್ಬಿಸಿ ಹೇಳುವ ಕಾಲ ನಮ್ಮ ಮುಂದಿದೆ’ ಎಂದು ಲೇಖಕ ಟಿ. ಗುರುರಾಜ್‌ ಅಭಿಪ್ರಾಯಪಟ್ಟರು.

ನಗರದ ಕೆ.ಆರ್‌. ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಆವರಣದಲ್ಲಿ ಆಯೋಜಿಸಲಾಗಿದ್ದ, ‘ಜನ ಸಾಹಿತ್ಯ ಸಮ್ಮೇಳನ’ದ ‘ಕನ್ನಡ ನಾಡು ನುಡಿ– ಟಿಪ್ಪು ಕೊಡುಗೆಗಳು’ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಟಿ.ಗುರುರಾಜ್ ಅವರು ಬರೆದ ‘ನಮ್ಮ ಟಿಪ್ಪು– ವದಂತಿ ಮತ್ತು ಸತ್ಯ ಸಂಗತಿ’ ಹಾಗೂ ಲಿಂಗದೇವರು ಹಳೆಮನೆ ಅವರು ಸಂಗ್ರಹಿಸಿದ ‘ಧೀರ ಟಿಪ್ಪು ಲಾವಣಿಗಳು’ ಪುಸ್ತಕಗಳನ್ನು ಲೇಖಕ ಪುರುಷೋತ್ತಮ ಬಿಳಿಮಲೆ ಅವರು ಬಿಡುಗಡೆ ಮಾಡಿದರು.

‘14ನೇ ದೊರೆ ಚಿಕ್ಕದೇವರಾಜ ಒಡೆಯರ್‌ ಅವರು ಔರಂಗಜೇಬ್‌ನ ಸಾಮಂತಿಕೆಯನ್ನು ಒಪ್ಪಿಕೊಂಡು, ಆತ
ದಯಪಾಲಿಸಿದ ಪರ್ಷಿಯನ್‌ ಮೊಹರನ್ನು ಮೈಸೂರು ಸಂಸ್ಥಾನದ ರಾಜಮುದ್ರೆಯನ್ನಾಗಿ ಮಾಡಿಕೊಂಡರು. 25ನೇ ದೊರೆಯಾಗಿದ್ದ ಜಯ ಚಾಮರಾಜ ಒಡೆಯರ್‌ ಕಾಲದವರೆಗೂ ರಾಜ ಮೊಹರು ಪರ್ಷಿಯನ್‌ ಲಿಪಿಯಲ್ಲಿತ್ತು. ಈ ಬಗ್ಗೆ ಯಾಕೆ ಪ್ರಶ್ನೆ ಮಾಡುವುದಿಲ್ಲ? ಏಕೆಂದರೆ, ಮೈಸೂರು ರಾಜರು ಸಾಬರಾಗಿರಲಿಲ್ಲ’ ಎಂದರು.

‘ಟಿಪ್ಪುವಿನ ಕಾಲದಲ್ಲಿ ತ್ರಿಶೂಲ ಹಾಗೂ ಲಕ್ಷ್ಮೀದೇವಿ ಇರುವ ನಾಣ್ಯವನ್ನು ಟಂಕಿಸಲಾಗುತ್ತಿತ್ತು. ಜೊತೆಗೆ ಆತನ ಉಂಗುರದಲ್ಲಿ ದೇವನಾಗರಿ ಲಿಪಿಯನ್ನು ರಾಮ ಎಂಬ ಮುದ್ರೆ ಇತ್ತು. ಟಿಪ್ಪು ಮತಾಂಧ ಆಗಿದ್ದರೆ, ಇವೆಲ್ಲಾ ಆಗುತ್ತಿತ್ತೇ’ ಎಂದು ಲೇಖಕ ಖಲೀಲ್‌ ಪಾಶಾ ಪ್ರಶ್ನಿಸಿದರು.

‘ಇತಿಹಾಸ ತಿರುಚುವವರು ಅವಿವೇಕಿಗಳು’
‘ಕರ್ನಾಟಕದ ಒಬ್ಬ ವಯೋವೃದ್ಧ ರಾಜಕಾರಣಿ ಡಿ.ಎಚ್‌. ಶಂಕರಮೂರ್ತಿ ಟಿಪ್ಪುವಿಗೆ ಕನ್ನಡ ದ್ರೋಹಿ ಎನ್ನುವ ಪಟ್ಟವನ್ನು ಕಟ್ಟಿದರು. ಜ್ಞಾನಪೀಠ ಪ್ರಶಸ್ತಿಗಾಗಿ ಹಪಹಪಿಸುತ್ತಿರುವ ವಯೋವೃದ್ಧ ಡಾ. ಎಸ್‌.ಎಲ್‌. ಭೈರಪ್ಪ ಇದನ್ನು ಅನುಮೋದಿಸಿದರು. ಕ್ಷಮೆ ಇರಲಿ, ಇತಿಹಾಸ ತಿರುಚುವವರು ಎಷ್ಟೇ ದೊಡ್ಡವರಾದರು ಅವರು ಅವಿವೇಕಿಗಳು’ ಎಂದು ಟಿ. ಗುರುರಾಜ್‌ ಅವರು ಟೀಕಿಸಿದರು.

‘ಈ ಇಬ್ಬರು ಅವಿವೇಕಿಗಳ, ಹೊಣೆಗೇಡಿಗಳ ಮಾತನ್ನು ಮಿದುಳಿಲ್ಲದ ಹುಲಿ, ಕರಡಿ, ಸಿಂಹಗಳು, ಇವರನ್ನು ಸಣ್ಣ ಸಣ್ಣ ಪರದೆಗಳ ಮೇಲೆ ಸಮರ್ಥಿಸುವ ವೃಶಾಂಕ, ಶಶಾಂಕಗಳು, ಸುಳ್ಳುಗಳನ್ನು ಹೇಳಿಯೇ ಹಣ ಮಾಡಿಕೊಳ್ಳುತ್ತಿರುವ ಸೂಲಿಬೆಲೆಗಳು ಮತ್ತು ಆಳುವವರ ಕೃಪಾಶೀರ್ವಾದಕ್ಕೆ ನಾಲಿಗೆ ಚಾಚಿಕೊಂಡಿರುವ ಪ್ರಸಾದಾಕಾಂಕ್ಷಿ ತೀರ್ಥಗಳು ಟಿಪ್ಪುವಿಗೆ ಕನ್ನಡದ ದ್ರೋಹಿ ಎನ್ನುವ ಪಟ್ಟವನ್ನು ಮತ್ತೆ ಮತ್ತೆ ಕಟ್ಟುವ ಮೂಲಕ ತಮ್ಮ ಪಟ್ಟಾಭಿಷೇಕದ ದಾರಿಗಳನ್ನು ಸುಗಮ ಮಾಡಿಕೊಳ್ಳುತ್ತಾ ಬಂದರು’ ಎಂದು ಹೇಳಿದರು.

‘ಇತಿಹಾಸಕ್ಕೆ ಮಾಡಿದ ಅತ್ಯಾಚಾರ’
‘ಹೈದರ್‌ ಮತ್ತು ಟಿಪ್ಪುವನ್ನು ಎಲ್ಲರೂ ವಿಮರ್ಶೆ ಮಾಡಬಹುದು. ಆದರೆ, ಕಳೆದ ಕೆಲ ವರ್ಷಗಳಿಂದ ಟಿಪ್ಪುವಿನ ಮೇಲೆ ಮಾಡುತ್ತಿರುವ ಆರೋಪಗಳು, ಅದು ಇತಿಹಾಸಕ್ಕೆ ಮಾಡುವ ಅಪಚಾರ ಮಾತ್ರವಲ್ಲ; ಅತ್ಯಾಚಾರ’ ಎಂದು ಲೇಖಕ ಪುರುಷೋತ್ತಮ ಬಿಳಿಮಲೆ ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಟಿಪ್ಪು– ವದಂತಿ ಮತ್ತು ಸತ್ಯ ಸಂಗತಿ’ ಪುಸ್ತಕದ ಕುರಿತು ಮಾತನಾಡಿದ ಅವರು, ‘ಟಿಪ್ಪುವಿನ ಮೇಲೆ ಯಾವೆಲ್ಲಾ ಸುಳ್ಳು ಸುದ್ದಿ ಹಬ್ಬಿವೆ. ಅದನ್ನೆಲ್ಲಾ ವಾಟ್ಸ್‌ಆ್ಯಪ್‌ ಮೂಲಕವೋ ಸ್ನೇಹಿತರ ಮೂಲಕವೋ ಸಂಗ್ರಹಿಸಿದ ಗುರುರಾಜ್‌ ಅವರು, ಎಲ್ಲಾ ವದಂತಿಗಳಿಗೆ ಈ ಪುಸ್ತಕದಲ್ಲಿ ಸಮರ್ಪಕವಾಗಿ ಉತ್ತರ ಕೊಟ್ಟಿದ್ದಾರೆ’ ಎಂದರು.

*
ಟಿಪ್ಪು ತನ್ನನ್ನು ತಾನು ‘ಪೌರ ಟಿಪ್ಪು’ ಎಂದು ಕರೆದುಕೊಂಡಿದ್ದ. ವಿಶ್ವದ ರಾಜಪ್ರಭುತ್ವದ ಚರಿತ್ರೆಯಲ್ಲಿ ಮತ್ತೊಬ್ಬ ರಾಜ, ತನ್ನನ್ನು ತಾನು ಪೌರ ಎಂದು ಕರೆದುಕೊಂಡಿಲ್ಲ.
-ಟಿ.ಗುರುರಾಜ್‌, ಲೇಖಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT