ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

56 ಸರ್ಕಾರಿ ಸೇವೆ: ಮನೆ ಬಾಗಿಲಿಗೆ ಜನಸೇವಕ

Last Updated 1 ನವೆಂಬರ್ 2021, 14:41 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಸರ್ಕಾರದ ಎಂಟು ಇಲಾಖೆಗಳ 56 ಸೇವೆಗಳು ಇನ್ನು ಜನರ ಮನೆ ಬಾಗಿಲಿನಲ್ಲೇ ಬರಲಿವೆ. ಜನರು ನಿಗದಿಪಡಿಸಿದ ಸಮಯಕ್ಕೆ ‘ಜನಸೇವಕರು’ ಅರ್ಜಿ ನಮೂನೆ ಹಿಡಿದು ಮನೆ ಬಾಗಿಲಿಗೇ ಬರಲಿದ್ದಾರೆ.

‘ಜನಸೇವಕ’ ಯೋಜನೆಯನ್ನು ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪ್ರದೇಶದಲ್ಲೂ ಅನುಷ್ಠಾನಕ್ಕೆ ತರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಚಾಲನೆ ನೀಡಿದರು. ರಾಜಾಜಿನಗರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದ್ದ ಈ ಕಾರ್ಯಕ್ರಮ ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಿದೆ. 2022ರ ಜನವರಿ 26ರೊಳಗೆ ರಾಜ್ಯದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ.

‘ಜನಸೇವಕ’ ಯೋಜನೆ ಅನುಷ್ಠಾನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ‘ಸರ್ಕಾರಿ ಕಚೇರಿಗಳಲ್ಲಿ ಸುಲಭವಾಗಿ ಜನರ ಕೆಲಸ ಆಗುತ್ತಿಲ್ಲ. ಜನರು ಮತ್ತು ಸರ್ಕಾರದ ನಡುವೆ ಅಡ್ಡಗೋಡೆ ಸೃಷ್ಟಿಯಾಗಿದೆ. ಹಣ ತೆತ್ತು ಸರ್ಕಾರಿ ಸೇವೆಗಳನ್ನು ಪಡೆಯಬೇಕಾದ ಸ್ಥಿತಿ ಇದೆ. ಇವೆಲ್ಲದಕ್ಕೂ ಕಡಿವಾಣ ಹಾಕುವ ಉದ್ದೇಶದಿಂದ ಜನಸೇವಕ ಯೋಜನೆ ಜಾರಿಗೆ ತರಲಾಗಿದೆ’ ಎಂದರು.

ಇದೊಂದು ಕ್ರಾಂತಿಕಾರಿ ಕಾರ್ಯಕ್ರಮ. ಬಿಬಿಎಂಪಿ ವ್ಯಾಪ್ತಿಯಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಗೆ ಬರಬೇಕು. ಅಧಿಕಾರಿಗಳು ಈ ಯೋಜನೆ ಅನುಷ್ಠಾನದಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ಸ್ಪಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದು ಸೂಚಿಸಿದರು.

ಮೇಲುಸ್ತುವಾರಿಗೆ ಸಮಿತಿ: ಜನಸೇವಕರಾಗಿ ನಿಯುಕ್ತಿಗೊಂಡವರು ಕೂಡ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಯೋಜನೆಯ ಅನುಷ್ಠಾನದ ಮೇಲುಸ್ತುವಾರಿಗೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ಹಂತದಲ್ಲೂ ನಿಗಾ ಇಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಇದು ಜನಸ್ನೇಹಿ ಆಡಳಿತದ ಒಂದು ಭಾಗ. ಈ ಯೋಜನೆ ಯಶಸ್ವಿಯಾದರೆ ರಾಜ್ಯದ ಜನರ ಆದಾಯ ಹೆಚ್ಚಳಕ್ಕೆ ದಾರಿಯಾಗಲಿದೆ. ಇದರಿಂದ ಸರ್ಕಾರದ ವರಮಾನವೂ ಹೆಚ್ಚುತ್ತದೆ. ಜನರೇ ಸರ್ಕಾರದ ನಿಜವಾದ ಮಾಲೀಕರು. ಈಗ ಸರ್ಕಾರ ತನ್ನ ಮಾಲೀಕರ ಮನೆ ಬಾಗಿಲಿಗೆ ಹೋಗಿ ಸೇವೆ ಒದಗಿಸುವ ಪ್ರಯತ್ನ ಆರಂಭಿಸಿದೆ ಎಂದರು.

ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಬಿ. ಶ್ರೀರಾಮುಲು, ಬಿ.ಸಿ.ನಾಗೇಶ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಎಸ್‌. ಸುರೇಶ್‌ ಕುಮಾರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಉಪಸ್ಥಿತರಿದ್ದರು.

ಜನಸೇವಕ ಅನುಷ್ಠಾನ ಹೇಗೆ?

ಜನರು ಸರ್ಕಾರಿ ಸೇವೆ ಪಡೆಯಲು 080–44554455 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು ಅಥವಾ ಮೊಬೈಲ್‌ ಒನ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಸಬಹುದು ಅಥವಾ www.janasevaka.karnataka.gov.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಬಹುದು.

ಯಾವ ಸೇವೆ ಅಗತ್ಯವಿದೆ? ಯಾವ ಸಮಯಕ್ಕೆ ಜನಸೇವಕರು ಮನೆಗೆ ಬರಬೇಕು ಎಂಬುದನ್ನೂ ನಿಗದಿಪಡಿಸಬೇಕು. ನಿರ್ದಿಷ್ಟ ಸಮಯಕ್ಕೆ ಜನಸೇವಕರು ಅರ್ಜಿ ನಮೂನೆಗಳೊಂದಿಗೆ ಮನೆ ಬಾಗಿಲಿಗೆ ಹೋಗುತ್ತಾರೆ. ಪೂರಕ ದಾಖಲೆ ಪಡೆದು ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿ ಅಪ್‌ಲೋಡ್ ಮಾಡುತ್ತಾರೆ. ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ನಿಗದಿತ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

ಪ್ರತಿ ಸೇವೆಗೆ ₹ 115 ಸೇವಾ ಶುಲ್ಕ ಮತ್ತು ಇಲಾಖೆಯ ಸೇವಾ ಶುಲ್ಕ ಪಾವತಿಸಬೇಕು. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೂ ಭೇಟಿಗೆ ಸಮಯ ನಿಗದಿಗೆ ಅವಕಾಶವಿದೆ.

ಇಲಾಖೆ;ಸೇವೆಗಳ ಸಂಖ್ಯೆ

ಆಧಾರ್‌;4

ಕಂದಾಯ ಇಲಾಖೆ;21

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ;9

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ;18

ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ;1

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ;1

ಪೊಲೀಸ್‌ ಇಲಾಖೆ;3

ಆಹಾರ ಇಲಾಖೆ;1

ಕುಂದುಕೊರತೆ ನಿವಾರಣೆಗೆ ಜನಸ್ಪಂದನ

ಸಾರ್ವಜನಿಕರ ಕುಂದುಕೊರತೆಗಳ ನಿವಾರಣೆಗಾಗಿ ರೂಪಿಸಿರುವ ಏಕೀಕೃತ ‘ಜನಸ್ಪಂದನ’ ವ್ಯವಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಸಾರ್ವಜನಿಕರು ದೂರವಾಣಿ ಸಂಖ್ಯೆ 1902ಗೆ ಕರೆಮಾಡಿ ಅಥವಾ ಜನಸ್ಪಂದನ ತಂತ್ರಾಂಶದಲ್ಲಿ ಲಾಗಿನ್‌ ಆಗಿ ತಮ್ಮ ಅಹವಾಲು ಸಲ್ಲಿಸಬಹುದು. 50 ಇಲಾಖೆಗಳ 600 ಕಾರ್ಯಕ್ರಮಗಳು, ಯೋಜನೆಗಳಿಗೆ ಸಂಬಂಧಿಸಿದಂತೆ ದೂರು ಸಲ್ಲಿಸಬಹುದು.

ಸ್ವಯಂಚಾಲಿತವಾಗಿ ಅಹವಾಲು/ ದೂರು ಸಂಬಂಧಿಸಿದ ಅಧಿಕಾರಿಗೆ ರವಾನೆಯಾಗುತ್ತದೆ. ಅದನ್ನು ವಿಲೇವಾರಿ ಮಾಡುವವರೆಗೂ ನಿಗಾ ಇಡುವ ವ್ಯವಸ್ಥೆ ರೂಪಿಸಲಾಗಿದೆ.

ಸಾರಿಗೆ ಇಲಾಖೆಯಲ್ಲಿ 30 ಆನ್‌ಲೈನ್‌ ಸೇವೆ

ಸಾರಿಗೆ ಇಲಾಖೆಯು ವಾಹನ ನೋಂದಣಿ, ಕಲಿಕಾ ಚಾಲನಾ ಪರವಾನಗಿ ಸೇರಿದಂತೆ 30 ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲಿದೆ. ಕಾಗದ ರಹಿತ ಮತ್ತು ಸಂಪರ್ಕ ರಹಿತ ಸೇವೆಗಳಿಗೆ ಮುಖ್ಯಮಂತ್ರಿ ಸೋಮವಾರ ಚಾಲನೆ ನೀಡಿದರು.

ವಾಹನ ಮಾರಾಟ ಮಳಿಗೆಗಳಲ್ಲೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆಯೂ ಜಾರಿಗೆ ಬಂದಿದೆ. ಪ್ರಾಯೋಗಿಕವಾಗಿ ರಾಜ್ಯದ ಹತ್ತು ಮಳಿಗೆಗಳಲ್ಲಿ ಈ ಸೇವೆ ಆರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT