ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸ್ವಪಕ್ಷೀಯರಿಂದಲೇ ಪ್ರಮಾಣಪತ್ರ: ಜೆಡಿಎಸ್‌

Last Updated 7 ಫೆಬ್ರುವರಿ 2023, 4:13 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ವಿರೋಧ ಪಕ್ಷದವರು ಟೀಕಿಸುವುದಕ್ಕಿಂತ, ಅವರ ಪಕ್ಷದವರೇ ಬಾಯಿ ಬಿಡುತ್ತಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ₹ 22,200 ಕೋಟಿ ಮೊತ್ತದ ಕಾಮಗಾರಿಗಳಲ್ಲಿನ ಅಕ್ರಮದ ಕುರಿತು ಬಿಜೆಪಿ ಶಾಸಕ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್‌ ಆರೋಪಿಸಿರುವುದು ಸರ್ಕಾರದ ಲಜ್ಜೆಗೇಡಿತನವನ್ನು ಬಹಿರಂಗಗೊಳಿಸಿದೆ’ ಎಂದು ಜೆಡಿಎಸ್‌ ಹೇಳಿದೆ.

ಜೆಡಿಎಸ್‌ನ ಅಧಿಕೃತ ಟ್ವಿಟರ್‌ ಖಾತೆಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಟ್ವಿಟರ್‌ ಖಾತೆಗೆ ಟ್ಯಾಗ್‌ ಮಾಡಿ ಸೋಮವಾರ ಸರಣಿ ಟ್ವೀಟ್‌ ಮಾಡಿದ್ದು, ‘ಟೆಂಡರ್‌ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕರೇ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಶಾಸಕರಿಗೆ ಈಗ ಏಕೆ ಜ್ಞಾನೋದಯವಾಗಿದೆ? ಕಮಿಷನ್‌ ದೊರೆಯದೇ ಇರುವುದಕ್ಕೋ ಅಥವಾ ಜನದ್ರೋಹದ ಬಗ್ಗೆ ತಾಳಲಾರದ ಒಡಲ ಆಕ್ರೋಶವೊ’ ಎಂದು ಪ್ರಶ್ನಿಸಿದೆ.

ಬೇಲಿಯೇ ಎದ್ದು ಹೊಲ ಮೇಯುವ ಹಾಗೆ ಸರ್ಕಾರವೇ ಮುಂದೆ ನಿಂತು ಅಕ್ರಮಗಳನ್ನು ನಡೆಸುತ್ತಿರುವುದಕ್ಕೆ ಇದಕ್ಕಿಂತ ಪ್ರಬಲ ಸಾಕ್ಷ್ಯ ಏನು ಬೇಕು? ಎಂದು ಕೇಳಿದೆ.

ಮೂರು ವರ್ಷಗಳಲ್ಲಿ ಬೆಂಗಳೂರು ನಗರದ ರಸ್ತೆ ಗುಂಡಿ ಮುಚ್ಚಲು ₹ 7,000 ಕೋಟಿ ವ್ಯಯಿಸಲಾಗಿದೆ ಎಂಬ ಮಾಧ್ಯಮ ವರದಿ ಕುರಿತು ಟ್ವೀಟ್‌ ಮಾಡಿದ್ದು, ‘23 ಸಾವಿರದಿಂದ 25 ಸಾವಿರ ಗುಂಡಿ ಮುಚ್ಚಲು ಅಷ್ಟೊಂದು ಹಣ ವ್ಯಯಿಸಿರುವುದಾಗಿ ಬಿಬಿಎಂಪಿ ಹೇಳಿದೆ. ಅಂದರೆ ಒಂದು ಗುಂಡಿ ಮುಚ್ಚಲು ₹ 28 ಲಕ್ಷದಿಂದ ₹ 30 ಲಕ್ಷ ವೆಚ್ಚ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ಇಷ್ಟು ಹಣ ವೆಚ್ಚವಾಗುತ್ತದೆ ಎಂದು ಜಗತ್ತಿಗೆ ತೋರಿಸಿಕೊಟ್ಟ ನಿಮ್ಮ ಸರ್ಕಾರದ ಭಂಡತನಕ್ಕೆ ಸನ್ಮಾನ ಮಾಡಬೇಕು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT