ಮಂಗಳವಾರ, ಡಿಸೆಂಬರ್ 7, 2021
24 °C

ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಬಿಜೆಪಿ ಯಾಕೆ ಮೌನ: ಜೆಡಿಎಸ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಬಿಜೆಪಿ ಯಾಕೆ ಮೌನವಹಿಸಿದೆ ಎಂದು ಜೆಡಿಎಸ್ ಪ್ರಶ್ನಿಸಿದೆ.

ಆರ್‌ಎಸ್‌ಎಸ್ ಬಗ್ಗೆ ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳನ್ನು ಸಮರ್ಥಿಸಿ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಿಂದ ಸರಣಿ ಟ್ವೀಟ್‌ಗಳನ್ನು ಮಾಡಲಾಗಿದೆ.

‘ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದ್ದರು. ಅವು ಸತ್ಯವೂ ಜನರಿಗೆ ತಿಳಿಯಲೇಬೇಕಾದ ತುರ್ತು ಅಂಶಗಳೂ ಹೌದು. ಇವುಗಳಲ್ಲಿ ಐಎಎಸ್ ಅಧಿಕಾರಿಗಳಿಗೆ ಸಂಘದ ವತಿಯಿಂದ ತರಬೇತಿ ನೀಡಿ ಕಳುಹಿಸಿದೆ ಎನ್ನುವುದೂ ಒಂದು ಅಂಶವಾಗಿದೆ’ ಎಂದು ಟ್ವೀಟ್‌ನಲ್ಲಿ ಜೆಡಿಎಸ್ ಉಲ್ಲೇಖಿಸಿದೆ.

ಓದಿ: 

‘ಕುಮಾರಸ್ವಾಮಿ ಅವರನ್ನು ಕೆಣಕಿರುವ ಬಿಜೆಪಿಯು ಆರ್‌ಎಸ್‌ಎಸ್‌ನ ಕಾನೂನು ಹಾಗೂ ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಯಾಕೆ ಮೌನ ವಹಿಸಿದೆ? ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಕರೆಯಲಾಗುತ್ತದೆ. ಹಾಗಾದರೆ, ಆರ್‌ಎಸ್‌ಎಸ್‌ ಅನ್ನು ಏನೆಂದು ಕರೆಯಬೇಕು’ ಎಂದು ಜೆಡಿಎಸ್ ಪ್ರಶ್ನಿಸಿದೆ.

‘ಮಾಜಿ ಮುಖ್ಯಮಂತ್ರಿಗಳು ಎತ್ತಿದ್ದು ವೈಯಕ್ತಿಕ ವಿಷಯಗಳನ್ನಲ್ಲ. ಆದರೆ ಬಿಜೆಪಿ ಅವರ ವೈಯಕ್ತಿಕ ವಿಚಾರಗಳಲ್ಲಿ ಮೂಗು ತೂರಿಸಿದೆ. ಸದನದಲ್ಲಿಯೇ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡುವ ಎದೆಗಾರಿಕೆ ತೋರಿದ ಕುಮಾರಸ್ವಾಮಿ ಅವರೆಲ್ಲಿ? ಅದೇ ಸದನದಲ್ಲಿ ನೀಚ ಕೃತ್ಯ ಎಸಗಿದ ಬಿಜೆಪಿ ನಾಯಕರು ಎಲ್ಲಿ? ಆತ್ಮಾವಲೋಕನ ಮಾಡಿಕೊಳ್ಳಿ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ವಿಜಯಪುರದಲ್ಲಿ ಮಂಗಳವಾರ ಆರ್‌ಎಸ್‌ಎಸ್ ಅನ್ನು ಟೀಕಿಸಿದ್ದ ಕುಮಾರಸ್ವಾಮಿ ಅವರು, ‘ನನಗೆ ಆರ್‌.ಎಸ್‌.ಎಸ್‌ ಸಹವಾಸ ಬೇಡ. ವಿಧಾನಸಭೆ ಕಲಾಪ ನಡೀತಿದ್ದರೆ ಅದೆಂಥದ್ದೋ ನೀಲಿ ಚಿತ್ರ ನೋಡಿಕೊಂಡು ಕೂರೋದು, ಈ ಥರಹದ್ದೇ ತಾನೆ ಅವರ ಶಾಖೆಯಲ್ಲಿ ಅವರಿಗೆ ಕಲಿಸಿದ್ದು. ಅದನ್ನು ಕಲಿಯಲು ಹೋಗಬೇಕಾ’ ಎಂದು ಪ್ರಶ್ನಿಸಿದ್ದರು. ಅಲ್ಲದೆ ಸಂಘದ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು