ಶನಿವಾರ, ಅಕ್ಟೋಬರ್ 31, 2020
20 °C

ಕೆ‍‍ಪಿಸಿಸಿ ಅಧ್ಯಕ್ಷರಾದ ಬಳಿಕ ಸಮಾಜ ನೆನಪಾಯ್ತ; ಎಚ್.‌ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷರಾದ ಕೂಡಲೇ ಸಮಾಜದ (ಒಕ್ಕಲಿಗ) ಮುಖಂಡರನ್ನು ಸೆಳೆಯುವ ಯತ್ನ ಮಾಡಿರುವವರಿಗೆ ಹಿಂದೆ ಯಾಕೆ ಸಮಾಜ ನೆನಪಾಗಲಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಹೆಸರು ಹೇಳದೇ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಹಿಂದೆ ಅವರು ಯಾರಿಗೆ ರಕ್ಷಣೆ ಕೊಟ್ಟಿದ್ದಾರೆ. ಸಮಾಜದವರ ಕಷ್ಟಸುಖದಲ್ಲಿ ಭಾಗಿಯಾಗಿದ್ದರೆ ಎಂಬುದನ್ನು ಹೇಳಲಿ. ಈಗ ಅವರು ಕರೆದ ಕೂಡಲೇ ಕಿಂದರಜೋಗಿಯ ಹಿಂದೆ ಹೋದಂತೆ ಹೋಗಲು ಅವರು ಕೊಟ್ಟ ಕಾಣಿಕೆ ಏನು?’ ಎಂದು ಕುಟುಕಿದರು.

‘ನಮ್ಮ ಪಕ್ಷದ ನಾಯಕರ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕರು, ಜೆಡಿಎಸ್‍ ಮುಗಿಸುವುದಾಗಿ ಹೇಳಿದ್ದಾರೆ. ಈ ಹಿಂದೆ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲೂ ಏಳು ಶಾಸಕರನ್ನು ನಮ್ಮ ಪಕ್ಷದಿಂದ ಸೆಳೆದಿದ್ದರು. ಕಾಂಗ್ರೆಸ್ ನಾಯಕರಿಂದ ಹೊಸ ನಾಟಕ ಶುರುವಾಗಿದ್ದು, ಇದರಿಂದ ಕೂಡ ಜನರ ಹೃದಯವನ್ನು ಗೆಲ್ಲಲಾಗದು’ ಎಂದರು.

‘ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್‍ಐಆರ್ ದಾಖಲಿಸಿರುವ ಬಗ್ಗೆ ರಾಜಕಾರಣ ಬೆರೆಸುವುದು ಅನಗತ್ಯ. ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸುವಾಗ ಮೂರು ಮಂದಿ ಮಾತ್ರ ಹೋಗಿದ್ದೆವು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಸದಸ್ಯ ಟಿ.ಎ.ಶರವಣ ಇದ್ದರೂ ಬರುವುದು ಬೇಡ ಎಂದು ಹೇಳಿದ್ದೆ. ಕಾಂಗ್ರೆಸ್‌ನವರು ದಂಡುಕಟ್ಟಿಕೊಂಡು ಬಂದಿದ್ದನ್ನು ನಾನು ನೋಡಿದ್ದೇನೆ. ಈಗ ಎಫ್‌ಐಆರ್ ಹಾಕಿಸಿ ಕಾರ್ಯಕರ್ತರನ್ನು ಹೆದರಿಸುತ್ತಾರೆ ಎಂಬ ಆರೋಪ ಮಾಡಿರುವುದು ಎಷ್ಟು ಸರಿ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಈಗ ಟೀಕೆ ಮಾಡುವವರು ಕನಕಪುರದಲ್ಲಿ ಯಾವ ಯಾವ ರೀತಿ ಚುನಾವಣೆ ನಡೆಸಿದ್ದಾರೆ, ಎಷ್ಟರಮಟ್ಟಿಗೆ ಪರಿಶುದ್ಧ ಮತ್ತು ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು