ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನುಂಗಿದವರನ್ನು ಖಾಲಿ ಮಾಡಿಸುತ್ತೇವೆ: ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

Last Updated 10 ಮೇ 2022, 20:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಕೆರೆಕೋಡಿಗಳನ್ನು ನುಂಗಿದವರನ್ನು ಖಾಲಿ ಮಾಡಿಸುತ್ತೇವೆ. ಆ ಕೆರೆಗಳಿಗೆ ಹಿಂದಿನ ವೈಭವವನ್ನು ಮರಳಿಸುತ್ತೇವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ನಗರದ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಕುರುಬರಹಳ್ಳಿ ವೃತ್ತದಲ್ಲಿ ಮಂಗಳವಾರ ‘ಜನತಾ ಜಲಧಾರೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ಕ್ಷೇತ್ರದಲ್ಲಿ ಒಬ್ಬ ಮಹಾನುಭಾವ ಇದ್ದ. ಆತನಿಗೆ ಎರಡು ಬಾರಿ ಟಿಕೆಟ್ ಕೊಟ್ಟೆ. ನನಗೇ ಟೋಪಿ ಹಾಕಿ ಹೋದ’ ಎಂದು ಅಬಕಾರಿ ಸಚಿವ ಗೋಪಾಲಯ್ಯ ಅವರ ಹೆಸರು ಹೇಳದೆ ಟೀಕಾ ಪ್ರಹಾರ ನಡೆಸಿದರು.

‘ಅಬಕಾರಿ ಇಲಾಖೆಯಲ್ಲಿ ಟಾರ್ಗೆಟ್ ಹಾಕಿಕೊಂಡು ಲೂಟಿ ಮಾಡಲಾಗುತ್ತಿದೆ. ವೈನ್‌ಸ್ಟೋರ್‌ಗಳಿಂದ ವಸೂಲಿ ಮಾಡಲಾಗುತ್ತಿದೆ. ಪಾಪದ ಹಣವನ್ನು ಚುನಾವಣೆಯಲ್ಲಿ ಮತದಾರರಿಗೆ ಹಂಚುತ್ತಾರೆ. ಬೆಂಗಳೂರು ನಗರದ ಮೂವರು ಶಾಸಕರು ಪ್ರತಿ ಬಾರಿಯೂ ಬಿಡಿಎ ಸಭೆಗೆ ಹೋದರೆ ಮೂಟೆಗಳಲ್ಲಿ ಹಣ ತುಂಬಿಕೊಂಡು ಮರಳುತ್ತಿದ್ದರು ಎಂದು ಅಧಿಕಾರಿಗಳೇ ಹೇಳುತ್ತಾರೆ’ ಎಂದು ಕುಮಾರಸ್ವಾಮಿ ಆರೋಪ ಮಾಡಿದರು.

‘ನಾನು ರೈತರ ಸಾಲ ಮನ್ನಾ ಮಾಡದಿದ್ದರೆ ₹8 ಕೋಟಿ ಕಮಿಷನ್ ಸಿಗುತ್ತಿತ್ತು. ಅದೇ ಹಣವನ್ನು ವೈಟ್‌ಟಾಪಿಂಗ್ ಕಾಮಗಾರಿಗೆ ನೀಡಿದ್ದರೆ ಕಮಿಷನ್ ಪಡೆದು ಬಿಜೆಪಿ, ಕಾಂಗ್ರೆಸ್‌ಗಿಂತ ಚೆನ್ನಾಗಿ ಚುನಾವಣೆ ನಿರ್ವಹಿಸಬಹುದಿತ್ತು’ ಎಂದರು.

‘ರಾಜ್ಯದ ನೀರಾವರಿ ಯೋಜನೆಗಳನ್ನು ಬದ್ಧತೆಯಿಂದ ಜಾರಿ ಮಾಡುವುದು ನಮ್ಮ ಗುರಿ. ನನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ಕೊಡಿಸುತ್ತೇವೆ’ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.

‘ಯಾರ ಮನೆ ಬಾಗಲಿಗೂ ನನ್ನನ್ನೂ ಕಳಿಸಬೇಡಿ, ನನ್ನ ಮನೆ ಬಾಗಿಲಿಗೂ ಯಾರು ಬರುವುದಕ್ಕೆ ಬಿಡಬೇಡಿ. ಸ್ವತಂತ್ರ ಸರ್ಕಾರ ನೀಡಿ. ಇದು ನನ್ನ ಕೊನೆ ಹೋರಾಟ, ಒಂದೇ ಒಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಕೋರ್ ಕಮಿಟಿ ಅಧ್ಯಕ್ಷ ಬಂಡೆಪ್ಪ ಕಾಶೆಂಪೂರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮುಖಂಡರಾದ ಟಿ.ಎ.ಶರವಣ, ರಾಜಣ್ಣ, ಪಕ್ಷದ ನಗರದ ಘಟಕದ ಅಧ್ಯಕ್ಷ ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT