ಸೋಮವಾರ, ಅಕ್ಟೋಬರ್ 25, 2021
24 °C

ಅತಿಥಿ ಉಪನ್ಯಾಸಕರ ಕಾಯಂಗೆ ಒತ್ತಾಯ; ಜೆಡಿಎಸ್‌ ಸದಸ್ಯರ ಸಭಾತ್ಯಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಲು ಮತ್ತು ಕಾಯಂಗೊಳಿಸಲು ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ ಜೆಡಿಎಸ್‌ ಸದಸ್ಯರು ಸೋಮವಾರ ವಿಧಾನ ಪರಿಷತ್‌ನಲ್ಲಿ ಸಭಾತ್ಯಾಗ ಮಾಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು, ‘ಅತಿಥಿ ಉಪನ್ಯಾಸಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸರ್ಕಾರ ಇವರನ್ನು ಕಾಯಂ ಮಾಡಿಕೊಳ್ಳಲು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೆಲವು ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ₹50 ಸಾವಿರದವರೆಗೂ ಗೌರವ ಧನ ನೀಡಲಾಗುತ್ತಿದೆ. ಬೋಧಕೇತರ ಸಿಬ್ಬಂದಿಯನ್ನಾಗಿಯಾದರೂ ನೇಮಿಸಿಕೊಳ್ಳುವ ಮೂಲಕ ಸೇವಾ ಭದ್ರತೆ ಒದಗಿಸಬೇಕು ಮತ್ತು ಗೌರವ ಧನವನ್ನು ಪರಿಷ್ಕರಿಸಬೇಕು. ಕಾಲಮಿತಿ ಒಳಗೆ ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ‘ಗೌರವ ಧನ ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುವುದು ಮತ್ತು ಈಗಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಲಾಗುವುದು. ಆದರೆ, ಕಾಯಂಗೊಳಿಸುವ ಪ್ರಸ್ತಾವ ಸದ್ಯಕ್ಕೆ ಸರ್ಕಾರದ ಮುಂದೆ ಇಲ್ಲ’ ಎಂದು ಹೇಳಿದರು.

‘ಸಚಿವರು ನಿರಾಶಾದಾಯಕ ಉತ್ತರ ನೀಡಿದ್ದಾರೆ. ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು