ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್‌ ಬೆಂಬಲ ಯಾಚಿಸಿದ ಜೆಡಿಎಸ್‌

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಎಚ್‌.ಡಿ. ದೇವೇಗೌಡ ಮಾತುಕತೆ
Last Updated 31 ಮೇ 2022, 17:07 IST
ಅಕ್ಷರ ಗಾತ್ರ

ಬೆಂಗಳೂರು: ಅಗತ್ಯ ಸಂಖ್ಯೆಯ ಮತಗಳ ಕೊರತೆಯ ನಡುವೆಯೂ ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್‌, ಕಾಂಗ್ರೆಸ್‌ ಬಳಿ ಬೆಂಬಲ ಯಾಚಿಸಿದೆ.

ಪಕ್ಷದ ಅಭ್ಯರ್ಥಿಯಾಗಿರುವ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರಿಗೆ ಕಾಂಗ್ರೆಸ್‌ ಬಳಿ ಇರುವ ಹೆಚ್ಚುವರಿ ಮತಗಳನ್ನು ನೀಡುವಂತೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ.

ಕುಪೇಂದ್ರ ರೆಡ್ಡಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತು ಶಾಸಕ ಎಚ್‌.ಡಿ. ರೇವಣ್ಣ, ‘ಸೋನಿಯಾ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್‌ ನಾಯಕರಿಂದ ಬೆಂಬಲದ ಭರವಸೆ ಬಂದ ಬಳಿಕವೇ ನಮ್ಮ ಪಕ್ಷ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ’ ಎಂದರು.

ಎರಡನೇ ಅಭ್ಯರ್ಥಿಯ ಗೆಲುವಿಗೆ ಮತಗಳ ಕೊರತೆ ಇದ್ದರೂ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಜಾತ್ಯತೀತ ಸಿದ್ಧಾಂತಕ್ಕೆ ಬದ್ಧವಾಗಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಬೆಂಬಲ ನೀಡಲೇಬೇಕಾದ ಇಕ್ಕಟ್ಟಿಗೆ ಜೆಡಿಎಸ್‌ ಪಕ್ಷವನ್ನು ಸಿಲುಕಿಸಲು ಕಾಂಗ್ರೆಸ್‌ ಈ ತಂತ್ರ ಹೆಣೆದಿದೆ ಎಂಬ ಚರ್ಚೆ ನಡೆಯುತ್ತಿದೆ. ಆ ಬಳಿಕವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ಬೆಂಬಲವನ್ನು ಎದುರು ನೋಡುತ್ತಿದೆ.

‘ಕೋಮುವಾದಿ ಪಕ್ಷವನ್ನು ಸೋಲಿಸಬೇಕೆಂಬ ಮಾತಿಗೆ ಕಾಂಗ್ರೆಸ್‌ ಪಕ್ಷ ಬದ್ಧವಾಗಿದ್ದರೆ ಕುಪೇಂದ್ರ ರೆಡ್ಡಿ ಅವರಿಗೆ ಬೆಂಬಲ ನೀಡಲಿ’ ಎಂದು ರೇವಣ್ಣ ಸವಾಲು ಹಾಕಿದರು.

ದೇವೇಗೌಡರು ಸೋನಿಯಾ ಗಾಂಧಿ ಜತೆ ಮಾತನಾಡಿ, ಬೆಂಬಲ ಕೋರಿದ್ದಾರೆ. ಎಚ್‌.ಡಿ. ಕುಮಾರಸ್ವಾಮಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಜತೆ ಚರ್ಚಿಸಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಶಾಸಕ ಆರ್‌.ವಿ. ದೇಶಪಾಂಡೆ ಸೇರಿದಂತೆ ಹಲವು ಮುಖಂಡರ ಜತೆ ಜೆಡಿಎಸ್‌ ಪ್ರಮುಖರು ಮಾತುಕತೆ ನಡೆಸಿದ್ದಾರೆ. ಸಂಪೂರ್ಣ ಭರವಸೆ ಸಿಕ್ಕ ಬಳಿಕವೇ ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದರು.

ಕುಪೇಂದ್ರ ರೆಡ್ಡಿ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡುವ ವಿಚಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ನಡುವೆ ಸಹಮತ ಇರಲಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿಬರುತ್ತಿದೆ. ಆದರೆ, ಅದನ್ನು ನಿರಾಕರಿಸಿದ ಇಬ್ರಾಹಿಂ, ‘ಒಮ್ಮತದಿಂದಲೇ ಅಭ್ಯರ್ಥಿಯ ಆಯ್ಕೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT