ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಿಷನ್ 123’ ಸಾಕಾರಗೊಳಿಸುವ ವಿಶ್ವಾಸ: ಎಚ್‌ಡಿಡಿ

ರಾಜ್ಯ ಜೆಡಿಎಸ್‌ ಅಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ, ಸಂಸದೀಯ ಮಂಡಳಿ ಅಧ್ಯಕ್ಷರಾಗಿ ಎಚ್.ಕೆ.ಕುಮಾರಸ್ವಾಮಿ ಅಧಿಕಾರ ಸ್ವೀಕಾರ
Last Updated 18 ಏಪ್ರಿಲ್ 2022, 2:10 IST
ಅಕ್ಷರ ಗಾತ್ರ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಸಿ.ಎಂ. ಇಬ್ರಾಹಿಂ, ಸಂಸದೀಯ ಮಂಡಳಿಯ ಅಧ್ಯಕ್ಷರಾಗಿ ಎಚ್.ಕೆ. ಕುಮಾರಸ್ವಾಮಿ ಭಾನುವಾರ ಅಧಿಕಾರ ವಹಿಸಿಕೊಂಡರು.

ಜೆ.ಪಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಂದ ಪಕ್ಷದ ಧ್ವಜ ಸ್ವೀಕರಿಸುವ ಮೂಲಕ ಇಬ್ರಾಹಿಂ ಅವರು ಪಕ್ಷದ ಚುಕ್ಕಾಣಿ ಹಿಡಿದರು.

ವಿಧಾನಪರಿಷತ್‌ ಕಾಂಗ್ರೆಸ್‌ ಸದಸ್ಯರಾಗಿದ್ದ ಇಬ್ರಾಹಿಂ, ಪರಿಷತ್‌ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲಿಲ್ಲವೆಂದು ಮುನಿಸಿಕೊಂಡು ಸದಸ್ಯ ಸ್ಥಾನಕ್ಕೆ ರಾಜೀ ನಾಮೆ ನೀಡಿ ಜೆಡಿಎಸ್‌ ಸೇರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವೇಗೌಡರು, ‘ಒಬ್ಬ ಸಮರ್ಥ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಿರಿಯ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇಬ್ರಾಹಿಂ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಾರೆ. ಇದರ ನಡುವೆ ದೇವೇಗೌಡರ ಕುಟುಂಬದವರೇ ಎಲ್ಲ ಇದ್ದಾರೆ, ಇದು ಒಕ್ಕಲಿಗರ ಪಕ್ಷ ಎಂದೆಲ್ಲ ಅಪಪ್ರಚಾರ ಮಾಡಬಹುದು. ಆದರೆ, ನಾನು ಎಲ್ಲ ವರ್ಗದವರನ್ನು ಗುರುತಿಸಿ ‌ಮಂತ್ರಿಮಂಡಲ ಮಾಡಿದ್ದೆ. ಮುಸ್ಲಿಮರಿಗೆ ಮೀಸಲಾತಿ ತಂದಿದ್ದು ನಾನೇ’ ಎಂದರು.

‘ಮುಂದಿನ ಚುನಾವಣೆಯಲ್ಲಿ ಪಕ್ಷದ ‘ಮಿಷನ್ 123’ ಸಾಕಾರಗೊಳ್ಳುವ ವಿಶ್ವಾಸವಿದೆ. ಜೆಡಿಎಸ್‌ ಅನ್ನು ಯಾರಿಂದಲೂ ತುಳಿಯಲು ಸಾಧ್ಯವಿಲ್ಲ. ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಹಿಂದೆ 16 ಲೋಕಸಭಾ ಸ್ಥಾನ ಗೆದ್ದೆವು. ಇನ್ನು ಜೆಡಿಎಸ್ ಅನ್ನು ಒಕ್ಕಲಿಗರ ಪಕ್ಷವೆಂದು ಯಾರೂ ಹೇಳಬಾರದು. ಅಂಥ ಮಾತುಗಳಿಗೆ ಇಬ್ರಾಹಿಂ ತಕ್ಕ ಉತ್ತರ ನೀಡುತ್ತಾರೆ. ನಾನೂ ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಅವರು, ‘ಎರಡು ವರ್ಷಗಳ ಸಂಕಷ್ಟದ ಕಾಲದಲ್ಲಿ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷ ಸ್ಥಾನ ವಹಿಸಿದ್ದರು. ಈಗ ಇಬ್ರಾಹಿಂ ಅವರು ಮರಳಿ ಮನೆಗೆ (ಜೆಡಿಎಸ್‌) ಬಂದಿದ್ದಾರೆ. ಇಬ್ರಾಹಿಂ ಅವರ ಪಕ್ಷ ಸೇರ್ಪಡೆ ಒಂದು ಸಮಾಜವನ್ನು ಓಲೈಕೆ ಮಾಡಲು ಅಲ್ಲ. ಯಾವುದೇ ಒಂದು ಸಮಾಜದ ಪರವಾಗಿ ನಾನು ಇಲ್ಲ’ ಎಂದರು.

‘ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಬಿಜೆಪಿಯವರು ಮುಂದಿನ ಚುನಾವಣೆ ಗೆಲ್ಲಲು ರೂಪುರೇಷೆ ಸಿದ್ಧ ಮಾಡಿದ್ದಾರೆಯೇ ಹೊರತು, ಜನರ ಸಮಸ್ಯೆ ಬಗೆಹರಿಸಲು, ರಾಜ್ಯದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಚರ್ಚಿಸಿಲ್ಲ. ಕಾಂಗ್ರೆಸ್‌ಗೆ ಬೇರೆ ಜನಪರ ವಿಚಾರಗಳು, ಅಭಿವೃದ್ಧಿ ವಿಚಾರಗಳು ಇಲ್ಲದೆ ಶೇ 40 ಕಮಿಷನ್‌ ವಿಷಯವನ್ನು ಇಟ್ಟುಕೊಂಡಿದ್ದಾರೆ’ ಎಂದು ಕುಮಾರಸ್ವಾಮಿ ಟೀಕಿಸಿದರು.

ಶಾಸಕರಾದ ಬಂಡೆಪ್ಪ ಕಾಶೆಂಪೂರ, ಕೆ.ಎಂ.ಕೃಷ್ಣಾರೆಡ್ಡಿ, ದಾಸರಹಳ್ಳಿ ಮಂಜುನಾಥ್, ಮುಖಂಡರಾದ ಟಿ.ಎ.ಶರವಣ ಮತ್ತು ಜಪ್ರುಲ್ಲಾ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT