ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ನಿಂದ ‘ಕಾರ್ಪೋರೇಟ್‌’ ತರಬೇತಿ

ಚುನಾವಣೆಗೆ ರಣಕಹಳೆ ಊದಿದ ಜೆಡಿಎಸ್‌; ಅಭ್ಯರ್ಥಿಗಳಿಗೆ 3 ತಿಂಗಳ ‘ಮೌಲ್ಯಮಾಪನ’
Last Updated 27 ಸೆಪ್ಟೆಂಬರ್ 2021, 17:16 IST
ಅಕ್ಷರ ಗಾತ್ರ

ರಾಮನಗರ: ಜೆಡಿಎಸ್ ಇದೀಗ ರಾಜ್ಯದ 123 ವಿಧಾನಸಭಾ ಕ್ಷೇತ್ರಗಳಲ್ಲಿನ ತನ್ನ ಅಭ್ಯರ್ಥಿಗಳಿಗೆ ಕಾರ್ಪೋರೇಟ್‌ ಮಾದರಿಯಲ್ಲಿ ಚುನಾವಣಾ ತರಬೇತಿ ಆರಂಭಿಸಿದೆ.

ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈ ಮಾದರಿಯಲ್ಲಿ ತನ್ನ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ತರಬೇತಿ ನೀಡುತ್ತಿರುವುದು ಇದೇ ಮೊದಲು. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಈ ಮಾದರಿ ಅನುಸರಿಸಿದ್ದು, ಯಶಸ್ಸು ಕಂಡಿವೆ. ಇದೀಗ ಜೆಡಿಎಸ್‌ ಸಹ ಅದೇ ಉತ್ಸಾಹದೊಂದಿಗೆ ಕಾರ್ಯಾಗಾರ ಆಯೋಜಿಸಿದೆ.

ವೇದಿಕೆಯ ಒಳ–ಹೊರಗೂ ಶಿಸ್ತಿನಿಂದ ತರಬೇತಿ ಆಯೋಜಿಸಿದ್ದು, ಆಯ್ದ ಅಭ್ಯರ್ಥಿಗಳು ಹಾಗೂ ಮುಖಂಡರಿಗೆ ನೋಂದಣಿ ಮಾಡಿಕೊಂಡು ‘ಗ್ರೀನ್‌ ಕಾರ್ಡ್‌’ ಮೂಲಕ ಪ್ರವೇಶ ನೀಡಲಾಯಿತು. ನಾಲ್ಕು ದಿನಗಳ ಕಾರ್ಯಾಗಾರ ಇದಾಗಿದ್ದು, ರಾಜಕೀಯ ವಿದ್ಯಮಾನಗಳು, ಪಕ್ಷ ಸಂಘಟನೆ, ಚುನಾವಣೆ ಸಿದ್ಧತೆ, ವ್ಯಕ್ತಿತ್ವ ವಿಕಸನ ಕುರಿತು ಕಾರ್ಯಾಗಾರ ಆಯೋಜಿಸಲಾಗಿದೆ.

‘ಇರುವುದು ಒಂದೇ ಪರಿಹಾರ, ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ’ ಎಂಬ ಧ್ಯೇಯದೊಂದಿಗೆ ಚುನಾವಣಾ ಸಿದ್ಧತೆ ಆರಂಭಿಸಿರುವ ಜೆಡಿಎಸ್, ಆಯ್ದ 123 ವಿಧಾನಸಭಾ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳನ್ನು ಇಲ್ಲಿಗೆ ಕರೆ ತಂದಿದೆ. ಪಕ್ಷದ ಹಾಲಿ ಶಾಸಕರೂ ಇದರಲ್ಲಿ ಸೇರಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಈ ಅಭ್ಯರ್ಥಿಗಳ ನೇತೃತ್ವದಲ್ಲೇ ಆಯಾ ಕ್ಷೇತ್ರಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಅವರ ಚಾಕಚಕ್ಯತೆ, ಸಂಘಟನೆ ನೋಡಿಕೊಂಡು ಟಿಕೆಟ್‌ ಖಾತ್ರಿ ಮಾಡುವ ಕೆಲಸ ಮಾಡಲಿದ್ದೇವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪ್ರಶ್ನೋತ್ತರ: ಕಾರ್ಯಾಗಾರದ ಮೊದಲ ದಿನ ಅಭ್ಯರ್ಥಿಗಳಿಗೆ 61 ಪ್ರಶ್ನೆಗಳ ಪ್ರಶ್ನೆಪತ್ರಿಕೆ ನೀಡಲಾಯಿತು. ತಮ್ಮ ಕ್ಷೇತ್ರಕ್ಕೆ ನೀಡಿರುವ ಆದ್ಯತೆಗಳು ಹಾಗೂ ಇರುವ ಅಡೆತಡೆಗಳ ಕುರಿತು ಅಭ್ಯರ್ಥಿಗಳು ಉತ್ತರ ಬರೆದರು. ಮಂಗಳವಾರ ಜೆಡಿಎಸ್‌ನ ಪಂಚರತ್ನ ಕಾರ್ಯಕ್ರಮ ಹಾಗೂ ‘ಮಿಷನ್‌ 123 ಪ್ಲಸ್‌’ ಕುರಿತು ಸಮಾಲೋಚನೆ ನಡೆಯಲಿದೆ.

ಚಾಲನೆ: ಬಿಡದಿಯ ಕೇತಗಾನಹಳ್ಳಿ ಯಲ್ಲಿ ಇರುವ ಎಚ್‌.ಡಿ. ಕುಮಾರಸ್ವಾಮಿ ತೋಟದ ಆವರಣದಲ್ಲಿ ‘ಜನತಾ ಪರ್ವ 1.0’ ಕಾರ್ಯಾಗಾರಕ್ಕೆ ಸೋಮವಾರ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಚಾಲನೆ ನೀಡಿದರು. ಎಚ್‌.ಡಿ. ಕುಮಾರಸ್ವಾಮಿ ಜೊತೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ವೈಎಸ್‌ವಿ ದತ್ತ ಸೇರಿದಂತೆ ಪಕ್ಷದ ನಾಯಕರು ಮಾತನಾಡಿ ಉತ್ಸಾಹ ತುಂಬಿದರು.

ಸಿದ್ದರಾಮಯ್ಯ ವಿರುದ್ಧ ಕಿಡಿ

‌‘ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ, ಯಾರಿಂದಲೂ ಸಾಧ್ಯವಿಲ್ಲ’ ಎಂದು ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಗುಡುಗಿದರು.

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿ? ಎಂಬುದನ್ನು ಅರಿತು ಮಾತನಾಡಬೇಕು. ಅವರಿವರ ಜೊತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರಕಾರ ರಚನೆ ಮಾಡುವುದಕ್ಕೆ ಯಾರು ನಮ್ಮ ಮನೆ ಬಾಗಿಲಿಗೆ ಬಂದರು ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ’ ಎಂದು ಹೇಳಿದರು.

ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ‘ಕೆಲವರು ಜೆಡಿಎಸ್ ಪಕ್ಷವನ್ನು 30 ಸೀಟುಗಳ ಪಕ್ಷ ಎಂದು ಲಘುವಾಗಿ ಮಾತನಾಡುತ್ತಿದ್ದಾರೆ. ಅಂಥವರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು. ಪಕ್ಷ ಬಿಟ್ಟು ಹೋಗುತ್ತೇನೆ ಎಂದು ಬೆದರಿಕೆ ಹಾಕುತ್ತಿರುವವರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಪರ್ಯಾಯ ಅಭ್ಯರ್ಥಿಗಳನ್ನು ರೂಪಿಸುವ ಶಕ್ತಿ ಜೆಡಿಎಸ್‌ಗೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT