ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅತಿದೊಡ್ಡ ಪಕ್ಷವಾಗಲಿದೆ: ಎಚ್‌ಡಿಕೆ

Last Updated 2 ಜುಲೈ 2022, 16:00 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಕುರಿತು ಕಪೋಲಕಲ್ಪಿತ ಸಮೀಕ್ಷಾ ವರದಿಗಳು ಪ್ರಕಟವಾಗುತ್ತಿವೆ. ಜೆಡಿಎಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಶನಿವಾರ ‘ಜನತಾ ಮಿತ್ರ’ ಕರಪತ್ರ ಬಿಡುಗಡೆ ಮಾಡಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷ 130 ಸ್ಥಾನ ಗಳಿಸುತ್ತದೆ ಎಂಬ ವರದಿಯೇ ಸುಳ್ಳು. 65 ಸ್ಥಾನ ಗಳಿಸಲಿದೆ ಎಂಬ ಸಮೀಕ್ಷಾ ವರದಿಯನ್ನು ತಿರುಚಿ ಮಾಹಿತಿ ಹಂಚಲಾಗಿದೆ. ಬಿಜೆಪಿ, ಕಾಂಗ್ರೆಸ್‌ಗಿಂತ ನಮ್ಮ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ’ ಎಂದರು.

2013ರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷ ಕಟ್ಟಿದ್ದರಿಂದ ಕಾಂಗ್ರೆಸ್‌ಗೆ ಬಹುಮತ ಲಭಿಸಿತ್ತು. ಇಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರಲಿಲ್ಲ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ 78 ಸ್ಥಾನಕ್ಕೆ ಇಳಿಯಿತು. ಈ ಬಾರಿಯೂ ಆ ಪಕ್ಷ 70 ಸ್ಥಾನ ದಾಟುವುದಿಲ್ಲ ಎಂದು ಹೇಳಿದರು.

‘ಜೆಡಿಎಸ್‌ಗೆ ಸಂಬಂಧವಿಲ್ಲ’: ‘ಸಿದ್ದರಾಮಯ್ಯ ಅವರ ಜನ್ಮದಿನದ ಪ್ರಯುಕ್ತ ನಡೆಸುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ನಾನು ಯತ್ನಿಸುತ್ತಿದ್ದೇನೆ ಎಂಬುದು ಸತ್ಯಕ್ಕೆ ದೂರವಾದುದು. ಆ ಕಾರ್ಯಕ್ರಮಕ್ಕೂ ಜೆಡಿಎಸ್‌ಗೂ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಕಾರ್ಯಕ್ರಮ. ಸಿದ್ದರಾಮಯ್ಯ ವಿರುದ್ಧ ನನಗೆ ದ್ವೇಷವಿಲ್ಲ. ನಾನೇಕೆ ವಿರೋಧಿಸಲಿ’ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರವು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಹಿಂದಿನ ಸರ್ಕಾರಗಳ ವೈಫಲ್ಯದಿಂದ ಈಗ ಬೆಂಗಳೂರಿಗೆ ಸಮಸ್ಯೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ನ ದುರಾಡಳಿತವೇ ಬೆಂಗಳೂರಿನ ಸಮಸ್ಯೆಗೆ ಕಾರಣ ಎಂದು ದೂರಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಮುಖಂಡರಾದ ಸುರೇಶ್‌ ಬಾಬು, ಎಚ್‌.ಎಂ.ರಮೇಶ್‌ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT