ಮಂಗಳವಾರ, ಮೇ 17, 2022
24 °C
ಮಸ್ಕಿ, ಬಸವಕಲ್ಯಾಣ, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ: ಎಚ್‌.ಡಿ. ಕುಮಾರಸ್ವಾಮಿ ಘೋಷಣೆ

ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಸ್ಪರ್ಧೆ: ಎಚ್‌.ಡಿ. ಕುಮಾರಸ್ವಾಮಿ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಸ್ಕಿ, ಬಸವಕಲ್ಯಾಣ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಸಂಘಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ‘ಹಣದ ಕೊರತೆಯ ಕಾರಣದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರು ಪ್ರಕಟಿಸಿದ್ದರು. ಆದರೆ, ಈಗ ಮೂರೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದೇನೆ’ ಎಂದರು.

ಉಪ ಚುನಾವಣೆಯಲ್ಲಿ ದೂರ ಉಳಿಯುವ ಪಕ್ಷದ ನಿರ್ಧಾರದ ಬಗ್ಗೆ ಕೆಲವರು ಟೀಕಿಸಿದ್ದರು. ಜೆಡಿಎಸ್‌ ಪಕ್ಷ ಬಿಜೆಪಿಗೆ ಅನುಕೂಲ ಮಾಡಿಕೊಡಲು ಹೊರಟಿದೆ ಎಂಬ ಆರೋಪ ಮಾಡಿದ್ದರು. ಈ ಬಗ್ಗೆ ಯಾರಿಗೂ ಗೊಂದಲ ಬೇಡ. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ದೇವೇಗೌಡರ ಜತೆ ಚರ್ಚಿಸಿರಲಿಲ್ಲ. ಪಕ್ಷಕ್ಕೆ ಶಕ್ತಿ ತುಂಬುವುದಕ್ಕಾಗಿ ವೇದಿಕೆಯಿಂದಲೇ ಘೋಷಿಸಲಾಗುತ್ತಿದೆ ಎಂದು ತಿಳಿಸಿದರು.

ಮೈತ್ರಿ ಇಲ್ಲ: ‘2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಯಾವುದೇ ರಾಷ್ಟ್ರೀಯ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. 224 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಬಿಜೆಪಿ ಬಗ್ಗೆ ನಾವು ಮೃದು ಧೋರಣೆ ಹೊಂದಿದ್ದೇವೆ, ರಾಜಿ ಮಾಡಿಕೊಳ್ಳುತ್ತೇವೆ ಎಂಬ ಆರೋಪಗಳಿಗೆ ಪಕ್ಷದ ಕಾರ್ಯಕರ್ತರು ಕಿವಿಗೊಡಬಾರದು’ ಎಂದು ಕುಮಾರಸ್ವಾಮಿ ಹೇಳಿದರು.

ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಎರಡು ವರ್ಷ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಬೇಕು. ಹಣದ ಬಗ್ಗೆ ಚಿಂತಿಸುವುದು ಬೇಡ. ಸಾಲ ಮಾಡಿ ಪಕ್ಷ ಕಟ್ಟುವುದನ್ನು ದೇವೇಗೌಡರು ಕಲಿಸಿದ್ದಾರೆ. ಅದೇ ಹಾದಿಯಲ್ಲಿ ಕೆಲಸ ಮಾಡಲು ತಾವು ಸಿದ್ಧ ಎಂದರು.

ಪಕ್ಷಕ್ಕೆ ದ್ರೋಹ ಬಗೆದುಹೋದ ಸಿದ್ದರಾಮಯ್ಯ ಅವರು ಈಗಲೂ ಜೆಡಿಎಸ್‌ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಜೆಡಿಎಸ್‌ ತೀರ್ಮಾನಗಳ ಕುರಿತು ಅವರಿಗೆ ಏಕೆ ಹೊಟ್ಟೆ ನೋವು ಎಂದು ಪ್ರಶ್ನಿಸಿದರು.

ಪಕ್ಷದಲ್ಲಿ ಏಕತೆ ಬೇಕು: ಸಮಾವೇಶ ಉದ್ಘಾಟಿಸಿ ಮಾತನಾಡಿದ ಎಚ್‌.ಡಿ. ದೇವೇಗೌಡ, ‘ಜೆಡಿಎಸ್‌ಗೆ ರಾಜ್ಯದಲ್ಲಿ ಶಕ್ತಿ ಇದೆ. ಆದರೆ, ಮುಖಂಡರಲ್ಲಿ ಏಕತೆ ಇಲ್ಲ. ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಏನಾದರೂ ವ್ಯತ್ಯಾಸ ಆಗಬಹುದು. ಆದರೂ, ಪಕ್ಷವನ್ನು ಬಲಪಡಿಸುವುದಕ್ಕಾಗಿ ಎಲ್ಲರೂ ಏಕತೆಯಿಂದ ಸಾಗಬೇಕು. ಪಕ್ಷವನ್ನು ಮೊದಲ ಸ್ಥಾನಕ್ಕೆ ತರಬೇಕು’ ಎಂದರು.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಜೆಡಿಎಸ್‌ ಪಕ್ಷ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಕೆಲವರು ಲಘುವಾಗಿ ಮಾತನಾಡಿದ್ದರು. ಜೆಡಿಎಸ್‌ ಎಲ್ಲಿದೆ ಎಂದು ಈಗಲೂ ಪ್ರಶ್ನಿಸುವವರು ಇದ್ದಾರೆ. ಪಕ್ಷ ನಿಷ್ಠ ಮುಖಂಡರು ಇನ್ನೂ ಉಳಿದಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಅದು ಸಾಬೀತಾಗಿದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ, ರಾಷ್ಟ್ರೀಯ ಘಟಕದ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ಕೇರಳದ ಮಾಜಿ ಸಚಿವ ನೀಲಲೋಹಿತ ದಾಸನ್‌ ನಾಡಾರ್, ಶಾಸಕರಾದ ಬಂಡೆಪ್ಪ ಕಾಶೆಂಪುರ, ವೆಂಕಟರಾವ್‌ ನಾಡಗೌಡ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಧಾನ ಪರಿಷತ್‌ ಮಾಜಿ ಸದಸ್ಯ ಟಿ.ಎ. ಶರವಣ, ದೇವದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕರಿಯಮ್ಮ ಮಾತನಾಡಿದರು.

‘ಕಾದು ನೋಡುತ್ತಿದ್ದೇವೆ’

‘ರಾಜ್ಯದಲ್ಲಿ ಈಗಾಗಲೇ ಶೇಕಡ 50ರಷ್ಟು ಮೀಸಲಾತಿ ಇದೆ. ಮೀಸಲಾತಿಗೆ ಆಗ್ರಹಿಸಿ ಎಲ್ಲರೂ ಹೋರಾಟಕ್ಕೆ ಇಳಿಯುತ್ತಿದ್ದಾರೆ. ಉಪ್ಪಾರರು, ಯಾದವರೂ ಪಾದಯಾತ್ರೆ ನಡೆಸುವ ಸಾಧ್ಯತೆ ಇದೆ. ಈ ಹೋರಾಟ ಎಲ್ಲಿಗೆ ತಲುಪುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪರಿಶಿಷ್ಟ ಪಂಗಡದವರಿಗೆ (ಎಸ್‌.ಟಿ) ರಾಜಕೀಯ ಮೀಸಲಾತಿ ದೊರಕಿಸುವುದರಲ್ಲಿ ದೇವೇಗೌಡರ ಪಾತ್ರ ದೊಡ್ಡದು. ಈಗ ಎಲ್ಲರಿಗೂ 14 ಎಸ್.ಟಿ. ಮೀಸಲು ಕ್ಷೇತ್ರಗಳ ಮೇಲೆ ಕಣ್ಣು ಬಿದ್ದಿದೆ ಎಂದರು.

ನಾಡಗೀತೆ ಅರ್ಧಕ್ಕೆ ಮೊಟಕು

ಸಮಾರಂಭದ ಆರಂಭದಲ್ಲಿ ಧ್ವನಿಮುದ್ರಿತ ನಾಡಗೀತೆಯನ್ನು ಪ್ರಸಾರ ಮಾಡಲಾಯಿತು. ಕೆಲವು ಸಾಲುಗಳಾಗುತ್ತಿದ್ದಂತೆ ಸ್ಥಗಿತಗೊಂಡಿತು. ನಾಡಗೀತೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಾರ್ಯಕ್ರಮ ಮುಂದುವರಿಸಲಾಯಿತು.

ಜಿಟಿಡಿ, ಶ್ರೀನಿವಾಸ್‌ ಗೈರು

ಪಕ್ಷದ ವರಿಷ್ಠರ ಜತೆ ಮುನಿಸಿಕೊಂಡಿರುವ ಶಾಸಕರಾದ ಜಿ.ಟಿ. ದೇವೇಗೌಡ, ಎಸ್‌.ಆರ್‌. ಶ್ರೀನಿವಾಸ್‌ ಸೇರಿದಂತೆ ಹಲವು ಶಾಸಕರು ಸಮಾವೇಶಕ್ಕೆ ಗೈರಾಗಿದ್ದರು. ಮದುವೆ ಸಮಾರಂಭಗಳು ಜಾಸ್ತಿ ಇರುವ ಕಾರಣದಿಂದ ಸಮಾವೇಶಕ್ಕೆ ಬರಲಾಗದು ಎಂಬುದಾಗಿ ಕೆಲವು ಶಾಸಕರು ಮೊದಲೇ ತಿಳಿಸಿದ್ದರು ಎಚ್‌.ಡಿ. ದೇವೇಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು