ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್ ಚುನಾವಣೆ: JDS ಕಾರ್ಯಕರ್ತರಿಂದಲೂ ಬೆಂಬಲ ಸಿಕ್ಕಿದೆ ಎಂದ ಮಧು ಮಾದೇಗೌಡ

Last Updated 16 ಜೂನ್ 2022, 13:21 IST
ಅಕ್ಷರ ಗಾತ್ರ

ಮೈಸೂರು: ‘ಜೆಡಿಎಸ್‌ ಕಾರ್ಯಕರ್ತರೂ ನನಗೆ ಮತ ಚಲಾಯಿಸಿದ್ದಾರೆ. ಮಂಡ್ಯ ಮತ್ತು ಮೈಸೂರು ಸೇರಿದಂತೆ ಎಲ್ಲ ಕಡೆಗಳಲ್ಲೂ ಉತ್ತಮ ಬೆಂಬಲ ಸಿಕ್ಕಿದೆ’ ಎಂದು ವಿಧಾನಪರಿಷತ್‌ ದಕ್ಷಿಣ ಪದವೀಧರರ ಕ್ಷೇತ್ರದ ವಿಜೇತ ಅಭ್ಯರ್ಥಿ, ಕಾಂಗ್ರೆಸ್‌ನ ಮಧು ಮಾದೇಗೌಡ ಹೇಳಿದರು.

ಫಲಿತಾಂಶ ಪ್ರಕಟವಾದ ನಂತರ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿ, ‘ಹಿಂದೆಲ್ಲಾ ಪಕ್ಷವು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಈ ಬಾರಿ ನಿರ್ಲಕ್ಷ್ಯ ವಹಿಸದೆ ಕೆಲಸ ಮಾಡಿದ್ದರಿಂದ ಗೆಲುವು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಮಂಡ್ಯ ಜಿಲ್ಲೆಯು ಜೆಡಿಎಸ್‌ ಭದ್ರಕೋಟೆಯೇನಲ್ಲ. ಹಾಗೆಂದು ಕೆಲವರು ಹೇಳಿದ್ದರಿಂದ ನನಗೇ ಅನುಕೂಲವೇ ಆಗಿದೆ. ಒಕ್ಕಲಿಗರು ಸೇರಿದಂತೆ ಎಲ್ಲ ವರ್ಗಗಳ ಮತದಾರರೂ ನನ್ನನ್ನು ಬೆಂಬಲಿಸಿದ್ದಾರೆ. ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಮನ್ನಡೆ ಕಾಯ್ದುಕೊಳ್ಳುವ ವಿಶ್ವಾಸವಿತ್ತು. ನಮ್ಮದೇ ತಂಡ ವರ್ಷದಿಂದ ವ್ಯವಸ್ಥಿತವಾಗಿ ಮತದಾರರ ನೋಂದಣಿ ಜೊತೆಗೆ ಅವರನ್ನು ಭೇಟಿಯಾಗಿದ್ದರಿಂದ ದೊಡ್ಡ ಅನುಕೂಲವಾಗಿದೆ’ ಎಂದರು.

‘ವರ್ಷದಿಂದ ಸಂಘಟಿತ ಹೋರಾಟ ಮತ್ತು ಕಾರ್ಯತಂತ್ರ ರೂಪಿಸಿದ್ದೆ. ನನ್ನ ಗೆಲುವಿಗೆ ನಮ್ಮ ತಂದೆಯ ಹೆಸರು ಸಹಕಾರಿಯಾಗಿದೆ. ವಿಧಾನಸಭೆಯ ವಿರೋಧ ಪಕ್ಷದ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕೆಲಸ ಮಾಡಲಾಗಿತ್ತು. ಈ ಗೆಲುವಿನ ಕ್ರೆಡಿಟ್ ಅನ್ನು ತಂದೆ ಮಾದೇಗೌಡ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆರ್.ಧ್ರುವನಾರಾಯಣ ಸೇರಿದಂತೆ ಎಲ್ಲರಿಗೂ ಒಪ್ಪಿಸುವೆ’ ಎಂದರು.

‘ಜೆಡಿಎಸ್‌ ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಶೇ.100ರಷ್ಟು ನಮ್ಮ ಪರವಾಗಿ ಕೆಲಸ ಮಾಡಿದ್ದರಿಂದ ಇಷ್ಟೊಂದು ಮತಗಳು ಬಂದವು’ ಎಂದು ತಿಳಿಸಿದರು.

ನನ್ನ ನಿರೀಕ್ಷೆ ಹುಸಿಯಾಯ್ತು

ಈ ಚುನಾವಣೆಯಲ್ಲಿ ನನ್ನ ನಿರೀಕ್ಷೆ ಹುಸಿಯಾಯಿತು. ನನ್ನ ಪರವಾಗಿ ಇನ್ನೂ ಹೆಚ್ಚಿನ ಮತಗಳು ಬರಬೇಕಿತ್ತು. ಪದವೀಧರರು, ಸರ್ಕಾರಿ ನೌಕರರು ಕೈ ಹಿಡಿಯುತ್ತಾರೆ ಎಂದು ನಂಬಿದ್ದೆ. ಆದರೆ, ಈಗ ಯಾರನ್ನೂ ನಂಬಲಾಗದ ಸ್ಥಿತಿಗೆ ಬಂದಿದ್ದೇನೆ. ಮತದಾರರ ತೀರ್ಮಾನವನ್ನು ಒಪ್ಪಲೇಬೇಕು. ಪಕ್ಷದ ವರಿಷ್ಠರು ಮತ್ತು ಬೆಂಬಲಿಸಿದವರೆಲ್ಲರಿಗೂ ಧನ್ಯವಾದ ಅರ್ಪಿಸುವೆ.

–ಎಚ್‌.ಕೆ. ರಾಮು, ಜೆಡಿಎಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT