ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ–ಅಡ್ವಾನ್ಸ್ಡ್‌: ವೀರೇಶ್‌ಗೆ 39ನೇ ರ‍್ಯಾಂಕ್‌

Last Updated 15 ಅಕ್ಟೋಬರ್ 2021, 20:25 IST
ಅಕ್ಷರ ಗಾತ್ರ

ಬೆಂಗಳೂರು: ಭಾರತೀಯ ತಂತ್ರಜ್ಞಾನ ಸಂಸ್ಥೆಗಳ (ಐಐಟಿ) ಪ್ರವೇಶಕ್ಕಾಗಿ ನಡೆಸುವ ಜೆಇಇ–ಅಡ್ವಾನ್ಸ್ಡ್‌ ಪರೀಕ್ಷೆ ಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.

ನಗರದ ಉಲ್ಲಾಳದ ಆಕ್ಸ್‌ಫರ್ಡ್‌ ಇಂಡಿಪೆಂಡೆಂಟ್‌ ಪಿಯು ಕಾಲೇಜಿನ ವೀರೇಶ್‌ ಬಿ.ಪಾಟೀಲ ಮತ್ತು ಯಲಹಂಕದ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ನ ಸಿ. ಪ್ರೇಮಾಂಕುರ್‌ ಕ್ರಮವಾಗಿ 39 ಮತ್ತು 54ನೇ ರ‍್ಯಾಂಕ್‌ ಪಡೆದಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕ್ರಮವಾಗಿ ಮೊದಲ ಮತ್ತು ಎರಡನೇ ರ‍್ಯಾಂಕ್‌ ಪಡೆದಿದ್ದಾರೆ. ಇಬ್ಬರು ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌ಗೆ ಪ್ರವೇಶ ಪಡೆಯಲು ಬಯಸಿದ್ದಾರೆ.

ವೀರೇಶ್‌, ಕರ್ನಾಟಕ ’ಕೆ-ಸಿಇಟಿ’ಯ ಎಂಜಿನಿಯರಿಂಗ್ ವಿಭಾಗದಲ್ಲಿ 7ನೇ ರ‍್ಯಾಂಕ್‌ ಮತ್ತು ’ಕಾಮೆಡ್-ಕೆ’ನಲ್ಲಿ ಪ್ರಥಮ ರ‍್ಯಾಂಕ್, ಜೆಇಇ ಮೇನ್ಸ್‌ನಲ್ಲಿ 187ನೇ ರ‍್ಯಾಂಕ್ ಪಡೆದಿದ್ದರು. ಅಲೇನ್ ತರಬೇತಿ ಕೇಂದ್ರದಲ್ಲಿ ವೀರೇಶ್‌ ತರಬೇತಿ ಪಡೆದಿದ್ದರು.

304 ಅಂಕಗಳನ್ನು ಗಳಿಸಿರುವ ವೀರೇಶ್‌, ಮೊದಲ ಪೇಪರ್‌ನಲ್ಲಿನ ವಿಷಯಗಳಾದ ಭೌತವಿಜ್ಞಾನದಲ್ಲಿ 56, ರಸಾಯನ ವಿಜ್ಞಾನದಲ್ಲಿ 54, ಗಣಿತದಲ್ಲಿ 36 ಹಾಗೂ ಎರಡನೇ ಪೇಪರ್‌ನಲ್ಲಿನ ವಿಷಯಗಳಾದ ಭೌತ ವಿಜ್ಞಾನದಲ್ಲಿ 54, ರಸಾಯನ ವಿಜ್ಞಾನದಲ್ಲಿ 56 ಮತ್ತು ಗಣಿತದಲ್ಲಿ 48 ಅಂಕಗಳನ್ನು ಗಳಿಸಿದ್ದಾರೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲ್ಲೂಕಿನಲ್ಲಿ ಕಂದಗಲ್‌ನವರಾದ ವೀರೇಶ್ ತಂದೆ–ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

‘ನಮ್ಮ ಪ್ರೋತ್ಸಾಹ ಸದಾ ಇತ್ತು. ಆದರೆ, ಆತನ ಸತತ ಪರಿಶ್ರಮದಿಂದ ಉತ್ತಮ ರ‍್ಯಾಂಕ್‌ ಬಂದಿದೆ' ಎಂದು ವೀರೇಶ್‌ ಅವರ ತಾಯಿ ರಾಜೇಶ್ವರಿ ತಿಳಿಸಿದ್ದಾರೆ. ‘ಪ್ರತಿ ದಿನ ಆರು ಗಂಟೆಗಳ ಕಾಲ ಓದುತ್ತಿದ್ದೆ. ಆದರೆ, ಒತ್ತಡದಿಂದ ಎಂದಿಗೂ ಓದಿಲ್ಲ. ಖುಷಿಯಿಂದ ಓದುತ್ತಿದ್ದೆ. 8ನೇ ತರಗತಿಯಿಂದಲೇ ಜೆಇಇಗೆ ಸಿದ್ಧತೆ ಆರಂಭಿಸಿದೆ. ಶಿಕ್ಷಕರು ಮತ್ತು ತಂದೆ–ತಾಯಿ ಮಾರ್ಗದರ್ಶನ ನೀಡಿದರು. ಅಲೇನ್‌ನಲ್ಲಿ ಪಡೆದ ತರಬೇತಿ ನೆರವಾಯಿತು’ ಎಂದು ವೀರೇಶ್‌ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದರೂ ಐಐಟಿ ಬಾಂಬೆ ಅಥವಾ ದೆಹಲಿಯಲ್ಲಿ ಪ್ರವೇಶ ಪಡೆಯುವ ಇಚ್ಛೆಯನ್ನು ಪ್ರೇಮಾಂಕುರ್‌ ವ್ಯಕ್ತಪಡಿಸಿದ್ದಾರೆ.

‘ನನಗೆ ಫಲಿತಾಂಶವು ತೃಪ್ತಿ ತಂದಿದೆ. ಐಐಟಿ ಬಾಂಬೆ ಅಥವಾ ದೆಹಲಿಯಲ್ಲಿ ಪ್ರವೇಶ ಪಡೆದು ಕಂಪ್ಯೂಟರ್ ಸೈನ್ಸ್‌ ಎಂಜಿನಿಯರಿಂಗ್‌ ಮಾಡುವ ಬಯಕೆ ಹೊಂದಿದ್ದೇನೆ. ಶಿಕ್ಷಕರು, ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ನನಗೆ ಪ್ರೋತ್ಸಾಹ ನೀಡಿದರು’ ಎಂದು ಪ್ರೇಮಾಂಕುರ್‌ ಹೇಳಿದ್ದಾರೆ.

‘ಅಲೇನ್‌’ನಲ್ಲಿ ತರಬೇತಿ ಪಡೆದಿದ್ದ ಆದ್ಯೋತ್ ಭಾರದ್ವಾಜ್ 144ನೇ ಮತ್ತು ಅನಿರುದ್ಧ 384ನೇ ರ‍್ಯಾಂಕ್ ಪಡೆದಿದ್ದಾರೆ.‌

ತಂದೆಯ ಕನಸು ಈಡೇರಿಕೆ: ಬೆಂಗಳೂರಿನ ಹೃ‍ಿಷಿತ್‌ ಬಿ.ಪಿ. ಅಖಿಲ ಭಾರತ ಮಟ್ಟದಲ್ಲಿ 392ನೇ ರ‍್ಯಾಂಕ್‌ ಪಡೆದಿದ್ದಾರೆ. ಹೃ‍ಿಷಿತ್‌ ಅವರ ತಂದೆ ಮೂತ್ರಪಿಂಡ ತಜ್ಞ ಡಾ. ಬಾಲಾಜಿ ಪ್ರಸಾದ್‌ ಅವರು ಕೋವಿಡ್‌–19 ನಿಂದಾಗಿ ಸಾವಿಗೀಡಾಗಿದ್ದಾರೆ. ತಂದೆಯ ಸಾವಿನ ಆಘಾತದಿಂದ ಚೇತರಿಸಿಕೊಂಡ ಹೃ‍ಿಷಿತ್‌, ಉತ್ತಮ ರ‍್ಯಾಂಕ್‌ ಪಡೆಯುವ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ.

ಎಫ್‌ಐಐಜೆಇಇಗೆ ಉತ್ತಮ ಫಲಿತಾಂಶ: ನಗರದ ಎಫ್‌ಐಐಟಿಜೆಇಇ ಕೇಂದ್ರದ ಹತ್ತು ವಿದ್ಯಾರ್ಥಿಗಳು ಅಗ್ರ ಒಂದು ಸಾವಿರ ಒಳಗೆ ಶ್ರೇಯಾಂಕ ಪಡೆದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಪ್ರಥಮ್ ಸಾಹು 131(ರಾಜ್ಯಕ್ಕೆ 3ನೇ ರ‍್ಯಾಂಕ್‌), ಉದ್ಧವ್‌ ವರ್ಮಾ 164 (ರಾಜ್ಯಕ್ಕೆ 6ನೇ ರ‍್ಯಾಂಕ್‌), ಹಾರ್ದಿಕ್‌ ಅಗರ್ವಾಲ್‌ 166 (ರಾಜ್ಯಕ್ಕೆ 7ನೇ ರ‍್ಯಾಂಕ್‌), ಮಿಹಿರ್‌ ದೇಶಪಾಂಡೆ 182 (ರಾಜ್ಯಕ್ಕೆ 8ನೇ ರ‍್ಯಾಂಕ್‌), ಲಕ್ಷವಂತ್‌ ಬಾಲಚಂದ್ರನ್‌ 188 (ರಾಜ್ಯಕ್ಕೆ 9ನೇ ರ‍್ಯಾಂಕ್‌) ಹಾಗೂ ಪ್ರಾಂಜಲ್‌ ಸಿಂಗ್‌ 216 (ರಾಜ್ಯಕ್ಕೆ 10ನೇ ರ‍್ಯಾಂಕ್‌) ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT