ಭಾನುವಾರ, ಅಕ್ಟೋಬರ್ 25, 2020
22 °C

ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರಕ್ಕೆ ನದಿಗಳ ಭೋರ್ಗರೆತ: ಪ್ರವಾಹ ಸ್ಥಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಶನಿವಾರ ಮಳೆಯಾಗಿಲ್ಲ. ಆದರೆ, ಕಳೆದ 2– 3 ದಿನಗಳಿಂದ ಸುರಿದ ಮಳೆ ಹಾಗೂ ನೆರೆಯ ಮಹಾರಾಷ್ಟ್ರದಿಂದ ನದಿಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಸೇನೆಯನ್ನು ಕರೆಯಿಸಿಕೊಳ್ಳಲಾಗಿದೆ. ಸಿಕಂದರಾಬಾದ್‌ನಿಂದ ಭೂಸೇನೆಯ 98 ಸದಸ್ಯರ ಒಂದು ತುಕಡಿ ಬಂದಿದೆ. ವಾಯುಸೇನೆಯ ಎರಡು ಹೆಲಿಕಾಪ್ಟರ್‌ಗಳನ್ನು ಬೀದರ್‌ನ ವಾಯು ನೆಲೆಯಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವು ನೀಡುವಂತೆ ವಾಯುಸೇನೆಗೂ ಮನವಿ ಮಾಡಲಾಗಿದೆ. ಎನ್‌ಡಿಆರ್‌ಎಫ್‌ನ ಮೂರು ತಂಡಗಳು ಹಾಗೂ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಬಾಗಲಕೋಟೆ, ಬಳ್ಳಾರಿ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಬೋಟ್‌ಗಳನ್ನು ತರಿಸಲಾಗಿದೆ. ಚಿತ್ರದುರ್ಗ ಮತ್ತು ಮಂಗಳೂರಿನ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಬೀದರ್‌ ಜಿಲ್ಲೆಯ ಅಗ್ನಿಶಾಮಕ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ. ಗೃಹ ರಕ್ಷಕ ದಳದ 101 ಮಂದಿ ಈಜುಗಾರರು, ಮುಳುಗು ಪರಿಣತರನ್ನು ನಿಯೋಜಿಸಲಾಗಿದೆ. ಖಾಸಗಿ ಆಂಬುಲೆನ್ಸ್‌ಗಳನ್ನೂ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

ಅಫಜಲಪುರ, ಕಲಬುರ್ಗಿ, ಜೇವರ್ಗಿ, ಚಿತ್ತಾಪುರ ಮತ್ತು ಶಹಾಬಾದ್‌ ತಾಲ್ಲೂಕುಗಳ 157 ಗ್ರಾಮಗಳು ಭೀಮಾ ತೀರದಲ್ಲಿದ್ದು, ಈ ಪೈಕಿ ನೀರು ನುಗ್ಗಿರುವ 55 ಗ್ರಾಮಗಳ 15 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 120 ‘ಕಾಳಜಿ’ (ಪರಿಹಾರ) ಕೇಂದ್ರಗಳನ್ನು ಆರಂಭಿಸಿದ್ದು, 18 ಸಾವಿರ ಜನರಿಗೆ ಆಶ್ರಯ ಕಲ್ಪಿಸಲಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯ 10 ಸಾವಿರ ಮನೆಗಳಿಗೆ ನೀರು ನುಗ್ಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಹುಬ್ಬಳ್ಳಿ ವರದಿ: ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ 1.15 ಲಕ್ಷ ಮತ್ತು ದೂಧ್‌ಗಂಗಾ ನದಿಯಿಂದ ಹರಿದುಬರುವ 14 ಸಾವಿರ ಕ್ಯುಸೆಕ್ ಸೇರಿ ಬೆಳಗಾವಿ ಜಿಲ್ಲೆಯ
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.29 ಲಕ್ಷ ಕ್ಯುಸೆಕ್ ನೀರು ಸೇರುತ್ತಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಪಾತ್ರದ ಅಕ್ಕಪಕ್ಕದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಜಮಖಂಡಿ ತಾಲ್ಲೂಕಿನ ಶೂರ್ಪಾಲಿ ಗ್ರಾಮದಲ್ಲಿ ಅಂದಾಜು 60 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆ ಜಲಾವೃತವಾಗಿದೆ. ಮುಧೋಳ ತಾಲ್ಲೂಕಿನಲ್ಲಿ ಘಟಪ್ರಭಾ ನದಿ ಪ್ರವಾಹ ಇಳಿಮುಖವಾಗಿದೆ. ಮಳೆಯಿಂದ ವಾರಗಟ್ಟಲೇ ನೆನೆದಿರುವ ಮಣ್ಣಿನ ಗೋಡೆಯ ಮನೆಗಳು ಕುಸಿದು ಬೀಳುತ್ತಿವೆ. ಮಹಾಲಿಂಗಪುರ ಪಟ್ಟಣದಲ್ಲಿ 18 ಮನೆಗಳು ಕುಸಿದಿವೆ.

ಕಲಬುರ್ಗಿ ಜಿಲ್ಲೆಯ ಸೊನ್ನಾ ಬ್ಯಾರೇಜ್‌ನಿಂದ 7.8 ಲಕ್ಷ ಕ್ಯುಸೆಕ್ ನೀರನ್ನು ಭೀಮಾ ನದಿಗೆ
ಬಿಟ್ಟಿರುವುದರಿಂದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜಲಾವೃತವಾಗಿರುವ ತಾರಾಪುರ ಗ್ರಾಮದ ಸಂತ್ರಸ್ತರನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.

ದೇವಣಗಾಂವ, ಕಡ್ಲೇವಾಡ, ಬ್ಯಾಡಗಿಹಾಳ, ಶಂಬೇವಾಡ, ಕುಮಸಗಿ ಗ್ರಾಮಗಳನ್ನು ಭೀಮಾ ನದಿ ಸುತ್ತುವರೆದಿದೆ. ಈ ಭಾಗದಲ್ಲಿ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

‘ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ’

ಬೆಂಗಳೂರು: ‘ರಾಜ್ಯದಲ್ಲಿ ಅತಿವೃಷ್ಟಿಯಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಹೀಗಾಗಿ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನೊಂದ ಜನರಿಗೆ ಸಾಂತ್ವನ ಹೇಳಬೇಕಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಇತರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಿದ್ದಾರೆ. ಇವರಿಗೆ ಜನರ ಪ್ರಾಣಕ್ಕಿಂತ ಚುನಾವಣೆ ಮುಖ್ಯವೇ ಎಂದು ಪ್ರಶ್ನಿಸಿದರು.

‘ಪ್ರವಾಹಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಹೋಗಬೇಕಿತ್ತು. ಆದರೆ, ವಯಸ್ಸಾಗಿದೆ. ಜೊತೆಗೆ ಕೊರೊನಾ ಸೋಂಕು ತೀವ್ರವಾಗಿದೆ ಎಂದು ನೆಪ ಹೇಳಿ ಹೋಗಿಲ್ಲ. ಜನರ ಕಷ್ಟಕ್ಕೆ ಸ್ಪಂದಿಸಲಾಗದಷ್ಟು ವಯಸ್ಸಾಗಿದ್ದರೆ ರಾಜೀನಾಮೆ ಕೊಟ್ಟು ಮನೆಯಲ್ಲೇ ಆರಾಮವಾಗಿರಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು