ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಧರ್ಮ ಹುಟ್ಟು ಹಾಕಿದ ಬಸವಣ್ಣ: ಕಾರಜೋಳ

Last Updated 3 ಆಗಸ್ಟ್ 2022, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ, ಧರ್ಮದ ಹೆಸರಿನ ಶೋಷಣೆ ತಡೆಯಲು ಹಾಗೂ ನೊಂದವರ ಕೈಹಿಡಿಯಲು 900 ವರ್ಷಗಳ ಹಿಂದೆ ಬಸವಣ್ಣ ಮತ್ತು ಸಮಕಾಲೀನ ಶರಣರುಬಸವಧರ್ಮ ಎಂಬ ಲಿಂಗಾಯತ ಧರ್ಮ ಹುಟ್ಟು ಹಾಕಿದರು. ಈಗ ನಾವು ಅವರ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ’ ಎಂದುಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ವಿಶ್ವಕಲ್ಯಾಣ ಮಿಷನ್ ಚಾರಿಟಬಲ್ ಟ್ರಸ್ಟ್, ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಜಂಟಿಯಾಗಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಬಸವ ಪಂಚಮಿ’ ಉದ್ಘಾಟಿಸಿ ಮಾತನಾಡಿದರು.

‘ಬಸವಣ್ಣ ಅವರ ತತ್ವ ಸಂದೇಶಗಳನ್ನು ಜನರ ಮಧ್ಯೆ ಬಿತ್ತುವಲ್ಲಿಹಿನ್ನಡೆಯಾಗಿದೆ. ಈಗ ನಾವು ಜಾತಿ, ಉಪಜಾತಿಗಳ ಹೆಸರಿನಲ್ಲಿ ಸಮಾಜ ಒಡೆಯುವ ಮೂಲಕ ಬಸವಣ್ಣ ಅವರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ.ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ಪ್ರಮುಖವಾಗಿದೆ. ಮತ ಬ್ಯಾಂಕ್ ರಾಜಕೀಯ ಇರುವವರೆಗೆ ರಾಜಕಾರಣಿಗಳಿಂದ ಸಮಾಜ ಬದಲಾಗದು’ ಎಂದು ಕಳವಳ ವ್ಯಕ್ತಪಡಿಸಿದರು.

‘21ನೇ ಶತಮಾನದಲ್ಲಿ ಅಡುಗೆ ಮನೆಯಿಂದಲೇ ಭೇದ ಭಾವ ಸೃಷ್ಟಿಯಾಗುತ್ತಿದೆ. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಮನೋಭಾವವಿದೆ.ಹೆಣ್ಣುಮಕ್ಕಳು ಮನಸ್ಸು ಮಾಡಿದರೆ ಬಸವತತ್ವ 24 ಗಂಟೆಗಳಲ್ಲಿ ಜಾರಿಯಾಗಲಿದೆ.ತಾಯಂದಿರು, ಶರಣರಿಂದ ಈ ಸಮಾಜದ ಬದಲಾವಣೆ ಸಾಧ್ಯ. ಬಸವಣ್ಣ ಅವರು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಅವರ ಈ ಆಶಯ ಇತ್ತೀಚಿನ ವರ್ಷಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿ ನೆರವೇರುತ್ತಿದೆ. ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿರುವ ವಿವಾಹಗಳಲ್ಲಿ ಶೇ 30 ರಷ್ಟು ಅಂತರ್ಜಾತಿಮದುವೆಯಾಗಿದೆ’ ಎಂದು ಹೇಳಿದರು.

2.62 ಕೋಟಿ ಸದಸ್ಯತ್ವ: ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ್ ಹೊಸಮನಿ, ‘ಬಸವಣ್ಣನವರ ವಚನಗಳಲ್ಲಿನ ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕು. ಇಲಾಖೆಯ ಡಿಜಿಟಲ್ ಪೋರ್ಟಲ್‌ನಲ್ಲಿ 92 ಲಕ್ಷ ಇ–ಪುಸ್ತಕಗಳು ಉಚಿತವಾಗಿ ದೊರೆಯುತ್ತಿವೆ. 2.62 ಕೋಟಿ ಮಂದಿ ಆನ್‌ಲೈನ್‌ನಲ್ಲಿ ಸದಸ್ಯರಾಗಿದ್ದಾರೆ. ಆಧ್ಯಾತ್ಮಿಕ ಪುಸ್ತಕಗಳೂ ಇಲಾಖೆಯ ಪೋರ್ಟಲ್‌ನಲ್ಲಿ ಲಭ್ಯವಿವೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಪುಸ್ತಕಗಳನ್ನು ಓದಬಹುದು’ ಎಂದು ತಿಳಿಸಿದರು.

ಕೂಡಲಸಂಗಮದ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಹಾಗೂಮಹಾರಾಷ್ಟ್ರದ ಅಲ್ಲಮಗಿರಿ ಮಠದ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

‘ಅನುಭವ ಮಂಟಪ ಕಲ್ಲಿನ ಗೋಡೆಯಾಗದಿರಲಿ’

‘2020ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ₹ 500 ಕೋಟಿ ಘೋಷಿಸಿದ್ದರು. ಅಲ್ಲಿ ನಿರ್ಮಾಣವಾಗುವ ಅನುಭವ ಮಂಟಪ ಕಲ್ಲಿನ ಗೋಡೆ ಆಗಬಾರದು. ಜಾತಿ, ಉಪಜಾತಿಗಳ ಹೆಸರಿನ ಕಾರ್ಯಕ್ರಮಗಳಿಗೆ ಸೀಮಿತ ಆಗಕೂಡದು’ ಎಂದುಗೋವಿಂದ ಕಾರಜೋಳ ಹೇಳಿದರು.

‘ಅನುಭವ ಮಂಟಪವುಬಸವದಳದ ಸೈನಿಕರನ್ನು ತಯಾರು ಮಾಡಬೇಕು. ಅಲ್ಲಿ ತಯಾರಾಗುವ ವಟುಗಳು ಮಠಾಧೀಶರಾಗಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT