ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸಾ ಬಂಡೂರಿ ಯೋಜನೆ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

Last Updated 6 ಮಾರ್ಚ್ 2022, 7:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯ ಕ್ಲಿಯರೆನ್ಸ್ ಸಿಗಬೇಕಿದ್ದು, ಅದೀಗ ಅಂತಿಮ ಹಂತದಲ್ಲಿದೆ. ಈ ಕುರಿತು ಈಗಾಗಲೇ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮಾತನಾಡಿದ್ದೇನೆ. ಅಧಿವೇಶನದ ನಂತರ ಮತ್ತೊಮ್ಮೆ ಸಚಿವರನ್ನು ಭೇಟಿಯಾಗಲಿದ್ದು, ಯೋಜನೆ ಶೀಘ್ರ ಆರಂಭವಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಅಮರಗೋಳದಲ್ಲಿ ಭಾನುವಾರ ಹುಬ್ಬಳ್ಳಿ ಎಪಿಎಂಸಿ ಪ್ರಾಂಗಣದ ಮಹಾದ್ವಾರ, ಜಾನುವಾರು ಮಾರುಕಟ್ಟೆ, ಹಾಗೂ ಈರುಳ್ಳಿ ಸಂಗ್ರಹಣಾ ಗೋದಾಮು ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾಲಿನ 12 ಟಿಎಂಸಿ ಬಳಸಿಕೊಳ್ಳಲು ಯಾವುದೇ ಅಡ್ಡಿ ಇಲ್ಲ. ಒಟ್ಟಾರೆ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಬರಬೇಕಿದೆ. ತೀರ್ಪನ್ನು ಮೂರು ರಾಜ್ಯಗಳು ಒಪ್ಪಿಕೊಳ್ಳಬೇಕಾಗುತ್ತದೆ ಎಂದರು.

ಮೇಕೆದಾಟು ಯೋಜನೆ ಇವತ್ತಿನದಲ್ಲ. ಕರ್ನಾಟಕ ವಿದ್ಯುತ್ ನಿಗಮವು 1996ರಲ್ಲಿ ಈ ಯೋಜನೆಯ ಡಿಪಿಆರ್ ಸಿದ್ಧಪಡಿಸಲು ಮುಂದಾಗಿತ್ತು. ಆದರೆ, ಐದು ವರ್ಷಗಳಾದರೂ ಸಿದ್ಧಗೊಂಡಿರಲಿಲ್ಲ. ನಂತರ ಸಿದ್ಧಗೊಂಡಿದ್ದ ಡಿಪಿಆರ್ ಅನ್ನು ಬದಲಿಸುವಂತೆ 2012ರಲ್ಲಿ ನಾನು ಸೂಚಿಸಿದ್ದೆ. ಇದೀಗ ಅಂತಿಮ ಹಂತಕ್ಕೆ ಬಂದಿದೆ. ಕಾಮಗಾರಿಯನ್ನು ಬೇಗ ಆರಂಭಿಸಬೇಕು ಎಂಬ ಉದ್ದೇಶದಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆಯೇ ಹೊರತು, ಯೋಜನೆಗೆ ಸಂಬಂಧಿಸಿದ ಕಾಂಗ್ರೆಸ್ ಪಾದಯಾತ್ರೆಯ ಒತ್ತಡದಿಂದಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಯಾವುದೇ ನದಿ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ತನ್ನದೇ ಆದ ಮಾನದಂಡಗಳಿವೆ. ಕೃಷ್ಣಾ ನದಿ ಯೋಜನೆಯನ್ನು ಆ ಮಾನದಂಡಗಳಡಿ ತರಲು ಅಗತ್ಯವಿರುವ ತಾಂತ್ರಿಕ ಕಾರ್ಯಗಳನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬಳಿಕ, ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು‌. ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ಯೋಜನೆಯು ಇಲಾಖೆಯ ಅನುದಾನದಲ್ಲಿ ಜಾರಿಯಾಗಲಿದೆ. ಅದಕ್ಕೆ ಬೇಕಾದ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹುಬ್ಬಳ್ಳಿ ಎಪಿಎಂಸಿ ಅಭಿವೃದ್ಧಿಗಾಗಿ ಇಲಾಖೆಯ ಅನುದಾನದಲ್ಲಿ ₹48 ಕೋಟಿ ಮೊತ್ತದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಮುಖ್ಯವಾಗಿ ಇಲ್ಲಿಯ ಹಮಾಲರು, ಸಹಾಯಕರು ಹಾಗೂ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುವುದು ಇಲ್ಲಿನ ಪ್ರಮುಖ ಬೇಡಿಕೆಯಾಗಿದೆ. ಅದಕ್ಕಾಗಿ ಪ್ರಸ್ತಾವ ಕಳಿಸುವಂತೆ ಸೂಚಿಸಿದ್ದೇನೆ. ಅಲ್ಲದೆ, ರಾಜ್ಯದಾದ್ಯಂತ ಇಂತಹ ಬೇಡಿಕೆ ಇದ್ದು, ಅದಕ್ಕಾಗಿ ವಸತಿ ಯೋಜನೆಯನ್ನು ರೂಪಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು. ಇದರಿಂದಾಗಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲಾ ಎಪಿಎಂಸಿ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಜಗದೀಶ ಶೆಟ್ಟರ್, ಪ್ರಸಾದ ಅಬ್ಬಯ್ಯ, ಎಪಿಎಂಸಿ ಅಧ್ಯಕ್ಷ ಸುರೇಶ ಕಿರೇಸೂರ, ಉಪಾಧ್ಯಕ್ಷ ಬಸವರಾಜ ನಾಯ್ಕರ್, ಹುಡಾ ಅಧ್ಯಕ್ಷ ನಾಗೇಶ್ ಕಲ್ಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೇರಿದಂತೆ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT