ಶನಿವಾರ, ಸೆಪ್ಟೆಂಬರ್ 25, 2021
24 °C

ಕಲಬುರ್ಗಿ: ‘ಕೈ’ ನಾಯಕರ ತೆರೆಮರೆ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತಂತ್ರ ಸ್ಥಿತಿ ನಿರ್ಮಾಣ ಆಗಿರುವ ಕಲಬುರ್ಗಿ ಮಹಾನಗರಪಾಲಿಕೆಯಲ್ಲಿ ಅಧಿಕಾರ ಚುಕ್ಕಾಣಿಗಾಗಿ ತೆರೆಮರೆಯಲ್ಲಿ ರಾಜಕೀಯ ಲೆಕ್ಕಾಚಾರ ಬಿರುಸುಗೊಂಡಿದೆ. ಈ ಮಧ್ಯೆ, ಪಾಲಿಕೆಯ ಚುನಾಯಿತ ಆರು ಕಾಂಗ್ರೆಸ್‌ ಸದಸ್ಯರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಸದಾಶಿವನಗರದಲ್ಲಿರುವ ಶಿವಕುಮಾರ್‌ ಅವರ ನಿವಾಸಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಜೊತೆ ಬಂದ ಪಾಲಿಕೆ ಸದಸ್ಯರು, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಕೆಲಹೊತ್ತು ಚರ್ಚೆ ನಡೆಸಿದರು.

ಬಳಿಕ ಮಾತನಾಡಿದ ಪಾಲಿಕೆ ಸದಸ್ಯ ಸಚಿನ್ ಸಿರವಾಳ, ‘ನಾವು ನಮ್ಮ ಅಭಿಪ್ರಾಯವನ್ನು ಅಧ್ಯಕ್ಷರಿಗೆ ತಿಳಿಸಿದ್ದೇವೆ. ಪಕ್ಷದ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಂಡು ನಮಗೆ ತಿಳಿಸುತ್ತಾರೆ. ಆ ನಿರ್ಧಾರಕ್ಕೆ ನಾವು ಬದ್ಧ’ ಎಂದರು.

ಪ್ರಿಯಾಂಕ್ ಖರ್ಗೆ ಮಾತನಾಡಿ, ‘ಸದ್ಯದ ಸ್ಥಿತಿಗತಿಯನ್ನು ಅಧ್ಯಕ್ಷರಿಗೆ ತಿಳಿಸಿದ್ದೇನೆ. ಜೆಡಿಎಸ್ ಜೊತೆಗೆ ಚರ್ಚೆ ನಡೆದಿದೆ. ಅವರು (ಜೆಡಿಎಸ್‌ನವರು) ಅವರ ಪಕ್ಷದ ಹಿತಾಸಕ್ತಿ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ನಾವು ನಮ್ಮ ಪಕ್ಷದ ಹಿತದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಸದ್ಯಕ್ಕೆ ಅವರು ಅವರ ಬೇಡಿಕೆ ಇಟ್ಡಿದ್ದಾರೆ. ಸದಸ್ಯರ ಆಯ್ಕೆಯ ಗೆಜೆಟ್‌ ಅಧಿಸೂಚನೆಯನ್ನು ಸರ್ಕಾರ ಮೊದಲು ಹೊರಡಿಸಲಿ’ ಎಂದರು.

‘ಬಿಜೆಪಿಯವರು ನಮ್ಮ ಪಕ್ಷದ ಸದಸ್ಯರಿಗೆ ಮಂಡಳಿ ಸದಸ್ಯ ಮಾಡುತ್ತೇವೆ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುತ್ತೇವೆ ಎಂದು ಆಮಿಷ ಒಡ್ಡುತ್ತಿದ್ದಾರೆ. ಸರ್ಕಾರ ಎಲ್ಲ ರೀತಿಯಲ್ಲಿ ಆಡಳಿತ ಯಂತ್ರ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದು ದೂರಿದರು.

‘ಹುಬ್ಬಳ್ಳಿ– ಧಾರವಾಡ ಮತ್ತು ಕಲಬುರ್ಗಿ ಎರಡೂ ಮಹಾನಗರಪಾಲಿಕೆಗಳಲ್ಲಿ ಬಿಜೆಪಿಗೆ ಸಂಖ್ಯಾ ಬಲ ಇಲ್ಲ. ಹೀಗಾಗಿ, ಅವರು ಮೇಯರ್‌ ಆಯ್ಕೆಗೆ ಅಧಿಸೂಚನೆ ಹೊರಡಿಸುತ್ತಿಲ್ಲ‘ ಎಂದು ಪ್ರಿಯಾಂಕ್‌ ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು