ಬೆಂಗಳೂರು: ಧರ್ಮ ರಕ್ಷಣೆಯ ಹೆಸರಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬೆಳೆಸಿದ ಗೂಂಡಾ ಸಂಸ್ಕೃತಿಗೆ ಸಾತನೂರು ಬಳಿ ನಡೆದ ಯುವಕನ ಹತ್ಯೆ ಸಾಕ್ಷಿ. ಈ ಹತ್ಯೆಯ ಹೊಣೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಂತಹ ಅಸಮರ್ಥ ಗೃಹ ಸಚಿವರೇ ಹೊರಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಯ ಹೇಳಿದ್ದಾರೆ.
ಕನಕಪುರ ತಾಲ್ಲೂಕಿನ ಸಾತನೂರು ಬಳಿ ಶುಕ್ರವಾರ ಮಧ್ಯರಾತ್ರಿ ವಾಹನದಲ್ಲಿ ಜಾನುವಾರು ಸಾಗಿಸುತ್ತಿದ್ದ ಮಂಡ್ಯ ಮೂಲದ ಇರ್ಗೀಷ್ ಪಾಷ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಈ ಸಂಬಂಧ ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿದ್ದರಾಮಯ್ಯ, ಕರ್ನಾಟಕ ಇಂತಹ ಅಸಮರ್ಥ, ಅದಕ್ಷ ಮತ್ತು ಬೇಜವಾಬ್ದಾರಿ ಗೃಹ ಸಚಿವರನ್ನು ಎಂದೂ ನೋಡಿರಲಿಲ್ಲ. ತನ್ನ ಇಲಾಖೆಯ ಮೇಲೆ ನಿಯಂತ್ರಣ ಇಲ್ಲದ ಈ ಸಚಿವರಿಗೆ ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಮೊದಲು ಆರಗ ಜ್ಞಾನೇಂದ್ರ ಅವರನ್ನು ಸಂಪುಟದಿಂದ ಕಿತ್ತು ಹಾಕಿ. ಗೋರಕ್ಷಣೆಯ ಹೆಸರಲ್ಲಿ ನಡೆದ ಹತ್ಯೆ ಕೇವಲ ಹುಚ್ಚಾಟ ಆಗಿರಲಾರದು. ಇದು ಚುನಾವಣಾ ದಿನಗಳಲ್ಲಿ ಕೋಮುದ್ವೇಷವನ್ನು ಬಡಿದೆಬ್ಬಿಸುವ ಯೋಜಿತ ಸಂಚಿನ ಭಾಗವಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಚುನಾವಣಾ ಪ್ರಕ್ರಿಯೆ ಚಾಲನೆಯಲ್ಲಿರುವಾಗಲೇ ನಗರದಲ್ಲಿ ನಿತ್ಯ ಅತ್ಯಾಚಾರ, ಕೊಲೆಗಳು ನಿರ್ಭೀತಿಯಿಂದ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಈ ಸರ್ಕಾರ ಅಸ್ತಿತ್ವದಲ್ಲಿರುವಾಗ ಚುನಾವಣೆ ನ್ಯಾಯಯುತವಾಗಿ ನಡೆಯುವುದು ಅನುಮಾನ. ಚುನಾವಣಾ ಆಯೋಗ ಈ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.