ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ ಹೋರಾಟಗಾರರು

Last Updated 28 ಡಿಸೆಂಬರ್ 2020, 8:23 IST
ಅಕ್ಷರ ಗಾತ್ರ
ADVERTISEMENT
""

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಕಟ್ಟಡದ ದ್ವಾರದ ಬಳಿ ಕನ್ನಡ ಹೋರಾಟಗಾರರು ಸೋಮವಾರ ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದರು.

‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’, ‘ಕರ್ನಾಟಕ ಮಾತೆಗೆ ಜೈ’, ‘ತಾಯಿ ಭುವನೇಶ್ವರಿಗೆ ಜೈ’ ಎಂದು ಘೋಷಣೆ ಕೂಗುತ್ತಾ, ಬಾವುಟ ಕಟ್ಟಿದ್ದ ಸ್ತಂಭವನ್ನು ಅವರು ಹೊತ್ತು ತಂದು ಸ್ಥಾಪಿಸಿದರು.

ಈ ವೇಳೆ, ತಡೆಯಲು ಬಂದ ಪೊಲೀಸರನ್ನು ಹೋರಾಟಗಾರರ ತರಾಟೆಗೆ ತೆಗೆದುಕೊಂಡರು. ವಾಗ್ವಾದ ಮತ್ತು ತಳ್ಳಾಟ ನೂಕಾಟ ನಡೆಯಿತು.

‘ಪಾಲಿಕೆ ಎದುರು ಕನ್ನಡ ದ್ವಜ ಸ್ತಂಭ ಸ್ಥಾಪಿಸಲು ಅನುಮತಿ ಇಲ್ಲ’ ಎಂದು ಪೊಲೀಸರು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂಕರ, ‘ಅದು ನಿಮ್ಮ ಕೆಲಸವಲ್ಲ. ಕನ್ನಡ ನೆಲದಲ್ಲಿ ಕನ್ನಟ ಬಾವುಟ ಹಾರಿಸಲು ಅವಕಾಶವಿಲ್ಲವೆಂದರೆ ಏನರ್ಥ? ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಕನ್ನಡಕ್ಕೆ ದ್ರೋಹ ಬಗೆಯಬೇಡಿ’ ಎಂದು ಕಿಡಿಕಾರಿದರು.

ಸ್ತಂಭವನ್ನು ವಶಕ್ಕೆ ಪಡೆಯಲು ಮುಂದಾದಾಗ, ಕೆಲವರು ರಾಷ್ಟ್ರಗೀತೆ ಹಾಡಿದರು. ಆ ನಡುವೆಯೂ ಪೊಲೀಸರು ಸ್ತಂಭವನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದರು.

ತಾಳೂಕರ ಮೊದಲಾದವರು ಕನ್ನಡದ ಬಾವುಟ ಶಾಲನ್ನು ಕುತ್ತಿಗೆಗೆ ಮತ್ತು ಸ್ತಂಭಕ್ಕೆ ಸೇರಿಸಿ ಬಿಗಿದುಕೊಂಡು ಕುಳಿತರು.

‘ರಾಜಕಾರಣಿಗಳು, ಶಾಸಕರ ಎಂಜಲು ತಿನ್ನುವುದನ್ನು ಪೊಲೀಸರು ಬಿಡಬೇಕು. ಕನ್ನಡ ನೆಲ, ಬಾವುಟ ಕಾಯಬೇಕು. ಪೊಲೀಸರು ಕತ್ತೆ, ದನ ಕಾಯುವುದಕ್ಕೂ ಲಾಯಕ್ಕಿಲ್ಲ. ಕನ್ನಡ ಹೋರಾಟಗಾರರ ಮೇಲೆ ದರ್ಪ ತೋರಿಸುವುದನ್ನು ನಿಲ್ಲಿಸಬೇಕು. ರಕ್ಷಣೆ ಕೊಡುವುದು ಬಿಟ್ಟು ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ನಿಮಗೆ ನಾಚಿಕೆಯಾಗಬೇಕು. ಬಾವುಟ ತೆರವುಗೊಳಿಸಿದರೆ ರಾಜ್ಯದಾದ್ಯಂತ ಬೆಂಕಿ ಹೊತ್ತಿಕೊಳ್ಳುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರ್ತಿಗೆ ಪಾದರಕ್ಷೆ ನೀಡಿದರು: ಇದೇ ವೇಳೆ, ‘ಪಾಲಿಕೆ ಎದುರು ಕನ್ನಡ ಬಾವುಟ ಹಾರಾಡುವವರೆಗೂ ಪಾದರಕ್ಷೆ ತೊಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದ್ದ ಹೋರಾಟಗಾರ್ತಿ ಕಸ್ತೂರಿ ಬಾವಿ ಅವರಿಗೆ ಹೋರಾಟಗಾರರು ಪಾದರಕ್ಷೆ ತೊಡಿಸಿ ಸತ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT