ಬುಧವಾರ, ಜನವರಿ 20, 2021
28 °C
ಸಾಂಸ್ಕೃತಿಕ ಚಟುವಟಿಕೆಗೆ ಮರುಜೀವ ನೀಡಲು ಯೋಜನೆ

ಅಕಾಡೆಮಿಗಳ ನೇತೃತ್ವದಲ್ಲಿ 10 ದಿನಗಳ ‘ಕಲಾಗ್ರಾಮೋತ್ಸವ’

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಕಲಾಗ್ರಾಮ

ಬೆಂಗಳೂರು: ನಗರದಲ್ಲಿ ಒಂದೇ ಸೂರಿನಡಿ ನಾಟಕ, ಯಕ್ಷಗಾನ, ಜಾನಪದ ಕುಣಿತ, ಗಾಯನ, ನೃತ್ಯ, ಬಯಲಾಟ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಅನಾವರಣಗೊಳ್ಳಲು ವೇದಿಕೆ ಸಜ್ಜಾಗುತ್ತಿದೆ.

ಎಲ್ಲ ಸಾಂಸ್ಕೃತಿಕ ಅಕಾಡೆಮಿಗಳು, ಪ್ರಾಧಿಕಾರಗಳು, ರಂಗಾಯಣ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ವಿಭಾಗ, ಕರ್ನಾಟಕ ಚಿತ್ರಕಲಾ ಪರಿಷತ್ತು, ಸರ್ಕಾರಿ ಅನುದಾನಿತ ಸಂಘ–ಸಂಸ್ಥೆಗಳು ಒಟ್ಟಾಗಿ ಬೃಹತ್ ಸಾಂಸ್ಕೃತಿಕ ಉತ್ಸವ ಏರ್ಪಡಿಸಲು ಮುಂದಾಗಿವೆ. ಈ ಮೂಲಕ ಕೋವಿಡ್‌ನಿಂದ ಸೊರಗಿದ್ದ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶ ಹೊಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಫೆಬ್ರುವರಿ ತಿಂಗಳಲ್ಲಿ 10 ದಿನಗಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ಕಲಾಗ್ರಾಮೋತ್ಸವ’ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಸುಮಾರು ₹ 2 ಕೋಟಿ ವೆಚ್ಚವಾಗಲಿದೆ. ಇಲಾಖೆ ಹಾಗೂ ಅಕಾಡೆಮಿಗಳೇ ಈ ವೆಚ್ಚ ಭರಿಸಲಿವೆ.

ಕರ್ನಾಟಕ ಲಲಿತಕಲಾ ಅಕಾಡೆಮಿಯ ನೇತೃತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇಲಾಖೆಯ ಅಧಿಕಾರಿಗಳ ಜತೆಗೆ ಅಕಾಡೆಮಿ ಮತ್ತು ಪ್ರಾಧಿಕಾರಿಗಳ ಅಧ್ಯಕ್ಷರು ಈ ಬಗ್ಗೆ ಸಭೆ ನಡೆಸಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಕಲಾ ತಂಡಗಳು ಹಾಗೂ ಕಲಾವಿದರು ಬರಲಿದ್ದು, ಏಕಕಾಲದಲ್ಲಿ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಲಾವಿದರ ಹೆಸರು ನೋಂದಣಿ ಪ್ರಕ್ರಿಯೆ ಕೂಡ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಚಟುವಟಿಕೆಗಳು ನಡೆದಿರಲಿಲ್ಲ. ಈಗ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವ ಕಾರಣ ಇಲಾಖೆಯು ಈ ಯೋಜನೆ ಹಮ್ಮಿಕೊಂಡಿದೆ.

30 ಎಕರೆಯಲ್ಲಿ ಕಾರ್ಯಕ್ರಮ: ಕಲಾಗ್ರಾಮದಲ್ಲಿ ನಾಲ್ಕು ಬಯಲು ರಂಗಮಂದಿರಗಳು ಹಾಗೂ ಸುವರ್ಣ ಸಾಂಸ್ಕೃತಿಕ ಸಮುಚ್ಚಯವಿದೆ. ಇವುಗಳ ಜತೆಗೆ ತಾತ್ಕಾಲಿಕ ವೇದಿಕೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಕಲಾಗ್ರಾಮದ 30 ಎಕರೆಯಲ್ಲೂ ಒಂದಲ್ಲ ಒಂದು ಕಲಾ ಚಟುವಟಿಕೆ ನಡೆಸಲು ಯೋಜನೆ ರೂಪಿಸಲಾಗಿದೆ. ಕಲಾ ಶಿಬಿರಗಳು ಕೂಡ ನಡೆಯಲಿವೆ. ಪ್ರತಿ ಅಕಾಡೆಮಿ ಹಾಗೂ ಸಂಸ್ಥೆಗಳು ತನ್ನ ವ್ಯಾಪ್ತಿಯಲ್ಲಿ ಕಲಾ ತಂಡಗಳು ಹಾಗೂ ಕಲಾವಿದರನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಿವೆ.

‘ಕೋವಿಡ್ ಇಳಿಮುಖವಾದ ಕಾರಣ ನಿರ್ಬಂಧ ಸಡಿಲಿಸಲಾಗುತ್ತಿದೆ. ಕಳೆದ ವರ್ಷ ಕಲಾಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಚಿತ್ರಸಂತೆ ಮಾದರಿ ಕಲಾ ಪ್ರದರ್ಶನ ಏರ್ಪಡಿಸಲು ನಾವು ಯೋಜನೆ ರೂಪಿಸಿದ್ದೆವು. ಬಳಿಕ ಎಲ್ಲ ಅಕಾಡೆಮಿಗಳು ಹಾಗೂ ಸಂಘ–ಸಂಸ್ಥೆಗಳು ಒಟ್ಟಾಗಿ ಉತ್ಸವ ನಡೆಸಲು ನಿರ್ಧರಿಸಲಾಯಿತು. ಈ ಬಗ್ಗೆ ಸಭೆ ನಡೆಸಲಾಗಿದ್ದು, ರೂಪರೇಷೆ ಸಿದ್ಧವಾಗುತ್ತಿದೆ’ ಎಂದು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ತಿಳಿಸಿದರು.

‘ಸರ್ಕಾರದ ಮಾರ್ಗಸೂಚಿ ಅನುಸಾರ ಕೋವಿಡ್ ನಿಯಮಗಳನ್ನು ಪಾಲಿಸಿ, ‘ಕಲಾಗ್ರಾಮೋತ್ಸವ’ ನಡೆಸಲು ನಿರ್ಧರಿಸಲಾಗಿದೆ. ಈ ಉತ್ಸವದಿಂದ ಕಲಾಗ್ರಾಮವೂ ಮುನ್ನೆಲೆಗೆ ಬರಲಿದೆ. ಕೋವಿಡ್‌ ಪ್ರಕರಣಗಳು ಏರಿಕೆ ಕಂಡಲ್ಲಿ ಮುಂದೂಡಬೇಕಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.

500 ಮಳಿಗೆಗಳಲ್ಲಿ ಕಲಾಕೃತಿಗಳ ಪ್ರದರ್ಶನ

‘ಕಲಾಗ್ರಾಮೋತ್ಸವದಲ್ಲಿ’ ಕಲಾಕೃತಿಗಳ ಪ್ರದರ್ಶನಕ್ಕೆ 500 ಮಳಿಗೆಗಳನ್ನು ಸಿದ್ಧಗೊಳಿಸಲು ಲಲಿತಕಲಾ ಅಕಾಡೆಮಿ ಯೋಜನೆ ರೂಪಿಸಿದೆ. ಈ ಮಳಿಗೆಗಳಲ್ಲಿ ‌‘ಚಿತ್ರ ಸಂತೆ’ ಮಾದರಿಯಲ್ಲಿಯೇ ಕಲಾಕೃತಿಗಳು ಪ್ರದರ್ಶನ ಕಾಣಲಿವೆ. ಕಲಾಕೃತಿಗಳ ಮಾರಾಟ ಕೂಡ ನಡೆಯಲಿದೆ. ಜಾನಪ‍ದ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿಗಳ ಕಲಾಕೃತಿಗ ಪ್ರದರ್ಶನಕ್ಕೆ ಕೂಡ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕೂಡ ನಡೆಯಲಿದೆ‘ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

* ವಿವಿಧ ಅಕಾಡೆಮಿ, ಪ್ರಾಧಿಕಾರ ಹಾಗೂ ಸಾಂಸ್ಕೃತಿಕ ಸಂಸ್ಥೆಗಳು ಒಟ್ಟಾಗಿ ‘ಕಲಾಗ್ರಾಮೋತ್ಸವ’ ನಡೆಸಲು ಯೋಜನೆ ರೂಪಿಸಲಾಗಿದ್ದು, ಸರ್ಕಾರದ ಅನುಮತಿ ಪಡೆದು ನಡೆಸಲಾಗುತ್ತದೆ.

- ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು