ಬೆಂಗಳೂರು: ‘ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಚಿತ್ರರಂಗ ಕೋವಿಡ್‌ನಿಂದ ತತ್ತರಿಸಿದ್ದು, ಈ ಸಮಯದಲ್ಲಿ ಚಿತ್ರರಂಗಕ್ಕೆ ಹೆಚ್ಚಿನ ಬೆಂಬಲ, ನೆರವಿನ ಅಗತ್ಯವಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಅವರ ನಿರ್ದೇಶನದ ‘5ಡಿ’ ಸಿನಿಮಾದ ಮೊದಲ ನೋಟವನ್ನು (ಲುಕ್) ಭಾನುವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ನಾನೂ ಮೊದಲು ಒಬ್ಬ ಚಿತ್ರ ಪ್ರದರ್ಶಕ. ಇಂದಿರಾ ಗಾಂಧಿ ಹೆಸರಲ್ಲಿ ನನ್ನ ಚಿತ್ರಮಂದಿರ ಇತ್ತು. ನನ್ನ ಅನೇಕ ಸ್ನೇಹಿತರು ಸಿನಿಮಾ ರಂಗದಲ್ಲಿದ್ದಾರೆ. 25 ವರ್ಷಗಳಿಂದ ಇಂಥ ಸಮಾರಂಭಗಳಿಗೆ ನನ್ನನ್ನು ಕರೆಯುತ್ತಾರೆ. ಒಂದೆರೆಡು ಬಾರಿ ಹೋಗಿದ್ದು ಬಿಟ್ಟರೆ, ಹೆಚ್ಚಿಗೆ ಹೋಗಿಲ್ಲ’ ಎಂದರು.
‘ಬೆಂಗಳೂರಿಗೆ ಬರಿಗೈಲಿ ಬಂದು 50ಕ್ಕೂ ಹೆಚ್ಚು ಸಿನಿಮಾ ನಿರ್ದೇಶನ ಮಾಡಿದ ನಾರಾಯಣ್ ಅವರ ಸಾಧನೆ ಶ್ಲಾಘನೀಯ. ಕೋವಿಡ್‌ನಿಂದ ಚಿತ್ರರಂಗ, ಪ್ರವಾಸೋದ್ಯಮ ಎಲ್ಲವೂ ನೆಲಕಚ್ಚಿವೆ. ಚಿತ್ರಮಂದಿರ ಮಾಲೀಕರಿಂದ ಹಿಡಿದು ಕಲಾವಿದರು, ತಂತ್ರಜ್ಞರು ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಎಲ್ಲರ ಬಡ್ಡಿ ಮೀಟರ್ ಏರುತ್ತಲೇ ಇದೆ. ಎಷ್ಟೋ ಕಲಾವಿದರು, ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ. ಲಾಕ್ ಡೌನ್‌ನಿಂದ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲು ಚಿತ್ರಮಂದಿರ ಮಾಲೀಕರಿಗೆ ಆಗುತ್ತಿಲ್ಲ. ಸರ್ಕಾರ ಯಾವುದೇ ಸಹಕಾರ ನೀಡುತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿಲ್ಲ. ಸರ್ಕಾರ ಈ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.
ಎಸ್. ನಾರಾಯಣ್ ಮಾತನಾಡಿ, ‘ಚಿತ್ರದ ಮೊದಲ ಶೆಡ್ಯೂಲ್ ಯಶಸ್ವಿಯಾಗಿದ್ದು, ಎರಡನೇ ಶೆಡ್ಯೂಲ್ ಈಗ ಆರಂಭವಾಗಲಿದೆ. ಇಂದು ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದೇವೆ’ ಎಂದರು.
ಶೀಘ್ರ ಸಿಎಂ ಆಗಲಿ: ‘ಸಿನಿಮಾದಿಂದ ಬಂದ ಅನೇಕರು ಮುಖ್ಯಮಂತ್ರಿ ಆಗಿದ್ದಾರೆ. ಎನ್.ಟಿ. ರಾಮರಾವ್, ಎಂ.ಜಿ. ರಾಮಚಂದ್ರನ್, ಜಯಲಲಿತಾ, ಕರುಣಾನಿಧಿ ಹೀಗೆ. ರೊನಾಲ್ಡ್ ರೇಗನ್ ಅಮೆರಿಕ ಅಧ್ಯಕ್ಷರಾದರು. ಅದೇ ರೀತಿ ಡಿ.ಕೆ. ಶಿವಕುಮಾರ್ ಕೂಡಾ ಮುಖ್ಯಮಂತ್ರಿ ಆಗುತ್ತಾರೆ ಎಂಬ ನಂಬಿಕೆ ಇದೆ’ ಎಂದು ರಾಜೇಂದ್ರ ಸಿಂಗ್ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.