ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಸಿದ ಕೋಳಿ ಸಾರು ಮಾಡಿಕೊಡಲು ಆಗಲೇ ಇಲ್ಲ!

ಅಣ್ಣನ ಒಡನಾಟ ನೆನೆದ ಕೆಂಚತಿಮ್ಮಯ್ಯ
Last Updated 12 ಜೂನ್ 2021, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಬಂದು ಆಸ್ಪತ್ರೆಗೆ ದಾಖಲಾಗುವುದಕ್ಕೂ ಹದಿನೈದು ಇಪ್ಪತ್ತು ದಿನಗಳಿಗೆ ಮುನ್ನ ಅಣ್ಣ ಊರಿಗೆ (ಮಂಚನಬೆಲೆ ಬಳಿಯ ಸೂಲಿವಾರ) ಬಂದಿದ್ದರು. ಜೊತೆಯಲ್ಲಿ ಐದು ಜನ ಸ್ನೇಹಿತರೂ ಇದ್ದರು. ನಾಟಿ ಕೋಳಿ ಸಾರಿನ ಅಡುಗೆ ಮಾಡಿಸು ಎಂದರು. ಆ ಸಮಯದಲ್ಲಿ ಕೋಳಿ ಮಾಂಸ ಸಿಗಲೇ ಇಲ್ಲ’ ಎಂದು ಸಿದ್ಧಲಿಂಗಯ್ಯ ಅವರ ಚಿಕ್ಕಮ್ಮನ ಮಗ ಕೆಂಚತಿಮ್ಮಯ್ಯ ಬೇಸರ ವ್ಯಕ್ತಪಡಿಸಿದರು.

ನಗರದ ಕಲಾಗ್ರಾಮದಲ್ಲಿ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಅವರು, ಅವರ ಕೊನೆಯ ಭೇಟಿಯನ್ನು ನೆನಪು ಮಾಡಿಕೊಂಡರು. ‘ಮತ್ತೆ ಸಿಗುತ್ತೇನೆ ಎಂದು ಹೇಳಿ ಬಂದಿದ್ದರು. ಆದರೆ, ಈಗ ಬಾರದ ಲೋಕಕ್ಕೆ ಹೋಗಿಬಿಟ್ಟರು’ ಎಂದರು.

‘ಕೋಳಿ ಇರದಿದ್ದರೆ ಮುದ್ದೆ, ಉಪ್ಸಾರು ಮಾಡು ಎಂದು ಮಾವ ಹೇಳಿದರು. ಅದರಂತೆ ಮಾಡಿಕೊಟ್ಟಾಗ, ಹೊಟ್ಟೆ ತುಂಬಾ ತಿಂದು, ಬಾಯಿ ತುಂಬಾ ಹೊಗಳಿದರು. ನಮ್ಮ ಮನೆಯಲ್ಲಿ ಅದೇ ಅವರ ಕೊನೆಯ ಊಟವಾಗುತ್ತದೆ ಎಂದುಕೊಂಡಿರಲಿಲ್ಲ’ ಎನ್ನುತ್ತಾ ಸೊಸೆ ಕಾಂತಮ್ಮ ಕಣ್ಣೀರಾದರು.

‘ದೇವರಾದರೂ ಶಾಪ ಕೊಡುತ್ತಾನೆ...’:

‘ನಾನು ನಾಲ್ಕು ವರ್ಷಗಳಿಂದ ಅವರ ಬಳಿ ಗನ್‌ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದೆ. ಒಮ್ಮೆಯೂ ಸಿಟ್ಟು ಮಾಡಿಕೊಂಡವರಲ್ಲ. ದೇವರಂತಿದ್ದರು. ದೇವರೂ ಕೋಪ ಮಾಡಿಕೊಂಡು ಶಾಪ ಕೊಡುತ್ತಾನೇನೋ.. ಆದರೆ ಸಿದ್ಧಲಿಂಗಯ್ಯ ಅವರು ಒಮ್ಮೆಯೂ ಕೋಪ ಮಾಡಿಕೊಳ್ಳುತ್ತಿದ್ದಿಲ್ಲ’ ಎಂದು ಗುರುರಾಜ್‌ ಹೇಳಿದರು.

‘ಅಷ್ಟು ದೊಡ್ಡ ಕವಿಯಾಗಿದ್ದರೂ ತುಂಬಾ ಸರಳವಾಗಿದ್ದರು. ನನ್ನೊಂದಿಗೂ ತಮಾಷೆಯಾಗಿಯೇ ಮಾತನಾಡುತ್ತಿದ್ದರು. ಅಂಥವರ ಜೊತೆ ಕೆಲಸ ಮಾಡಿದ್ದು ನನ್ನ ಪುಣ್ಯ’ ಎಂದು ಸ್ಮರಿಸಿದರು.

ಗಣ್ಯರ ನಮನ:

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಆರ್.‌ವೇಣುಗೋಪಾಲ, ಕುಲಸಚಿವರಾದ ಕೆ. ಜ್ಯೋತಿ, ಡಾ. ದೇವರಾಜ್, ಐಎಎಸ್ ಅಧಿಕಾರಿ ಕುಮಾರ ನಾಯ್ಕ್, ದಲಿತ ಮುಖಂಡರಾದ ಎಂ. ವೆಂಕಟಸ್ವಾಮಿ, ಲಕ್ಷ್ಮಿನಾರಾಯಣ ನಾಗವಾರ, ಪ್ರೊ. ಬಿ.ಕೆ.ರವಿ, ಪ್ರೊ. ಜಾಫೆಟ್, ನಟ ದುನಿಯಾ ವಿಜಯ್‌ ಮತ್ತಿತರ ಗಣ್ಯರು ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT