ಮಂಗಳವಾರ, ಆಗಸ್ಟ್ 9, 2022
20 °C
ಬೌದ್ಧಧರ್ಮದ ವಿಧಿಗಳೊಂದಿಗೆ ಕವಿ ಸಿದ್ಧಲಿಂಗಯ್ಯ ಅಂತ್ಯಕ್ರಿಯೆ

ಮಲಗಿದವರ ಕೂರಿಸಿದೆ, ನಿಲ್ಲಿಸುವವರು ಯಾರೋ. . .

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಲಗಿದವರ ಕೂರಿಸಿದೆ ನಿಲ್ಲಿಸುವವರು ಯಾರೋ’ ಎಂದು ಪ್ರಶ್ನಿಸಿದ್ದ ಕವಿ ಡಾ. ಸಿದ್ಧಲಿಂಗಯ್ಯ, ದಮನಿತ ಸಮುದಾಯವನ್ನೇ ‘ಎದ್ದು ನಿಲ್ಲಿಸುವ’ ಕೆಲಸಕ್ಕೆ ಚಾಲನೆ ಕೊಟ್ಟು ಮತ್ತೆಂದೂ ಬಾರದ ಕಡೆಗೆ ನಡೆದು ಬಿಟ್ಟಿದ್ದಾರೆ. 

ಶುಕ್ರವಾರ ನಿಧನರಾದ ಸಿದ್ದಲಿಂಗಯ್ಯ ಅವರ ಅಂತ್ಯಸಂಸ್ಕಾರಕ್ಕೆ ಮುನ್ನ ನಡೆದ ಅಂತಿಮ ದರ್ಶನದ ಆ ವೇಳೆ, ಅವರು ಬರೆದ ಹಾಡುಗಳು ಮಾರ್ದನಿಸಿ ಹೋರಾಟದ ದಿನಗಳನ್ನು ಮರಳಿ ನೆನಪಿಗೆ ತಂದಂತಹ ವಾತಾವರಣವನ್ನು ಸೃಷ್ಟಿಸಿತು. ಅವರ ಸಂಗಾತಿಗಳು, ಅಭಿಮಾನಿಗಳು ಆಂದೋಲನಗಳ ಆತ್ಮಗೀತೆಗಳನ್ನೇ ಬರೆದ ಕವಿಗೆ ಹೋರಾಟದ ಹಾಡುಗಳ ಮೂಲಕವೇ ಕೊನೆ ನಮಸ್ಕಾರ ಸಲ್ಲಿಸಿದರು.

ಕೋವಿಡ್ ನಿರ್ಬಂಧದ ಮಧ್ಯೆಯೇ, ಅವರ ನಿವಾಸ, ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಜ್ಞಾನಭಾರತಿಯಲ್ಲಿನ ಡಾ. ಬಿ.ಆರ್. ಅಂಬೇಡ್ಕರ್‌ ಅಧ್ಯಯನ ಕೇಂದ್ರದ ಆವರಣ ಹಾಗೂ ಅಂತ್ಯಕ್ರಿಯೆ ನಡೆದ ಕಲಾಗ್ರಾಮ ಹೀಗೆ ಪ್ರತಿ ಕಡೆಯಲ್ಲಿಯೂ ನೂರಾರು ಜನ ಸೇರಿ ಕಂಬನಿ ಧಾರೆ ಹರಿಸಿದರು.

‘ನಾಡ ನಡುವಿನಿಂದ ಸಿಡಿದ ನೋವಿನ ಕೂಗೇ, ಆಕಾಶದ‌ ಅಗಲಕ್ಕೂ ನಿಂತ‌ ಆಲವೇ..’ ಎಂದು ಅಂಬೇಡ್ಕರ್ ಅವರ ಕುರಿತು ಸಿದ್ಧಲಿಂಗಯ್ಯ ಅವರು ಬರೆದ ಸಾಲುಗಳನ್ನು ಹಾಡಿ ಅಭಿಮಾನ ಮೆರೆದರು.

ಬೌದ್ಧಧರ್ಮದ ಅನುಯಾಯಿಗಳಾಗಿದ್ದ ಸಿದ್ಧಲಿಂಗಯ್ಯ ಅವರ ಪಾರ್ಥಿವ ಶರೀರವನ್ನು ಅಹಿಂಸಾ ಮೂರ್ತಿಯ ಪಾದದಡಿಯಲ್ಲಿಯೇ ಇಡಲಾಗಿತ್ತು. ‘ಬುದ್ಧಂ ಶರಣಂ ಗಚ್ಛಾಮಿ, ಧಮ್ಮಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ’ ಪಠಣ ನಿರಂತರವಾಗಿ ನಡೆದೇ ಇತ್ತು.

ಸರ್ಕಾರಿ ಗೌರವ:

ಕಲಾಗ್ರಾಮದಲ್ಲಿ ಮಧ್ಯಾಹ್ನ 1.15ರ ವೇಳೆಗೆ ಸಿದ್ಧಲಿಂಗಯ್ಯ ಅವರ ಅಂತ್ಯಸಂಸ್ಕಾರ ನೆರವೇರಿತು. ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅಂತಿಮ ಗೌರವ ಸಲ್ಲಿಸಿದರು. 

ಸಿದ್ಧಲಿಂಗಯ್ಯ ಅವರು ರಚಿಸಿದ ಹೋರಾಟದ ಗೀತೆಗಳು ಮಾತ್ರವಲ್ಲದೆ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ರೈತ ಹೋರಾಟ ಗೀತೆಯನ್ನೂ ಇದೇ ಸಂದರ್ಭದಲ್ಲಿ ಹಾಡಿದ್ದು, ಸಿದ್ಧಲಿಂಗಯ್ಯ ಅವರು ಧ್ವನಿಸಿದ ಹೋರಾಟದ ಆಶಯಕ್ಕೆ ಪೂರಕವಾಗಿತ್ತು.

ಬೌದ್ಧಬಿಕ್ಕುಗಳ ನೇತೃತ್ವದಲ್ಲಿ ಕುಟುಂಬ ಸದಸ್ಯರು ತ್ರಿಶರಣ, ಪಂಚಶೀಲ ತೆಗೆದುಕೊಂಡ ನಂತರ, ಅಗ್ನಿ ಸ್ಪರ್ಶದ ವೇಳೆ ಪುಣ್ಯಾನುಮೋದನೆ ಪಠಿಸಲಾಯಿತು. ಮಗ ಗೌತಮ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪತ್ನಿ ರಮಾ, ಮಗಳು ಮಾನಸ ಹಾಗೂ ಅಳಿಯ ಗಿರಿ ಮತ್ತು ಸಂಬಂಧಿಕರು ಇದ್ದರು.

ಗಣ್ಯರ ನಮನ:

ಸಿದ್ಧಲಿಂಗಯ್ಯ ನಿವಾಸಕ್ಕೆ ಸಚಿವರಾದ ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಶಾಸಕ ಮುನಿರತ್ನ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಜ್ಞಾನಭಾರತಿ ಆವರಣಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇತರರು ಬಂದು ಅಂತಿಮ ದರ್ಶನ ಪಡೆದರು.

ನೆನಪಿನ ನದಿಗಳೇ ಕಾಡದಿರಿ ಎಂದ ಕವಿ ಕಾಡುತ್ತಲೇ ಉಳಿದರು.

‘ರಾಷ್ಟ್ರಕವಿ ಬಿರುದು ನೀಡಿ’

‘ಸಿದ್ಧಲಿಂಗಯ್ಯ ಅವರು ದಲಿತ, ಹಿಂದುಳಿದ ಹಾಗೂ ದುಡಿಯುವ ಸಮುದಾಯಗಳ ಏಳಿಗೆಗಾಗಿ ಸೇವೆ ಸಲ್ಲಿಸಿದವರು. ಅವರು ಮುಂದಿನ ತಲೆಮಾರುಗಳಿಗೂ ಪ್ರೇರಣಾ ಶಕ್ತಿಯಾಗಿರುವುದರಿಂದ ಅವರಿಗೆ ಮರಣೋತ್ತರವಾಗಿ ರಾಷ್ಟ್ರಕವಿ ಬಿರುದು ನೀಡಬೇಕು’ ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಒತ್ತಾಯಿಸಿದೆ.

‘ಸಿದ್ಧಲಿಂಗಯ್ಯ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು ಎರಡು ಎಕರೆ ಜಮೀನು ಮಂಜೂರು ಮಾಡಬೇಕು. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಡಾ. ಸಿದ್ಧಲಿಂಗಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು’ ಎಂದೂ ವೇದಿಕೆ ಪ್ರಮುಖರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಲಕ್ಷ್ಮೀನಾರಾಯಣ ನಾಗವಾರ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು