ಮಂಗಳವಾರ, ಮಾರ್ಚ್ 2, 2021
23 °C
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ದೊಡ್ಡರಂಗೇಗೌಡ ಆಯ್ಕೆ

‘ಪ್ರಗಾಥಗಳ ಸಾಮ್ರಾಟ’ನಿಗೆ ಸಮ್ಮೇಳನದ ಸಾರಥ್ಯ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕನ್ನಡ ಕಾವ್ಯ ಲೋಕದಲ್ಲಿ ‘ಪ್ರಗಾಥಗಳ ಸಾಮ್ರಾಟ’ ಎಂದೇ ಹೆಸರಾದ ಡಾ.ದೊಡ್ಡರಂಗೇಗೌಡ ಅವರು ಏಲಕ್ಕಿ ಕಂಪಿನ ನಾಡಿನಲ್ಲಿ ಫೆ.26ರಿಂದ 28ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಜಿಲ್ಲೆಯ ಸಾಹಿತಿಗಳು ಮತ್ತು ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ. 

ಜಾನಪದ ಶೈಲಿಯ ಮಣ್ಣಿನ ವಾಸನೆಯುಕ್ತ ಪದಗಳನ್ನು ಗೀತೆಯನ್ನಾಗಿಸಿದ ದೊಡ್ಡರಂಗೇಗೌಡರು ‘ಜಾನಪದ ಕಲೆಗಳ ತವರೂರು’ ಎನಿಸಿದ ಹಾವೇರಿ ಮಣ್ಣಿನಲ್ಲಿ ಪ್ರಪ್ರಥಮವಾಗಿ ನಡೆಯಲಿರುವ ‘ನುಡಿಜಾತ್ರೆ’ಯ ತೇರನ್ನು ಎಳೆಯುತ್ತಿರುವುದು ಜನರ ಸಂತಸಕ್ಕೆ ಕಾರಣವಾಗಿದೆ. 

ಮನುಜ ಕಾವ್ಯನಾಮ

‘ಮನುಜ’ ಕಾವ್ಯನಾಮದ ಮೂಲಕ ಚಿರಪರಿಚಿತರಾಗಿರುವ ಗೌಡರು, ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಕುರುಬರಹಳ್ಳಿಯಲ್ಲಿ 1946 ಫೆ.7ರಂದು ಕೆ.ರಂಗೇಗೌಡ ಮತ್ತು ಅಕ್ಕಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ನವ್ಯದ ಸೆಳೆತಕ್ಕೆ ಸಿಕ್ಕರೂ ಅಪ್ಪಟ ಮಣ್ಣಿನ ವಾಸನೆಯನ್ನು ತಮ್ಮ ಕಾವ್ಯದಲ್ಲಿ ಎಂದಿಗೂ ಬಿಟ್ಟುಕೊಟ್ಟವರಲ್ಲ. ಭಾವಗೀತೆ, ಕವನ, ಪ್ರವಾಸ ಕಥನಗಳ ಮೂಲಕ ಸಾಹಿತ್ಯ ಲೋಕದಲ್ಲಿ ಛಾಪು ಮೂಡಿಸಿರುವ ಇವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ‘ಅಜಾತಶತ್ರು’ ಎನಿಸಿದ್ದಾರೆ. 

1972ರಿಂದ 2004ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಬಳಿ ಇರುವ ಎಸ್.ಎಲ್.ಎನ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಈವರೆಗೆ ಸುಮಾರು 80 ಕೃತಿಗಳನ್ನು ಬರೆದಿರುವ ದೊಡ್ಡರಂಗೇಗೌಡರು ಮೂಲತಃ ನವ್ಯದ ಉತ್ಕರ್ಷೆಯಲ್ಲಿ ಮೂಡಿ ಬಂದ ಕವಿಯಾಗಿದ್ದಾರೆ. 

ಸಾಹಿತ್ಯ ಕೃಷಿ

ಗೀತಗಾರುಡಿ, ಹೋಳಿ ಹುಣ್ಣಿಮೆ, ಪ್ರೇಮಾಂಜಲಿ, ಸಪ್ತ ಶೃಂಗ, ಗೀತ ಗಂಗೋತ್ರಿ, ಹೂವು – ಹಣ್ಣು ಮುಂತಾದ ಭಾವಗೀತೆಗಳು; ಗಾರುಡಿಗ ಕವಿ, ಸಾಹಿತ್ಯ ಸಾರಥಿ, ಅಭಿನವ ವಾಲ್ಮೀಕಿ, ತವನಿಧಿ ಮುಂತಾದ ವಿಮರ್ಶಾ ಕೃತಿಗಳು; ಐವತ್ತರ ಐಸಿರಿ, ಬದುಕು ತೋರಿದ ಬೆಳಕು, ಹೊಸ ಹೊನಲು, ಲೋಕಾಯಣ, ಕುದಿಯುವ ಕುಲುಮೆ, ಚದುರಂಗದ ಕುದುರೆಗಳು ಮುಂತಾದ ನವ್ಯ ಕಾವ್ಯ ಕೃತಿಗಳು; ಪ್ರೀತಿ ಪ್ರಗಾಥ' ಮತ್ತು 'ಹಳ್ಳಿ ಹುಡುಗಿ ಹಾಡು-ಪಾಡು' ಪ್ರಗಾಥ ಕೃತಿಗಳು; ಹಿಮಶ್ವೇತಾ, ಮಯೂರ ದರ್ಶನ ಮುಂತಾದ ರೂಪಕಗಳು ಸೇರಿದಂತೆ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆಯನ್ನು ಕೊಟ್ಟಿದ್ದಾರೆ. ಗೌಡರ ಸಾಹಿತ್ಯ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರವು 2018ರಲ್ಲಿ ‘ಪದ್ಮಶ್ರೀ‘ ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ. 

ತೇರಾನೇರಿ ಅಂಬರದಾಗೆ...

ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ, ಚಂದನವನದಲ್ಲೂ ಗೌಡರಿಗೆ ವಿಶೇಷ ಸ್ಥಾನವಿದೆ. ಸದಭಿರುಚಿ ಮತ್ತು ನವಿರಾದ ಗೀತೆಗಳಿಂದ ನಾಡಿನ ಜನರ ಹೃದಯವನ್ನು ಗೆದ್ದ ಜನಮಾನಸದ ಕವಿಯಾಗಿದ್ದಾರೆ. 1978ರಲ್ಲಿ ಬಿಡುಗಡೆಯಾದ ಪರಸಂಗದ ಗೆಂಡೆತಿಮ್ಮ ಚಿತ್ರದ ‘ತೇರಾನೇರಿ ಅಂಬರದಾಗೆ ನೇಸರ ನಗುತಾನೆ...’ ಈ ಗೀತೆ ಗೌಡರಿಗೆ ದೊಡ್ಡ ಹೆಸರು ತಂದುಕೊಟ್ಟಿತು. 

ಆಲೆಮನೆ ಚಿತ್ರದ ‘ನಮ್ಮೂರ ಮಂದಾರ ಹೂವೆ’ ಹಾಡು ಸೇರಿದಂತೆ, ರಂಗನಾಯಕಿ, ಆಲೆಮನೆ, ಅರುಣರಾಗ, ಏಳು ಸುತ್ತಿನ ಕೋಟೆ, ಅಶ್ವಮೇಧ, ಹೃದಯಗೀತೆ, ಜನುಮದ ಜೋಡಿ, ಕುರುಬನ ರಾಣಿ ಮುಂತಾದ ಚಿತ್ರಗಳಿಗೆ ಗೌಡರು ಬರೆದ ಗೀತೆಗಳು ‘ಎವರ್‌ಗ್ರೀನ್‌ ಸಾಂಗ್ಸ್‌’ ಎನಿಸಿವೆ. ಈವರೆಗೆ ಸುಮಾರು 600ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದಾರೆ. ನೂರಕ್ಕೂ ಹೆಚ್ಚು ದೂರದರ್ಶನ ಧಾರಾವಾಹಿಗಳಿಗೆ ಶೀರ್ಷಿಕೆ ಸಾಹಿತ್ಯ ಗೀತೆಗಳನ್ನು ರಚಿಸಿದ ಶ್ರೇಯ ಇವರದ್ದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು