ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಭದ್ರರ ಕೈಯಲ್ಲೇ ಉಳಿದ ಕನ್ನಡ ಸಾಹಿತ್ಯ ಪರಿಷತ್

ಅಧ್ಯಕ್ಷ ಸ್ಥಾನದ ಚುನಾವಣೆ: ಸಾಹಿತಿಗಳಿಗಿಂತ ಜಾತಿ, ಧರ್ಮ, ಪಕ್ಷ ರಾಜಕಾರಣದ ಪ್ರಾಬಲ್ಯವೇ ಹೆಚ್ಚು
Last Updated 17 ನವೆಂಬರ್ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಜಾತಿ, ಧರ್ಮ, ಲಿಂಗ, ಪಕ್ಷಗಳ ರಾಜಕಾರಣ ಮೇಲುಗೈ ಸಾಧಿಸಿದೆ. ಇದರಿಂದ ಉದ್ದೇಶಿತ ಆಶಯ ಬದಿಗೆ ಸರಿದು ಜಾತಿ ರಾಜಕಾರಣ ತಾಂಡ ವವಾಡುತ್ತಿದೆ ಎಂಬ ಚರ್ಚೆ ಕಸಾಪ ಸದಸ್ಯರ ವಲಯದಲ್ಲಿ ನಡೆಯಲಾರಂಭಿಸಿದೆ.

‌ಅಧ್ಯಕ್ಷ ಸ್ಥಾನ ಕೆಲವೇ ಜಾತಿಗಳಿಗೆ ಸೀಮಿತವಾಗಿದೆ ಎನ್ನುವ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಧ್ಯಕ್ಷ ಹುದ್ದೆಯನ್ನು ಹಿಂದುಳಿದ ವರ್ಗದವರು ಮತ್ತು ಪರಿಶಿಷ್ಟರು ವಹಿಸಲು ಸಾಧ್ಯವಾಗಿಲ್ಲ ಎನ್ನುವುದು ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. ಬ್ರಾಹ್ಮಣರು, ಲಿಂಗಾಯತರು, ಒಕ್ಕಲಿಗರೇ ಹೆಚ್ಚು ಬಾರಿ ಅಧಿಕಾರ ಅನುಭವಿಸಿದ್ದಾರೆ. ಉಳಿದ ವರ್ಗದವರು ಚುನಾವಣೆಯಲ್ಲಿ ಸ್ಪರ್ಧಿಸಿದರೂ ಜಾತಿ ಪ್ರಾಬಲ್ಯದಿಂದ ಆಯ್ಕೆಯಾಗುವುದು ಕಷ್ಟಸಾಧ್ಯ ಎನ್ನುವ ಅಭಿಪ್ರಾಯಗಳೂ ಇವೆ.

ಪುಢಾರಿಗಳು ಹೆಚ್ಚಾಗಿದ್ದಾರೆ: ‘ಸಾಹಿತ್ಯ ಪರಿಷತ್‌ನಲ್ಲಿ ಸಾಹಿತಿಗಳನ್ನು ಹೊರತುಪಡಿಸಿ ಬೇರೆಯವರೆಲ್ಲರೂ ಇದ್ದಾರೆ. ಜಾತಿ, ಧರ್ಮ, ರಾಜಕಾರಣ ಸೇರಿದಂತೆ ಎಲ್ಲವೂ ಪ್ರವೇಶಿಸಿದೆ. ಹೀಗಾಗಿ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ‘ಮಿನಿ ರೂಪ’ ಇದಾಗಿದೆ. ನಿಜವಾದ ಸಾಹಿತಿಗಳು ಹೊರಗೆ ಇದ್ದಾರೆ. ಜಿಲ್ಲಾ ಘಟಕಗಳು ಸಹ ಇದಕ್ಕೆ ಹೊರತಾಗಿಲ್ಲ. ಎಲ್ಲೆಡೆ ರಾಜಕೀಯ ಪುಢಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಕುರುಡರಲ್ಲಿ ಮೆಳ್ಳಗಣ್ಣು ಇರುವವರನ್ನು ಆಯ್ಕೆ ಮಾಡಬೇಕಾಗಿದೆ. ಅಧಿಕಾರ ಮತ್ತು ಹಣ ಸಾಹಿತಿಗಳನ್ನು ಹಾಳು ಮಾಡುತ್ತಿದೆ’ ಎಂದು ಕವಿ ಸುಬ್ರಾಯ ಚೊಕ್ಕಾಡಿ ಬೇಸರ ವ್ಯಕ್ತಪಡಿಸಿದರು.

ಪಾವಿತ್ರ್ಯ ನಿರೀಕ್ಷಿಸುವುದೇ ತಪ್ಪು: ‘ಪರಿಷತ್‌ಗೆ ಕನ್ನಡದ ಜಗತ್ತನ್ನು ಬೆಳಗಿಸುವವರು ಬರಬೇಕು. ಈಗ ಎಲ್ಲ ಕ್ಷೇತ್ರಗಳಲ್ಲೂ ಜಾತಿ, ಧರ್ಮದ ರಾಜಕಾರಣದ ಒಳಹೊಕ್ಕಿರುವಾಗ ಸಾಹಿತ್ಯ ಪರಿಷತ್‌ ಸಹ ಪವಿತ್ರ ಗಂಗೆಯಾಗಿ ಉಳಿಯುವುದು ಹೇಗೆ ಸಾಧ್ಯ? ಆದರೂ, ಪ್ರಸ್ತುತ ಸಂದಿಗ್ಧ ಸನ್ನಿವೇಶದಲ್ಲಿ ಪ್ರಜ್ಞಾವಂತರು ಆಯ್ಕೆಯಾಗಬೇಕು. ಸಾಹಿತ್ಯ ಪರಿಷತ್‌ ಆಡಳಿತ ಪಕ್ಷದ ವಕ್ತಾರನಂತೆ ವರ್ತಿಸಿರುವುದನ್ನು ನೋಡಿದ್ದೇವೆ. ಪರಿಷತ್‌ ತನ್ನ ಸ್ವಾಯತ್ತತೆ ಉಳಿಸಿಕೊಳ್ಳಬೇಕಾಗಿದೆ.ಇದುವರೆಗೆ ಮಹಿಳೆಯರು ಅಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಅವಿರೋಧವಾಗಿ ಮಹಿಳೆಯನ್ನು ಆಯ್ಕೆ ಮಾಡುವ ವಾತಾವರಣ ಸೃಷ್ಟಿಯಾದರೆ ಅದು ನಿಜಕ್ಕೂ ಕನ್ನಡಿಗರ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ’ ಎಂದು ವಿಮರ್ಶಕಿ ಎಂ.ಎಸ್‌. ಆಶಾದೇವಿ ಅಭಿಪ್ರಾಯಪಟ್ಟರು.

ಆವರಿಸಿದ ಜಾತಿ ಭೂತ: ‘ಈಗ ಜಾತಿ ರಾಜಕೀಯ ಇಲ್ಲದೆಯೇ ಯಾವ ಚುನಾವಣೆಗಳು ನಡೆಯುತ್ತಿಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆಯ ರೀತಿಯಲ್ಲಿ ಪರಿಷತ್‌ ಚುನಾವಣೆ ನಡೆಯುತ್ತಿದೆ. ಇಲ್ಲಿಯೂ ಪಕ್ಷ, ಜಾತಿ, ಧರ್ಮ ರಾಜಕಾರಣ ಇದೆ. ಜಾತಿ ಭೂತ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿಕೊಂಡಿದೆ. ಜಾತಿ ಇಲ್ಲದೆಯೇ ಏನೂ ಇಲ್ಲ ಎನ್ನುವಂತಾಗಿದೆ. ಮಹಿಳೆಯರಿಗೆ ಇಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಜಿಲ್ಲಾಧ್ಯಕ್ಷ ಸ್ಥಾನಗಳಿಗೂ ನಡೆಯುತ್ತಿರುವ ಚುನಾವಣೆಯಲ್ಲೂ ಇದೇ ರೀತಿಯ ವಾತಾವರಣ ಇದೆ’ ಎಂದು ಕಾಂತಾವರ ಕನ್ನಡ ಸಂಘದ ಅಧ್ಯಕ್ಷರೂ ಆಗಿರುವ ಸಾಹಿತಿ ಡಾ.ನಾ.ಮೊಗಸಾಲೆ ಹೇಳಿದರು.

ಜಾತಿ ಬಲ ಮಾನದಂಡವಾಗಬಾರದು: ‘ಯಾವುದೇ ಚುನಾವಣೆಯಲ್ಲೂ ಜಾತಿ ಪ್ರವೇಶಿಸಬಾರದು. ಜಾತಿ ಮತ್ತು ಹಣ ಮಾನದಂಡವಾಗಬಾರದು. ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿಗೆ ದುಡಿದವರನ್ನು ಆಯ್ಕೆ ಮಾಡಬೇಕು. ಸಾಹಿತ್ಯ ಪರಿಷತ್ತಿನಪ್ರಬುದ್ಧ ಸದಸ್ಯರು ಕನ್ನಡಕ್ಕಾಗಿ ದುಡಿದವರು ಮತ್ತು ದುಡಿಯುವವರನ್ನು ಆಯ್ಕೆ ಮಾಡುವ ವಿಶ್ವಾಸವಿದೆ’ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜ್ಜಕಳ ಗಿರೀಶ್ ಭಟ್ ಅಭಿಪ್ರಾಯಪಟ್ಟರು.

***

‘ಪರಿಷತ್‌ಗೆ ಹೊಸ ಸ್ಪರ್ಶ’

ಕನ್ನಡ ಸಾಹಿತ್ಯ ಪರಿಷತ್‌ ಬಂಡವಾಳಶಾಹಿಗಳು ಮತ್ತು ಸ್ವಾರ್ಥಿಗಳ ಆಶ್ರಯ ತಾಣವಾಗಿದೆ. ಇದು ಕೇವಲ ಸಮ್ಮೇಳನಕ್ಕೆ ಸೀಮಿತಗೊಂಡಿದೆ. ಇದು ಸಾಹಿತಿಗಳು ಮತ್ತು ಚಿಂತಕರ ಚಾವಡಿಯಾಗಬೇಕು. ಹಣ ಬಲ ಇದ್ದವರಿಗೆ ಮಾತ್ರ ಅವಕಾಶ ಎನ್ನುವಂತಾಗಿದೆ. ಅಧ್ಯಕ್ಷನಾಗಿ ಆಯ್ಕೆಯಾದರೆ ಹೊಸ ಸ್ಪರ್ಶ ನೀಡಲಾಗುವುದು. ಸಮ್ಮೇಳನಗಳನ್ನು ವಿಚಾರ ಸಂಕಿರಣ ರೀತಿಯಲ್ಲಿ ಆಯೋಜಿಸಲಾಗುವುದು. ಸದಸ್ಯತ್ವಕ್ಕೂ ಮಾನದಂಡ ನಿಗದಿಪಡಿಸಲಾಗುವುದು. ಸಾಂಸ್ಕೃತಿಕ ಚಿಂತನೆಯುಳ್ಳವರನ್ನು ಸದಸ್ಯರನ್ನಾಗಿ ಮಾಡಲು ನಿಯಮಗಳನ್ನು ರೂಪಿಸಲಾಗುವುದು.

-ವಾಲ್ಮೀಕಿ ಹ. ಯಕ್ಕರನಾಳ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

***

‘ಆಮೂಲಾಗ್ರ ಬದಲಾವಣೆ ತರಲಾಗುವುದು’

ಸಾಹಿತ್ಯ ಪರಿಷತ್‌ ಅಧ್ಯಕ್ಷನಾಗಿ ಆಯ್ಕೆಯಾದರೆ ಆಮೂಲಾಗ್ರವಾಗಿ ಬದಲಾವಣೆ ತರಲಾಗುವುದು. ರಾಜ್ಯಾಧ್ಯಕ್ಷರ ಅವಧಿಯನ್ನು ಮೂರು ವರ್ಷಗಳಿಗೆ ಇಳಿಸಲಾಗುವುದು. ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರಾಗಿ ಒಮ್ಮೆ ಆಯ್ಕೆಯಾದವರು ಮತ್ತೊಮ್ಮೆ ಸ್ಪರ್ಧಿಸದಂತೆ ಬೈಲಾಗೆ ತಿದ್ದುಪಡಿ ಮಾಡಲಾಗುವುದು. ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಒಂದು ಶಾಲೆಯನ್ನು ದತ್ತು ತೆಗೆದುಕೊಂಡು ಆದರ್ಶ ಶಾಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಸಾಹಿತ್ಯ ಪರಿಷತ್‌ ಗಂಜಿ ಕೇಂದ್ರವಾಗಬಾರದು. ಅಧ್ಯಕ್ಷರಾದವರು ನಾಡಿನ ಆದರ್ಶವಾಗಬೇಕು. ಸಾಹಿತ್ಯವೇ ಪರಿಷತ್‌ನ ಆತ್ಮವಾಗಬೇಕು.

–ವೈ. ರೇಣುಕ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

***

‘ಪ್ರತಿ ತಾಲ್ಲೂಕಿನಲ್ಲೂ ಕನ್ನಡ ಭವನ’

ಜಿಲ್ಲಾಧ್ಯಕ್ಷ ಸ್ಥಾನಗಳಲ್ಲಿ ಶೇಕಡ 50ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು. ಅಧ್ಯಕ್ಷರ ಐದು ವರ್ಷದ ಅವಧಿಯನ್ನು ಮೂರು ವರ್ಷಕ್ಕೆ ಇಳಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ ಕನ್ನಡ ಭವನ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಬಡ ಸಾಹಿತಿಗಳು ಮತ್ತು ಕಲಾವಿದರಿಗೆ ಅವಕಾಶ ಲಭಿಸುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಎಲ್ಲ ಸದಸ್ಯರ ಕೈಪಿಡಿ ತರಲಾಗುವುದು. ಸಾಹಿತ್ಯ ಪರಿಷತ್‌ನ ಮತದಾರರ ಪಟ್ಟಿಯಲ್ಲಿ ಕೆಲವರು ನಕಲಿ ಮತದಾರರು ಸೇರಿಕೊಂಡಿದ್ದಾರೆ. ಹೀಗಾಗಿ, ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗುವುದು.

–ಶರಬಸಪ್ಪ ಕಲ್ಲಪ್ಪ ದಾನಕೈ,ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

***

‘ಕಾರ್ಪೋರೇಟ್‌ ಮಾದರಿಯಲ್ಲಿ ಪರಿಷತ್‌ ಅಭಿವೃದ್ಧಿ’

ಜಡ್ಡುಗಟ್ಟಿರುವ ವ್ಯವಸ್ಥೆ ಇರುವ ಪರಿಷತ್‌ ಅನ್ನು ಕಾರ್ಪೋರೇಟ್‌ ಮಾದರಿಯಲ್ಲಿ ಬೆಳೆಸಬೇಕಾಗಿದೆ. ಅಂತರರಾಷ್ಟ್ರೀಯ ಸಂಸ್ಥೆಯನ್ನಾಗಿ ಅಭಿವೃದ್ದಿಪಡಿಸಬೇಕಾಗಿದೆ. ಸಮ್ಮೇಳನ ಮತ್ತು ಪುಸ್ತಕ ಪ್ರಕಟಣೆ ಬಿಟ್ಟು ಮಹತ್ವದ ಯೋಜನೆಗಳನ್ನು ಪರಿಷತ್‌ ರೂಪಿಸಿಲ್ಲ. ವಿದೇಶಗಳಲ್ಲಿ ಸಮ್ಮೇಳನಗಳನ್ನು ಆಯೋಜಿಸುವ ಉದ್ದೇಶ ಇದೆ. ಸಮ್ಮೇಳನಗಳನ್ನು ಆಯೋಜಿಸಲು ಸರ್ಕಾರದ ಮೇಲೆ ಅವಲಂಬನೆಯಾಗುವ ಬದಲು ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಬಳಸಿಕೊಳ್ಳಬೇಕು. ಬೈಲಾಗೆ ತಿದ್ದುಪಡಿ ತಂದು, ಅಧ್ಯಕ್ಷರ ಆಯ್ಕೆಯ ಜತೆಗೆ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ಯೋಜನೆ ರೂಪಿಸಲಾಗುವುದು

– ಶಿವರುದ್ರಯ್ಯ ಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT