ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ಆಡಳಿತಾಧಿಕಾರಿ ನೇಮಕಕ್ಕೆ ಮನವಿ

Last Updated 3 ಆಗಸ್ಟ್ 2021, 16:47 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಪ್ರಸ್ತುತ ಕಾರ್ಯಕಾರಿ ಸಮಿತಿಯ ಅಧಿಕಾರದ ಅವಧಿ ಮುಕ್ತಾಯವಾಗುತ್ತಿದ್ದಂತೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ‘ಈ ಹಿಂದೆ ಹೊರಡಿಸಲಾದ ಸರ್ಕಾರಿ ಆದೇಶದಲ್ಲಿ ಸಹಕಾರ ಸಂಘಗಳು, ನೋಂದಾಯಿತ ಸೊಸೈಟಿಗಳು ಮತ್ತು ಸಂಘ–ಸಂಸ್ಥೆಗಳ ಚುನಾವಣೆಯನ್ನು ಕೋವಿಡ್ ಕಾರಣದಿಂದ 2021ರ ಡಿಸೆಂಬರ್ ಅಂತ್ಯದವರೆಗೂ ಮುಂದೂಡುವಂತೆ ತಿಳಿಸಲಾಗಿದೆ. ಹಾಲಿ ಕಾರ್ಯಕಾರಿ ಸಮಿತಿಯ ಅಧಿಕಾರವಧಿಯು ಸೆ.2ಕ್ಕೆ ಅಂತ್ಯವಾಗಲಿದೆ. ಸೆ.3ರಿಂದ ಅನ್ವಯವಾಗುವಂತೆ ಆಡಳಿತಾಧಿಕಾರಿಯನ್ನು ನೇಮಿಸುವುದು ಅವಶ್ಯ’ ಎಂದು ತಿಳಿಸಿದ್ದಾರೆ.

ಪರಿಷತ್ತಿನ ಚುನಾವಣೆಯು ಮೇ 9ರಂದು ಈ ಹಿಂದೆ ನಿಗದಿಯಾಗಿತ್ತು. ನಾಮಪತ್ರ ಪರಿಶೀಲನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಪೂರ್ಣಗೊಂಡು, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಂತಿಮವಾಗಿ 21 ಮಂದಿ ಸ್ಪರ್ಧೆಯಲ್ಲಿದ್ದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಪ್ರಚಾರ ಕಾರ್ಯವನ್ನು ಅವರು ನಡೆಸಿದ್ದರು. ಆದರೆ, ಮಾರ್ಚ್‌ ಮೂರನೇ ವಾರದ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿ ಪಡೆದು, ಏಪ್ರಿಲ್ ತಿಂಗಳಲ್ಲಿ ಗರಿಷ್ಠ ಸಂಖ್ಯೆಗೆ ತಲುಪಿತ್ತು. ಹೀಗಾಗಿ, ಚುನಾವಣೆಯನ್ನು ಸರ್ಕಾರ ಮುಂದೂಡಿತ್ತು.

ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಿದ ಹಂತದಿಂದ ಯಥಾವತ್ತಾಗಿ ಮುಂದುವರಿಸಲಾಗುವುದು ಎಂದು ಕಳೆದ ಏಪ್ರಿಲ್ 26ರಂದು ಸರ್ಕಾರ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಚುನಾವಣೆ ನಡೆಸಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಲಾರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT