ಮಂಗಳವಾರ, ಮೇ 17, 2022
23 °C
ಬಿರುಸುಗೊಂಡ ಅಭ್ಯರ್ಥಿಗಳ ಚುನಾವಣೆ ಪ್ರಚಾರ

ರಂಗೇರುತ್ತಿದೆ ಕಸಾಪ ಚುನಾವಣೆ ಅಖಾಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ರಾಜ್ಯಾಧ್ಯಕ್ಷ, ಜಿಲ್ಲಾ ಘಟಕಗಳ ಅಧ್ಯಕ್ಷ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಬಿರುಸಿನಿಂದ ಪ್ರಚಾರಕಾರ್ಯ ಕೈಗೊಂಡಿದ್ದು, ಚುನಾವಣೆ ಅಖಾಡ ರಂಗೇರಿದೆ. 

ಇದೇ 21ರಂದು ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಬಾರಿ ಆ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಅಭ್ಯರ್ಥಿಗಳು ಈಗಾಗಲೇ ರಾಜ್ಯದ ಉದ್ದಗಲಕ್ಕೂ ಪ್ರಯಾಣಿಸಿ, ಎರಡರಿಂದ ಮೂರು ಸುತ್ತಿನ ಪ್ರಚಾರ ನಡೆಸಿದ್ದಾರೆ. ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು ಕೂಡ ಅಭ್ಯರ್ಥಿಗಳ ಪರ ಮತಯಾಚಿಸುತ್ತಿದ್ದಾರೆ. 

ನಾಡು–ನುಡಿ ಹಿತಕಾಯುವ ಭರವಸೆ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಡು–ನುಡಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಸಿದ್ಧಪಡಿಸಿ, ಮತದಾರರ ಒಲೈಕೆಯಲ್ಲಿ ನಿರತರಾಗಿದ್ದಾರೆ. 

ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ತೆರಳಿ, ಕರಪತ್ರ ವಿತರಣೆ ಮಾಡುತ್ತಿದ್ದು, ಈ ಬಾರಿ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ಜೋರಾಗಿಯೇ ನಡೆಯುತ್ತಿದೆ.

ಮಹೇಶ್ ಜೋಶಿ ಪರ ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಪರಣ್ಣ ಮುನವಳ್ಳಿ ಪ್ರಚಾರ ನಡೆಸಿದ್ದಾರೆ. ಈ ಬೆಳವಣಿಗೆಗೆ  ಸಾಂಸ್ಕೃತಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ.

ಕೆಲವು ಅಭ್ಯರ್ಥಿಗಳು ಸೂಟ್ ಕೇಸ್, ಬೆಳ್ಳಿ ಉಂಗುರ ಸೇರಿದಂತೆ ವಿವಿಧ ವಸ್ತುಗಳನ್ನು ಹಂಚುವ ಮೂಲಕ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿವೆ. 

ಸಾಮಾಜಿಕ ಜಾಲತಾಣಗಳನ್ನೂ ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದು, ವಾಟ್ಸ್‌ಆ್ಯಪ್‌ನ ವಿವಿಧ ಗುಂಪುಗಳಿಗೆ ಪ್ರಣಾಳಿಕೆಯ ಪ್ರತಿಯನ್ನು ಕಳುಹಿಸಿ, ಮತ ಯಾಚಿಸುತ್ತಿದ್ದಾರೆ. ಪರಿಚಿತರಿಗೆ ವೈಯಕ್ತಿಕವಾಗಿಯೂ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳನ್ನೂ ಪ್ರಚಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. 

‘ಕಂದಾಯ ವಿಭಾಗದಲ್ಲೂ ಸಮಾವೇಶ’

ಪರಿಷತ್ತು ಹಾಗೂ ಕನ್ನಡಿಗರ ಪ್ರಗತಿಗಾಗಿ 12 ವಿಶೇಷ ಯೋಜನೆಗಳನ್ನು ಸಿದ್ಧಪಡಿಸಿದ್ದೇನೆ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ‘ಕಸಾಪ ಮಾದರಿ ಕನ್ನಡ ಶಾಲೆ’ ನಿರ್ಮಿಸಲಾಗುವುದು. ನಾಲ್ಕೂ ಕಂದಾಯ ವಿಭಾಗದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಮಕ್ಕಳ ಸಾಹಿತ್ಯ, ಶಿಕ್ಷಕರ ಸಾಹಿತ್ಯ ಸೇರಿದಂತೆ ವಿವಿಧ ಸಾಹಿತ್ಯ ಸಮಾವೇಶಗಳನ್ನು ನಡೆಸಲಾಗುವುದು. ಪ್ರೌಢಶಾಲೆಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹಳಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದಿಗೆ ಕ್ರಮವಹಿಸಲಾಗುವುದು. ಪರಿಷತ್ತು ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳನ್ನು ಮರುಮುದ್ರಣ ಮಾಡಲಾಗುವುದು. ಹೊರನಾಡು–ಹೊರದೇಶದ ಕನ್ನಡಿಗರು ರಚಿಸಿದ ಕೃತಿಗಳ ಪ್ರಕಟಣೆ ಸೇರಿದಂತೆ ವಿವಿಧ ಯೋಜನೆ ರೂಪಿಸಲಾಗಿದೆ.

। ಶೇಖರಗೌಡ ಮಾಲಿಪಾಟೀಲ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ’

ಕನ್ನಡ ಸಾಹಿತ್ಯದ ಮಹತ್ವದ ಕೃತಿಗಳನ್ನು ಮರುಮುದ್ರಣಕ್ಕೆ ಕ್ರಮ. ಕನ್ನಡದ ಉತ್ತಮ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರಿಸಿ, ರಾಜ್ಯಗಳಿಗೆ ಪರಿಚಯಿಸುವ ಸಂಕಲ್ಪ. ಶಾಶ್ವತವಾದ ಕನ್ನಡ ನಿಘಂಟು ಸಿದ್ಧಗೊಳಿಸಲು ಒತ್ತು. ಇದರಿಂದ ಭಾಷಾ ಬೆಳವಣಿಗೆ ಸಾಧ್ಯ.ನೆಲ, ಜಲ, ಉದ್ಯೋಗ ಸೇರಿದಂತೆ ನಾಡನ್ನು ಕಾಡುತ್ತಿರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಿ, ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ. ಪರಿಷ್ಕೃತ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ಶ್ರಮಿಸಲಾಗುವುದು. ಸದಸ್ಯತ್ವ, ಪುಸ್ತಕ ಖರೀದಿ ಸೇರಿದಂತೆ ಎಲ್ಲ ಪ್ರಕ್ರಿಯೆಯೂ ಆನ್‌ಲೈನ್ ಮೂಲಕ ನಡೆಯುವಂತೆ ಕ್ರಮವಹಿಸಲಾಗುವುದು. ಯುವ ಬರಹಗಾರರನ್ನು ಗುರುತಿಸಿ, ಪ್ರೋತ್ಸಾಹಿಸಲಾಗುವುದು.

।ವ.ಚ. ಚನ್ನೇಗೌಡ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಪರಿಷತ್ತನ್ನು ಜನಪರ ಮಾಡುವೆ’

ದೂರದರ್ಶನ ಕೇಂದ್ರದ ನಿರ್ದೇಶಕನಾಗಿದ್ದಾಗ ಜನಪರ ಕಾರ್ಯಕ್ರಮ ರೂಪಿಸಿ, ಚಂದನ ವಾಹಿನಿಯನ್ನು ಜನರಿಗೆ ಆಪ್ತವಾಗಿಸಿದ್ದೆ. ಅದೇ ರೀತಿ ಜನಸಾಮಾನ್ಯರ, ಜನೋಪಯೋಗಿ ಪರಿಷತ್ತಾಗಿ ಪರಿವರ್ತಿಸುತ್ತೇನೆ. ಪರಿಷತ್ತು ಕೇವಲ 3.40 ಲಕ್ಷ ಸದಸ್ಯತ್ವ ಹೊಂದಿದ್ದು, ಅದನ್ನು ಒಂದು ಕೋಟಿಗೆ ಏರಿಸುತ್ತೇನೆ. ಸದಸ್ಯತ್ವ ಶುಲ್ಕವನ್ನು ₹ 250ಕ್ಕೆ ಇಳಿಸುತ್ತೇನೆ. ಆಡಳಿತ ಸೇರಿದಂತೆ ವಿವಿಧೆಡೆ ಕನ್ನಡ ಅನುಷ್ಠಾನ, ಕನ್ನಡ ಮಾಧ್ಯಮದ ಶಾಲೆಗಳ ಉಳಿವಿಗೆ ಹೋರಾಟ ನಡೆಸುತ್ತೇನೆ. ಮೊಬೈಲ್ ಆ್ಯಪ್ ಪರಿಚಯ ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಪ್ರಚಾರ ಕಾರ್ಯಕ್ಕೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ಸೇರಿದಂತೆ ಹಲವರು ಕೈಜೋಡಿಸಿದ್ದಾರೆ.

।ಮಹೇಶ್ ಜೋಶಿ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

‘ಪ್ರಾದೇಶಿಕ ಅಸಮತೋಲನ ನಿವಾರಣೆ’

ಪರಿಷತ್ತು ಕೆಲವೇ ಜನರಿಗೆ ಸೀಮಿತವಾಗಿದೆ. ಇದನ್ನು ಸಮಸ್ತ ಕನ್ನಡಿಗರ ಪರಿಷತ್ತಾಗಿ ಮಾರ್ಪಡಿಸುತ್ತೇನೆ. ರಾಜ್ಯದ ನಾಲ್ಕೂ ಕಂದಾಯ ವಿಭಾಗಗಳಿಗೆ ವಿಭಾಗೀಯ ಸಂಚಾಲಕರನ್ನು ನೇಮಿಸಿ,ಪರಿಷತ್ತಿನ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಿಕೇಂದ್ರೀಕರಣಗೊಳಿಸುತ್ತೇನೆ. ಪ್ರಾದೇಶಿಕ ಅಸಮತೋಲನವನ್ನೂ ನಿವಾರಿಸಲಾಗುವುದು. ಗಡಿ ಪ್ರದೇಶದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಪ್ರಶಸ್ತಿಯ ಮೊತ್ತವನ್ನು ₹ 25 ಸಾವಿರದಿಂದ ₹ 5 ಲಕ್ಷಕ್ಕೆ ಏರಿಸುವೆ. ಕಾದಂಬರಿಕಾರ ಬಸವರಾಜ ಕಟ್ಟೀಮನಿ ಹೆಸರಿನಲ್ಲಿ ₹ 5 ಲಕ್ಷ ನಗದು ಒಳಗೊಂಡ ಪ್ರಶಸ್ತಿ ಸ್ಥಾಪಿಸುವೆ. ಆನ್‌ಲೈನ್ ಮೂಲಕ ವಿಳಾಸ ತಿದ್ದುಪಡಿ ಸೇರಿದಂತೆ ವಿವಿಧ ಯೋಜನೆ ಹಮ್ಮಿಕೊಳ್ಳಲಾಗುವುದು.

।ಸಿ.ಕೆ. ರಾಮೇಗೌಡ, ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು