ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲಕ್ಕೆ ತಕ್ಕಂತೆ ಬೈ–ಲಾ ತಿದ್ದುಪಡಿ ಅಗತ್ಯ’: ಮಹೇಶ ಜೋಶಿ ಸಮರ್ಥನೆ

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಸಮರ್ಥನೆ
Last Updated 15 ಫೆಬ್ರುವರಿ 2022, 17:07 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಲಕ್ಕೆ ತಕ್ಕಂತೆ ಬೈ–ಲಾ ತಿದ್ದುಪಡಿ ಆಗಬೇಕು. 1915ರಲ್ಲಿ ರಚನೆಯಾದ ಬೈ–ಲಾದಲ್ಲಿಯೇ 18 ವರ್ಷಗಳು ಮೇಲ್ಪಟ್ಟ, ಓದು–ಬರಹ ಬಲ್ಲ ವ್ಯಕ್ತಿಗಳು ಸದಸ್ಯತ್ವ ಪಡೆಯಬೇಕೆಂದು ತಿಳಿಸಲಾಗಿದೆ. ಹೀಗಾಗಿ, ಸದಸ್ಯತ್ವಕ್ಕೆ ಏಳನೇ ತರಗತಿ ಉತ್ತೀರ್ಣರಾಗದವರಿಗೆ ಸರಳ ಕನ್ನಡ ಪರೀಕ್ಷೆ ನಡೆಸಲು ಕ್ರಮವಹಿಸಲಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೈ–ಲಾ ತಿದ್ದುಪಡಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್ ನೇತೃತ್ವದಲ್ಲಿ ರಚಿಸಲಾದ ಸಮಿತಿಯು ಹಲವು ಸಲಹೆಗಳನ್ನು ನೀಡಿದೆ. ಸಮಿತಿಯು ಈ ಮೊದಲು 10ನೇ ತರಗತಿ ಉತ್ತೀರ್ಣರಾದವರಿಗೆ ಸದಸ್ಯತ್ವ ನೀಡಬೇಕೆಂದು ಶಿಫಾರಸು ಮಾಡಿತ್ತು. ಈಗ ಅದನ್ನು ಬದಲಾಯಿಸಿ, ಏಳನೇ ತರಗತಿಗೆ ಇಳಿಸಲಾಗಿದೆ.ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿ ಪರಿಷತ್ತಿನ ಉದ್ದೇಶ. ಆದ್ದರಿಂದಲೇ ಬೈ–ಲಾದಲ್ಲಿ ಓದು, ಬರಹ ಬರಬೇಕೆಂದು ತಿಳಿಸಲಾಗಿದೆ. ಸರಳ ಕನ್ನಡ ಪರೀಕ್ಷೆಗೆ ಕೇಂದ್ರ ಪರಿಷತ್ತಿನ ಪಠ್ಯಪುಸ್ತಕ ರಚನಾ ಸಮಿತಿಯು ಸೂಕ್ತ ಪಠ್ಯಕ್ರಮ ಹಾಗೂ ನಿಯಮಗಳನ್ನು ರಚಿಸಲಿದೆ’ ಎಂದು ಹೇಳಿದರು.

‘ಪರಿಷತ್ತಿನ3.40 ಲಕ್ಷ ಮತದಾರರಲ್ಲಿ ಓದು, ಬರಹ ಬರದವರು ಗಣನೀಯ ಸಂಖ್ಯೆಯಲ್ಲಿ ಇದ್ದಾರೆ.ಅಂತಹವರಿಗೆ ಸರಳ ಕನ್ನಡ ಕಲಿಸಲಾಗುತ್ತದೆ. ಕನ್ನಡ ಕಲಿಕೆ, ಸದಸ್ಯತ್ವ, ಮತದಾನ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಸುಲಭವಾಗಿ ನಡೆಸಲು ಮೊಬೈಲ್ ಆ್ಯಪ್‌ ಅಭಿವೃದ್ಧಿಪಡಿಸಲಾಗುವುದು.ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕನ್ನಡ ಕಲಿಸಲಾಗುತ್ತದೆ. ಈಗಾಗಲೇ ಸದಸ್ಯರಾಗಿರುವವರ ಸದಸ್ಯತ್ವವನ್ನು ರದ್ದುಪಡಿಸುವುದಿಲ್ಲ.ನಿಗದಿತ ಅವಧಿಯೊಳಗೆ ಕನ್ನಡ ಕಲಿಯದಿದ್ದರೆ ಸದಸ್ಯತ್ವದ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ.ಕನ್ನಡ ಓದಲು ಹಾಗೂ ಬರೆಯಲು ಬರದ ಹೊರನಾಡು, ಹೊರದೇಶದ ಕನ್ನಡಿಗರಿಗೂ ಸದಸ್ಯತ್ವಕ್ಕೆ ಪರೀಕ್ಷೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ಸದಸ್ಯತ್ವ ಶುಲ್ಕ ₹ 500ರಿಂದ ₹ 250ಕ್ಕೆ ಇಳಿಕೆ ಮಾಡಲು ಬೈ–ಲಾ ತಿದ್ದುಪಡಿ ಅಗತ್ಯ. ಸದಸ್ಯತ್ವ ಬಯಸುವ ವ್ಯಕ್ತಿ ತನ್ನ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಅಪರಾಧ ಪ್ರಕರಣದ ವಿಚಾರಣೆ ಬಾಕಿ ಇರುವುದಿಲ್ಲ ಎಂಬುದಾಗಿ ಸ್ವ ಘೋಷಿತ ಪ್ರಮಾಣಪತ್ರ ಸಲ್ಲಿಸಬೇಕು. ವಿವಿಧ ಸರ್ಕಾರಿ ಇಲಾಖೆ, ಸಂಘ–ಸಂಸ್ಥೆಗಳ ಜತೆಗೆ ಸಮನ್ವಯತೆ ಸಾಧಿಸಲು ಕೇಂದ್ರ ಕಾರ್ಯಕಾರಿ ಸಮಿತಿಯಲ್ಲಿ ಪದನಿಮಿತ್ತ ಸದಸ್ಯರ ಸೇರ್ಪಡೆಗೆ ಸಮಿತಿ ಶಿಫಾರಸು ಮಾಡಿದೆ’ ಎಂದು ಹೇಳಿದರು.

₹ 15 ಕೋಟಿ ಅನುದಾನಕ್ಕೆ ಮನವಿ

‘ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಪ್ರತಿ ವರ್ಷ ₹ 5 ಕೋಟಿ ಅನುದಾನ ನೀಡುತ್ತಿತ್ತು. ಈ ಬಾರಿ ₹ 15 ಕೋಟಿ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಯುವುದರಿಂದ ಹೆಚ್ಚಿನ ಅನುದಾನದ ಅಗತ್ಯವಿದೆ. ಕಟ್ಟಡದ ನವೀಕರಣ ಕಾರ್ಯವೂ ನಡೆಯಲಿದೆ.ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‌.ಎಂ. ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ ಹಾಗೂ ಜಯಂತಿ ಆಚರಣೆ ಮಾಡಲಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಕನ್ನಡಿಗರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ’ ಎಂದು ಮಹೇಶ ಜೋಶಿ ಹೇಳಿದರು.

ಸಮಾಲೋಚನಾ ಸಭೆ ನಾಳೆ

‍‘ಪ್ರಸ್ತಾವಿತ ತಿದ್ದುಪಡಿಯ ಬಗ್ಗೆ ಇದೇ ಗುರುವಾರ ಸಮಾಲೋಚನಾ ಸಭೆ ನಡೆಸಲಾಗುತ್ತದೆ. ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು ಕಲಾವಿದರು ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದ 31 ಮಂದಿ ಪ್ರಮುಖರು ಭಾಗವಹಿಸಲಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ್ ಅವರು ಇರಲಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರಿಗೂ ಆಹ್ವಾನ ನೀಡಲಾಗಿತ್ತು. ಆದರೆ, ಅವರು ಬರುವುದಿಲ್ಲ ಎಂದು ಹೇಳಿರುವ ಕಾರಣಕ್ಕೆ ಪ್ರಮುಖರ ಪಟ್ಟಿಯಿಂದ ಕೈಬಿಡಲಾಗಿದೆ’ ಎಂದು ಮಹೇಶ ಜೋಶಿ ತಿಳಿಸಿದರು.

ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಂ. ಪಟೇಲ್‍ಪಾಂಡು, ಸಂಶೋಧನೆ ಮತ್ತು ಪ್ರಕಟಣೆ ವಿಭಾಗದ ಸಲಹಾ ಸಮಿತಿ ಗೌರವ ಸಂಚಾಲಕ ಕೆ. ರಾಜಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT