ಶನಿವಾರ, ಮೇ 15, 2021
25 °C

‘ವಿದ್ವತ್‌ ಪರಂಪರೆಯ ಕೊನೆಯ ಕೊಂಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇತ್ತೀಚೆಗೆ ನಿಧನರಾದ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರು ವಿದ್ವತ್‌ ಪರಂಪರೆಯ ಕೊನೆಯ ಕೊಂಡಿಯಾಗಿದ್ದರು. ಅವರು ಹಸ್ತಪ್ರತಿಗಳನ್ನು ತಿದ್ದಿ, ತೀಡಿ ಶ್ರದ್ಧೆಯಿಂದ ಮುದ್ರಣಪ್ರತಿ ಸಿದ್ಧಪಡಿಸುತ್ತಿದ್ದರು. ಅವರ ವ್ಯಕ್ತಿತ್ವ ಮತ್ತು ವಿದ್ವತ್‌, ಆಳ ಮತ್ತು ವಿಸ್ತಾರದಿಂದ ಕೂಡಿತ್ತು’ ಎಂದು ಹಿರಿಯ ಸಂಶೋಧಕ ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪ‍ತಿ ಮಲ್ಲೇಪುರಂ ಜಿ.ವೆಂಕಟೇಶ್‌ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಬುಧವಾರ ಆಯೋಜಿಸಿದ್ದ ವೆಂಕಟಸುಬ್ಬಯ್ಯನವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ‘ಜೀವಿ’ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ‘ವೆಂಕಟಸುಬ್ಬಯ್ಯನವರು ಅರವತ್ತರ ದಶಕದಲ್ಲಿ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಆಗ ಸರ್ಕಾರದಿಂದ ₹3 ಸಾವಿರ ವಾರ್ಷಿಕ ಅನುದಾನ ಬರುತ್ತಿತ್ತು. ಈ ಸಂಬಂಧ ಅಂದಿನ ಹಣಕಾಸು ಸಚಿವ ರಾಮಕೃಷ್ಣ ಹೆಗಡೆಯವರನ್ನು ಭೇಟಿ ಮಾಡಿದ್ದ ‘ಜೀವಿ’ ಈ ಮೊತ್ತ ₹25 ಸಾವಿರಕ್ಕೆ ಹೆಚ್ಚಿಸುವಂತೆ ಅವರ ಮನವೊಲಿಸಿದ್ದರು. ಪರಿಷತ್ತನ್ನು ಭಾರತದ ಮುಂಚೂಣಿ ವಿದ್ವತ್‌ ಸಂಸ್ಥೆಗಳ ಸಾಲಿನಲ್ಲಿ ತಂದು ನಿಲ್ಲಿಸಿದ ಹಿರಿಮೆಯೂ ಅವರಿಗೆ ಸಲ್ಲಬೇಕು’ ಎಂದರು.

‘ಜೀವಿ ಅವರು ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ, ಅನಂತರ ‘ಕನ್ನಡ–ಕನ್ನಡ’ ಬೃಹತ್‌ ನಿಘಂಟಿನ ಪ್ರಧಾನ ಸಂಪಾದಕರಾಗಿ ನಾಲ್ಕು ದಶಕಗಳ ಕಾಲ ದಣಿವರಿಯದೆ ದುಡಿದಿದ್ದರು. ಅವರ ಪರಿಶ್ರಮದಿಂದಾಗಿ ಭಾರತೀಯ ಭಾಷೆಗಳಲ್ಲೇ ಅತ್ಯಂತ ಅಪರೂಪ ಹಾಗೂ ಅನನ್ಯವಾದ ನಿಘಂಟು ದಕ್ಕಿತು. ಆ ಮೂಲಕ ಕನ್ನಡಕ್ಕೆ ಭಾರತದಲ್ಲಿ ಅಸ್ಮಿತೆ ತಂದುಕೊಟ್ಟಿತು’ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್‌ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು