ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆ ಮುಚ್ಚಲು ಬಿಡುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ l ಕನ್ನಡ ಸಾಹಿತ್ಯ ಪರಿಷತ್ತಿನ ನವೀಕೃತ ಕಟ್ಟಡ ಉದ್ಘಾಟನೆ
Last Updated 26 ಆಗಸ್ಟ್ 2022, 20:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ. 5–10 ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುನ್ನಡೆಸುವ ಬಗ್ಗೆ ಸಾಹಿತ್ಯ ವಲಯ ನೀಡುವ ಸಲಹೆಗಳನ್ನು ಸ್ವೀಕಾರ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ ಹಾಗೂ ಆವರಣದ ನವೀಕೃತ ಕಟ್ಟಡಗಳನ್ನು ಉದ್ಘಾಟಿಸಿ, ಮಾತನಾಡಿದರು. ‘ಕನ್ನಡ ಭಾಷೆಗೆ ಇರುವ ಇತಿಹಾಸ ಭಾರತದ ಬೇರೆ ಯಾವ ಭಾಷೆಗೂ ಇಲ್ಲ. ನಮ್ಮಲ್ಲಿ ಅತ್ಯಂತ ಶ್ರೀಮಂತ ಸಾಹಿತ್ಯವಿದೆ. ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಷತ್ತು ಭವಿಷ್ಯಕ್ಕೆ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಕನ್ನಡ ಎನ್ನುವುದು ಅಭಿಮಾನ ಪ್ರದರ್ಶನದ ವಸ್ತುವಲ್ಲ. ಕನ್ನಡವು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸೀಮಿತವಾಗದೆ, ನಿತ್ಯ ನಿರಂತರವಾಗಬೇಕು’ ಎಂದರು.

‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆಯು ವಿಧಾನಮಂಡಲದಲ್ಲಿ ಚರ್ಚೆಯಾಗುವ ಮುನ್ನ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಗೋವಾ, ಸೊಲ್ಲಾಪುರ, ಕಾಸರಗೋಡಿನಲ್ಲಿ ಕನ್ನಡ ಭವನವನ್ನು ವರ್ಷದಲ್ಲಿ ನಿರ್ಮಿಸಲಾಗುತ್ತದೆ’ ಎಂದು
ಹೇಳಿದರು.

ಕಂದಾಯ ಸಚಿವ ಆರ್. ಅಶೋಕ್, ‘ಕನ್ನಡದ ಹೋರಾಟಗಳಲ್ಲಿ ಪರಿಷತ್ತು ಮುಂಚೂಣಿಯಲ್ಲಿ ನಿಲ್ಲಬೇಕು. ಚಾಮರಾಜಪೇಟೆಯ ಈದ್ಗಾ ಮೈದಾನವು ಕಂದಾಯ ಇಲಾಖೆಯ ಆಸ್ತಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಈ ಬಾರಿ ಚಾಮರಾಜಪೇಟೆ ಮೈದಾನದಲ್ಲಿಯೇ ಕನ್ನಡ ರಾಜೋತ್ಸವ ಆಚರಿಸಲು ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

₹10 ಕೋಟಿ ಧನಸಹಾಯ: ಪರಿ ಷತ್ತಿನ ಅಧ್ಯಕ್ಷ ಮಹೇಶ ಜೋಶಿ, ‘ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಹಿತದೃಷ್ಟಿಯಿಂದ ನ್ಯಾ.ಎಸ್.ಆರ್. ಬನ್ನೂರಮಠ ನೇತೃತ್ವದಲ್ಲಿ ತಯಾರಿಸಿರುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ಗೆ ಕಾನೂನು ರೂಪ ನೀಡಬೇಕು. ಚಾಮರಾಜಪೇಟೆಯ ಮಿಂಟೊ ವೃತ್ತದದಿಂದ ಮಕ್ಕಳ ಕೂಟದವರೆಗಿನ ರಸ್ತೆಯನ್ನು ‘ಕನ್ನಡ ಸಾಹಿತ್ಯ ಪರಿಷತ್ತಿ’ನ ರಸ್ತೆ ಎಂದು ಮರುನಾಮಕರಣ ಮಾಡಿ, ಸಾಹಿತ್ಯಿಕ ವಾತಾವರಣ ನಿರ್ಮಿಸಲು ಅನುವು ಮಾಡಿಕೊಡಬೇಕು. ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಬೇಕು. ಪರಿಷತ್ತಿನ ಕಟ್ಟಡಗಳ ನವೀಕರಣ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರವು ₹10 ಕೋಟಿ ಧನಸಹಾಯ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

‘ಶ್ರೀ ಕೃಷ್ಣರಾಜ ಪರಿಷನ್ಮಂದಿರ ಎಂಬ ಸಂಸ್ಕೃತ ಪದವನ್ನು ‘ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರ’ ಎಂದು ಬದಲಾಯಿಸಲಾಗಿದೆ. ಐದು ವರ್ಷಗಳಲ್ಲಿ ಒಂದು ಕೋಟಿ ಸದಸ್ಯತ್ವದ ಗುರಿ ಹಾಕಿಕೊಳ್ಳಲಾಗಿದೆ. ಇಷ್ಟು ಸದಸ್ಯತ್ವದಿಂದ ₹ 250 ಕೋಟಿ ಹಣ ಸಂಗ್ರಹವಾಗುತ್ತದೆ. ಇದನ್ನು ನಿಶ್ಚಿತ ಠೇವಣಿ ಇರಿಸಿದರೆ ಸರ್ಕಾರದ ಮೇಲಿನ ಅವಲಂಬನೆ ತಪ್ಪಲಿದೆ’
ಎಂದರು.

‘ನಾಡಗೀತೆ: ಅನಂತಸ್ವಾಮಿ ಧಾಟಿ ಅಂತಿಮಗೊಳಿಸಿ’

‘ನಾಡಗೀತೆಯ ಧಾಟಿಗೆ ಸಂಬಂಧಿಸಿದ ಗೊಂದಲವನ್ನು ಸರ್ಕಾರ ನಿವಾರಿಸಬೇಕು. ಮೈಸೂರು ಅನಂತಸ್ವಾಮಿ ಅವರು ಸಂಯೋಜಿಸಿದ ರಾಗವನ್ನು ಉಳಿಸಿಕೊಳ್ಳಬೇಕು. ಶ್ರೀಲಂಕಾದ ರಾಷ್ಟ್ರಗೀತೆ ಹೊರತುಪಡಿಸಿದರೆ, ಉಳಿದ ಎಲ್ಲ ರಾಷ್ಟ್ರಗೀತೆಗಳು ಒಂದು ನಿಮಿಷದಲ್ಲಿ ಮುಗಿಯುತ್ತವೆ. ನಮ್ಮ ನಾಡಗೀತೆಯ ವಿಚಾರವಾಗಿ ಮೊದಲ ಚರಣ ಮತ್ತು ‘ಸರ್ವಾಜನಾಂಗದ ಶಾಂತಿಯ ತೋಟ’ ಚರಣವನ್ನು ಇಟ್ಟುಕೊಂಡು ಹಾಡಬೇಕು. ಅನಂತಸ್ವಾಮಿ ಅವರ ಸ್ವರ ಸಂಯೋಜನೆ ಉಳಿಸಿಕೊಳ್ಳಬೇಕು’ ಎಂದು ಸಾಹಿತಿ ಕಮಲಾ ಹಂಪನಾ ಆಗ್ರಹಿಸಿದರು.

‘ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಶಾಲೆಯನ್ನು ಸರ್ಕಾರ ನವೀಕರಣ ಮಾಡಬೇಕು’ ಎಂದು ಒತ್ತಾಯಿಸಿದರು.
ನ.11ರಿಂದ ಸಾಹಿತ್ಯ ಸಮ್ಮೇಳನ

‘86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿಯಲ್ಲಿ ನ.11, 12 ಹಾಗೂ 13 ರಂದು ನಡೆಯಲಿದೆ. ಸಮ್ಮೇಳನ ನಡೆಯುವ ಮೂರು ದಿನವೂ ಬೇರೆ ಬೇರೆ ಕಾರಣದಿಂದ ಸರ್ಕಾರಿ ರಜೆ ಇದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿಕೊಂಡರು.

ಕನ್ನಡ ನುಡಿ ನಿತ್ಯ ಬೆಳವಣಿಗೆ ಹೊಂದುವ ಹಾಗೆ ನೋಡಿಕೊಳ್ಳುವ ತಾಕತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಇದೆ. ಇಡೀ ದೇಶದಲ್ಲಿ ಇಂತಹ ಸಂಸ್ಥೆಯಿಲ್ಲ

– ಚಂದ್ರಶೇಖರ ಕಂಬಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ಅನೇಕ ಕನ್ನಡಿಗರು ತಮಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಹಾಗೆ ಮಾಡಿದರೆ ಕನ್ನಡ ಭಾಷೆಗೆ ನಾವು ಮಾಡುವ ಅನ್ಯಾಯ.

– ದೊಡ್ಡರಂಗೇಗೌಡ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT