ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಲಕ್ಕೊಂದು ಕೆರೆ, ಕನಿಷ್ಠ ಬೆಲೆ: ಕೃಷಿ ಬೆಲೆ ಆಯೋಗದಿಂದ ಸಿಎಂಗೆ ವರದಿ ಸಲ್ಲಿಕೆ

Last Updated 23 ನವೆಂಬರ್ 2021, 19:36 IST
ಅಕ್ಷರ ಗಾತ್ರ

ಬೆಂಗಳೂರು: ಹೊಲಕ್ಕೊಂದು ಕೆರೆ ನಿರ್ಮಾಣ, ತೋಟಗಾರಿಕಾ ಮಾರಾಟ ಮಹಾಮಂಡಳ ರಚನೆ,ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಡಿತರ) ವಿತರಿಸಲು ಅಗತ್ಯ ಆಹಾರ ಧಾನ್ಯಗಳನ್ನು ರಾಜ್ಯದಿಂದಲೇ ಕೇಂದ್ರ ಸರ್ಕಾರ ಸಂಗ್ರಹಿಸುವುದೂ ಸೇರಿ ವಿವಿಧ ಶಿಫಾರಸುಗಳನ್ನು ಒಳಗೊಂಡ ವಿಸ್ತೃತ
ವರದಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃಷಿ ಬೆಲೆ ಆಯೋಗ ಮಂಗಳವಾರ ಸಲ್ಲಿಸಿದೆ.

ಆಯೋಗ ಸಿದ್ಧಪಡಿಸಿದ ಈ ವರದಿ 10 ಅಧ್ಯಾಯಗಳನ್ನು ಒಳಗೊಂಡಿದೆ. ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಕುರಿತ ವಿಶ್ಲೇಷಣೆ ವರದಿಯಲ್ಲಿದೆ.

ರಾಜ್ಯದ ಐದು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಿರುವ ‘ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಘಟಕ’ಗಳ ಸಹಯೋಗದಲ್ಲಿ 27 ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಾಗುವಳಿ ವೆಚ್ಚದ ಲೆಕ್ಕಾಚಾರದ ಆಧಾರದಲ್ಲಿ ಆಯೋಗ ಈ ವರದಿ ಸಿದ್ಧಪಡಿಸಿದೆ. ವರದಿ ಸಿದ್ಧಪಡಿಸಲು 383 ಅತಿ ಸಣ್ಣ ರೈತರು, 575 ಸಣ್ಣ ರೈತರು, 589 ಅರೆ ಮಧ್ಯಮ ರೈತರು, 358 ಮಧ್ಯಮ ರೈತರು ಮತ್ತು 90 ದೊಡ್ಡ ರೈತರು ಸೇರಿ ಒಟ್ಟು 1,995 ರೈತರಿಂದ ಮಾಹಿತಿ ಸಂಗ್ರಹಿಸಲಾಗಿದೆ.

ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಮಾರುಕಟ್ಟೆ ಶುಲ್ಕದ ಸಂಗ್ರಹ 2019–20 ರಲ್ಲಿ ₹ 618 ಕೋಟಿ ಆಗಿದ್ದರೆ, 2020–21ರಲ್ಲಿ ₹ 294 ಕೋಟಿಗೆ ಇಳಿಕೆಯಾಗಿದೆ. ಶೇ 48ರಷ್ಟು ಕಡಿಮೆ ಆಗಿದ್ದರಿಂದ ಎಪಿಎಂಸಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ವರದಿ ಹೇಳಿದೆ.

ಬೆಲೆ ಏರಿಳಿತ ತಪ್ಪಿಸಲು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉತ್ಪನ್ನಗಳನ್ನು ಖರೀದಿಸಬೇಕು. ಈ ಉದ್ದೇಶಕ್ಕೆ ಆವರ್ತ ನಿಧಿಯ ಮೊತ್ತ ಹೆಚ್ಚಿಸಬೇಕು. ರಾಜ್ಯದಲ್ಲಿ ಬೆಳೆಯುವ ಭತ್ತ, ರಾಗಿ, ಜೋಳ ಉತ್ಪನ್ನಗಳ ಉತ್ಪಾದನೆ ಸುಸ್ಥಿರಗೊಳಿಸಲು, ರೈತರಿಂದ ಉತ್ಪನ್ನಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಿಸಿದರೆ ಬೆಳೆಗಾರರಿಗೆ ನಿರ್ದಿಷ್ಟ ಬೆಲೆ ಸಿಗುವಂತೆ ಮಾಡಬಹುದು ಎಂದೂ ಆಯೋಗ ಅಭಿಪ್ರಾಯಪಟ್ಟಿದೆ.

ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮಗೌಡ ಬೆಳಗುರ್ಕಿ ವರದಿ ಸಲ್ಲಿಸಿದರು. ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಬಿಜೆಪಿ ಮುಖಂಡ ಪ್ರತಾಪಗೌಡ ಪಾಟೀಲ ಇದ್ದರು.

ಏನಿದು ಹೊಲಕ್ಕೊಂದು ಕೆರೆ ನಿರ್ಮಾಣ?:

ರೈತರೇ ತಮ್ಮ ಹೊಲಗಳಲ್ಲಿ ಹಿಡುವಳಿಯ ಶೇ 10 ರಷ್ಟನ್ನು, ಅಂದರೆ 4 ಎಕರೆ ಜಮೀನು ಇರುವ ಹಿಡುವಳಿದಾರ ಕನಿಷ್ಠ ನಾಲ್ಕರಲ್ಲಿ ಒಂದಂಶದಲ್ಲಿ ಕೆರೆ ನಿರ್ಮಿಸಿಕೊಳ್ಳಬೇಕು. 100 ಅಡಿ ಉದ್ದ, 100 ಅಡಿ ಅಗಲ 20 ಅಡಿ ಆಳದ ಕೆರೆ ನಿರ್ಮಿಸಿದರೆ ಸುಮಾರು 2 ಲಕ್ಷ ಘನ ಅಡಿ ನೀರು ಶೇಖರಿಸಬಹುದು. ಒಂದು ಎಕರೆಯಲ್ಲಿ ಕೆರೆ ನಿರ್ಮಿಸಲು 2 ಲಕ್ಷ ಘನ ಅಡಿ ಮಣ್ಣು ತೆಗೆದು ಸಾಗಿಸಲು ₹ 3 ಲಕ್ಷ ಖರ್ಚು ಆಗ
ಬಹುದು. ಕೆರೆ ನಿರ್ಮಾಣಕ್ಕೆ ತಗಲುವ ವೆಚ್ಚದಲ್ಲಿ ಸಣ್ಣ, ಅತಿ ಸಣ್ಣ, ಎಸ್‌ಸಿ, ಎಸ್‌ಟಿ ಸಮುದಾಯದ ರೈತರಿಗೆ ಶೇ 50, ಇತರರಿಗೆ ಶೇ 25ರಷ್ಟು ರಿಯಾಯಿತಿ ನೀಡಬೇಕು ಎಂದು ವರದಿಯಲ್ಲಿ ಆಯೋಗ ಹೇಳಿದೆ.

ಪ್ರಮುಖ ಶಿಫಾರಸುಗಳು

l ಕೃಷಿ ಉತ್ಪನ್ನಗಳು ಕನಿಷ್ಠ ಬೆಂಬಲ ಬೆಲೆಗಿಂತಲೂ ಕಡಿಮೆ ಬೆಲೆಗೆ ಮಾರಾಟ ಆಗದ ರೀತಿಯಲ್ಲಿ ‘ಶಾಸನಬದ್ಧ ಕನಿಷ್ಠ ಬೆಲೆ’ ಕಾಯ್ದೆ ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು

l ಕೃಷಿ ಯಂತ್ರಗಳ ಖರೀದಿಗೆ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಶೇ 90, ಮಧ್ಯಮ ರೈತರಿಗೆ ಶೇ 75, ದೊಡ್ಡ ರೈತರಿಗೆ ಶೇ 50ರಷ್ಟು ರಿಯಾಯಿತಿ ನೀಡಬೇಕು

l ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಬದಲಿಸಿ, ಪ್ರತಿ ಹೆಕ್ಟೇರ್‌ ಕೃಷಿ ಮತ್ತು ವಾಣಿಜ್ಯ ಬೆಳೆಗಳಿಗೆ ₹ 50 ಸಾವಿರ, ಬಹುವಾರ್ಷಿಕ ಬೆಳೆಗಳಿಗೆ ₹ 1 ಲಕ್ಷ ಪರಿಹಾರ ಧನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು

l ಬೆಳೆ ವಿಮೆಯಲ್ಲಿ ರೈತರು ನೋಂದಣಿ ಕಡ್ಡಾಯಗೊಳಿಸಬೇಕು. ಕಿಸಾನ್‌ ಸಮ್ಮಾನ್‌ ಹಣದಲ್ಲಿ ವಿಮಾ ಕಂತು ಭರಿಸಬಹುದು

l ಕೃಷಿ ಯಂತ್ರಗಳು ದೊರಕುವಂತೆ ಮಾಡಲು ಓಲಾ, ಉಬರ್‌ ಮಾದರಿ ವ್ಯವಸ್ಥೆ ಅಭಿವೃದ್ಧಿಪಡಿಸಬೇಕು

l ರೈತ ಸಂಶೋಧಕರಿಗೆ ಪ್ರೋತ್ಸಾಹ ನೀಡಲು ‘ರೈತ ಆವಿಷ್ಕಾರ ನಿಧಿ’ ಸ್ಥಾಪಿಸಬೇಕು

l ಎಪಿಎಂಸಿಗಳನ್ನು ಸದೃಢಗೊಳಿಸಲು ಮಾರುಕಟ್ಟೆ ಶುಲ್ಕವನ್ನು ಶೇ 0.60ರಿಂದ ಶೇ 1ಕ್ಕೆ ಹೆಚ್ಚಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT