ಶುಕ್ರವಾರ, ಜನವರಿ 27, 2023
19 °C

ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ ಜಾರಿ: ಆರ್‌. ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಆರ್ಯ ವೈಶ್ಯ ಅಭಿವೃದ್ಧಿ ನಿಗಮವು ಸಮುದಾಯದವರಿಗೆ ನೆರವಾಗಲು 2022-23ನೇ ಸಾಲಿಗೆ ‘ಆರ್ಯ ವೈಶ್ಯ ಆಹಾರ ವಾಹಿನಿ’ ಎಂಬ ಹೊಸ ಯೋಜನೆ ಜಾರಿಗೆ ತಂದಿದ್ದು,‌ ಫಲಾನುಭವಿಗಳಿಗೆ ₹2 ಲಕ್ಷ ಸಹಾಯಧನ ನೀಡಲಾಗುವುದು’ ಎಂದು ಕಂದಾಯ ಸಚಿವ ಆರ್‌. ಅಶೋಕ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಆರ್ಯ ವೈಶ್ಯ ಸಮುದಾಯದ ಜನರು ಪಾರಂಪರಿಕವಾಗಿ ತಿಂಡಿತಿನಿಸು ತಯಾರು ಮಾಡುವುದರಲ್ಲಿ ಪ್ರವೀಣರು. ತಿಂಡಿ ತಿನಿಸು ತಯಾರಿಸುವವರಿಗೆ ಪ್ರೋತ್ಸಾಹ ನೀಡಲು ಈ ಯೋಜನೆಗೆ ಜಾರಿಗೆ ತರಲಾಗಿದೆ’ ಎಂದರು.

‘ಆಹಾರ ವಾಹಿನಿ ಆರಂಭಿಸಲು ಫ್ರಾಂಚೈಸ್‌ ಪಡೆಯಲು ಅವಕಾಶವಿದೆ. ಈ ಬಗ್ಗೆ ನಿಗಮದ ವತಿಯಿಂದ ಉಚಿತ ತರಬೇತಿ ನೀಡಲಾಗುವುದು. ಯೋಜನೆಯ ಪ್ರಯೋಜನ ಪಡೆಯಲು 55 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ವಾರ್ಷಿಕ ವರಮಾನ ₹ 6 ಲಕ್ಷ ಮಿತಿಯಲ್ಲಿರಬೇಕು. ಆನ್‌ಲೈನ್‌ನಲ್ಲಿ (kacdc.karnataka.gov.in) ಇದೇ 20ರವರೆಗೆ ಅರ್ಜಿ ಸಲ್ಲಿಸಬಹುದು’ ಎಂದು ಸಚಿವರು ತಿಳಿಸಿದರು.

‘ಕಂಪನಿ ಕಾಯ್ದೆಯನ್ವಯ 2019ರಲ್ಲಿ ಸ್ಥಾಪನೆಯಾಗಿರುವ ಈ ನಿಗಮವು, ಮೂರು ವರ್ಷಗಳಿಂದ ಹಿಂದುಳಿದ ವರ್ಗಗಳ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿತ್ತು. ಪ್ರಸಕ್ತ ಸಾಲಿನಿಂದ ಕಂದಾಯ ಸಚಿವಾಲಯದಡಿ ಕಾರ್ಯನಿರ್ವಹಿಸಲಿದೆ. ಸದ್ಯ ನಿಗಮಕ್ಕೆ ಅಧ್ಯಕ್ಷರಿಲ್ಲ. ಹೀಗಾಗಿ ನಾನೇ ಅಧ್ಯಕ್ಷನಾಗಿದ್ದೇನೆ. ಮುಂದಿನ ದಿನಗಳಲ್ಲಿ ಅಧ್ಯಕ್ಷರನ್ನು ನೇಮಿಸಲಾಗುವುದು’ ಎಂದು ಅವರು ಹೇಳಿದರು.

‘ನಿಗಮಕ್ಕೆ ₹ 21 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಟ್ಟು 2,013 ಫಲಾನುಭವಿಗಳಿಗೆ ಸಾಲ ನೀಡಿ ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ನಿಗಮದಲ್ಲಿ ಮಾತ್ರ ಸಾಲ ನೀಡಿದ ಹಣ ವಾಪಸು ಬರುತ್ತಿದೆ. ಇತರ ನಿಗಮಮಗಳೂ ಇದೇ ರೀತಿ ಆಗಬೇಕು. ನಿಗಮದಲ್ಲಿ ಎಲ್ಲ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತಿದೆ. ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ₹10 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಸಚಿವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು