ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೆ ಅಮಿತ್ ಶಾ ಬಂದಿರುವುದು ಎಲೆಕ್ಷನ್‌ಗೋ, ಕಲೆಕ್ಷನ್‌ಗೋ: ಕಾಂಗ್ರೆಸ್

Last Updated 3 ಮಾರ್ಚ್ 2023, 13:53 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿರುವುದು ವಿಧಾನಸಭೆ ಚುನಾವಣೆಗೋ ಅಥವಾ ಶೇ 40ರಷ್ಟು ಕಲೆಕ್ಷನ್‌ಗೋ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದೇವನಹಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಭಾಗವಹಿಸಲು ಅಮಿತ್ ಶಾ ಅವರು ರಾಜ್ಯಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ಚುನಾವಣೆಗಾಗಿ ಕರ್ನಾಟಕಕ್ಕೆ ಮೂರು ದಿನಕ್ಕೊಮ್ಮೆ ಬರುತ್ತಿರುವ ಅಮಿತ್ ಶಾ ಅವರೇ, ಕೇಂದ್ರ, ಗೋವಾ, ಮಹಾರಾಷ್ಟ್ರ, ಕರ್ನಾಟಕ ಎಲ್ಲೆಡೆಯೂ ನಿಮ್ಮದೇ ಸರ್ಕಾರವಿದ್ದರೂ ಮಹದಾಯಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಕೊಡಿಸದೆ ಚುನಾವಣೆಗಾಗಿ ಬಣ್ಣದ ಕಾಗೆ ಹಾರಿಸುತ್ತಿರುವುದೇಕೆ? ಕನ್ನಡಿಗರ ಮತ ಬೇಕು, ಹಿತ ಬೇಡವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬೆಳಗಾವಿಯಲ್ಲಿ ಎಂಇಎಸ್ ಪುಂಡರಿಂದ ಕನ್ನಡಿಗರ ಮೇಲೆ ನಿರಂತರ ಹಲ್ಲೆ, ದೌರ್ಜನ್ಯ ನಡೆಯುತ್ತಿದೆ. ದೇಶದ ಗೃಹಸಚಿವರಾಗಿ ಕನ್ನಡಿಗರಿಗೆ ರಕ್ಷಣೆ ನೀಡಲಾಗದ ತಮ್ಮಿಂದ ಕನ್ನಡಿಗರಿಗೆ ಸಿಗುವುದಾದರೂ ಏನು? ಕರ್ನಾಟಕದ ಕಷ್ಟ ಕೇಳಲು ಬರದೆ, ಚುನಾವಣೆ ಪ್ರಚಾರಕ್ಕೆ ಬರುವ ಅಮಿತ್‌ ಶಾ ಅವರ ದ್ರೋಹ ಕನ್ನಡಿಗರಿಗೆ ನೆನಪಿದೆ’ ಎಂದು ಕಾಂಗ್ರೆಸ್ ಗುಡುಗಿದೆ.

‘ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರವು ಲುಂಗಿ ಡಾನ್ಸ್ ಮಾಡ್ತಿದ್ದರೂ ಕೇಂದ್ರ ನಾಯಕರು ತುಟಿ ಬಿಚ್ಚುವುದಿಲ್ಲವೇಕೆ?, ಪ್ರಧಾನಿಗೆ ಪತ್ರಗಳ ಮೇಲೆ ಪತ್ರ ಬರೆದರೂ ಸಣ್ಣ ಸ್ಪಂದನೆಯೂ ಇಲ್ಲವೇಕೆ?, ಬಿಜೆಪಿ ಹೈಕಮಾಂಡಿಗೆ ಕರ್ನಾಟಕ ಸಮೃದ್ಧವಾದ ಎಟಿಎಂ ಆಗಿದೆಯೇ?, ಅಮಿತ್ ಶಾ ಬಂದಿರುವುದು ಎಲೆಕ್ಷನ್‌ಗೋ, ಕಲೆಕ್ಷನ್‌ಗೋ’ ಎಂದು ಕಾಂಗ್ರೆಸ್ ಕುಟುಕಿದೆ.

‘ಕರ್ನಾಟಕದ ‘ನಂದಿನಿ’ಯ ಮೇಲೆ ಕಣ್ಣು ಹಾಕಿದ ಅಮಿತ್ ಅವರೇ, ನಿಮ್ಮದು ಕೆಎಂಎಫ್ ಉದ್ಯೋಗಗಳನ್ನು ಕನ್ನಡಿಗರಿಂದ ಕಿತ್ತು ಉತ್ತರ ಭಾರತೀಯರ ಕೈಗೆ ಕೊಡುವ ಹುನ್ನಾರವೇ?, ‘ನಂದಿನಿ’ ಬ್ರಾಂಡ್ ಮುಳುಗಿಸಿ ‘ಅಮುಲ್‌’ ಅನ್ನು ತಂದು ಸ್ಥಾಪಿಸುವ ಷಡ್ಯಂತ್ರವೇ? ಸ್ವಾಭಿಮಾನದ ನಂದಿನಿಯನ್ನು ಮುಳುಗಿಸಿ ರಾಜ್ಯದ ರೈತರನ್ನು ಗುಲಾಮಗಿರಿಗೆ ತಳ್ಳುವ ತಂತ್ರವೇ?’ ಎಂದು ಕಾಂಗ್ರೆಸ್‌ ಟೀಕಿಸಿದೆ.

ನಿರಂತರವಾಗಿ ಗಡಿ ಕಲಹ ಸೃಷ್ಟಿಸುತ್ತಿದೆ ಮಹಾರಾಷ್ಟ್ರ. ಇತ್ತೀಚಿಗೆ ನಿಮ್ಮದೇ ಪಕ್ಷದ ದೇವೇಂದ್ರ ಫಡಣವೀಸ್ ಬೆಳಗಾವಿಯನ್ನು ಬಿಡುವುದಿಲ್ಲ ಎಂದಿದ್ದರು. ಈ ಬಗ್ಗೆ ಕರ್ನಾಟಕಕ್ಕೆ ತಾವು ಕೊಡುವ ಸ್ಪಷ್ಟನೆ ಏನು? ಒದಗಿಸುವ ನ್ಯಾಯವೇನು? ಮಹಾರಾಷ್ಟ್ರದ ಪರವೇ ಮಮಕಾರ ತೋರುವ ತಾವು ಯಾವ ನೈತಿಕತೆಯಲ್ಲಿ ಕರ್ನಾಟಕಕ್ಕೆ ಬಂದು ಮತ ಕೇಳುವಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT