ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಚುನಾವಣಾ ಕಣ: ಕಾಂಗ್ರೆಸ್‌–ಕಮಲ ತಯಾರಿ

Last Updated 12 ಡಿಸೆಂಬರ್ 2022, 19:54 IST
ಅಕ್ಷರ ಗಾತ್ರ

ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಉಳಿದಿರುವಂತೆ ಬಿಜೆಪಿ – ಕಾಂಗ್ರೆಸ್‌ ಪಕ್ಷಗಳಲ್ಲಿ ರಾಜಕೀಯ ತಂತ್ರಗಾರಿಕೆ ಬಿರುಸುಗೊಂಡಿದೆ. ನವದೆಹಲಿಯಲ್ಲಿ ಸೋಮವಾರ ರಾಜ್ಯದ ನಾಯಕರ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಗ್ಗಟ್ಟಿನಿಂದ ಮುಂದಡಿ ಇಡುವಂತೆ ಕಿವಿಮಾತು ಹೇಳಿದ್ದಾರೆ. ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಉಮೇದಿನಲ್ಲಿರುವ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ರಾಜ್ಯಕ್ಕೆ ಕರೆತಂದು ಸಂಘಟನೆಯನ್ನು ಚುರುಕುಗೊಳಿಸುವತ್ತ ಕಾರ್ಯತಂತ್ರ ಹೆಣೆದಿದೆ.

ಮೈ ಚಳಿ ಬಿಡಿ, ಒಗ್ಗಟ್ಟು ತೋರಿ: ಖರ್ಗೆ

ನವದೆಹಲಿ: ‘ಕರ್ನಾಟಕದಲ್ಲಿ ‘ಭಾರತ್‌ ಜೋಡೊ ಯಾತ್ರೆ’ (ಭಾರತ ಒಗ್ಗೂಡಿಸಿ) ಯಶಸ್ಸಿನ ನಂತರ ಪಕ್ಷದ ಸಂಘಟನಾ ಚಟುವಟಿಕೆ ವೇಗ ಕಳೆದುಕೊಂಡಿದೆ. ಇದೇ ವೇಳೆ, ಬಿಜೆಪಿ ಹಾಗೂ ಜೆಡಿಎಸ್‌ ಪಾಳಯದಲ್ಲಿ ಚುರುಕಿನಿಂದ ಚುನಾವಣಾ ತಯಾರಿಗಳು ನಡೆಯು
ತ್ತಿವೆ. ಕಾಂಗ್ರೆಸ್‌ನರಾಜ್ಯ ನಾಯಕರು ಮೈ ಚಳಿ ಬಿಟ್ಟು ಕೆಲಸ ಮಾಡದಿದ್ದರೆ ಕಷ್ಟ’ ಎಂದು ಕಾಂಗ್ರೆಸ್‌ ಹೈಕಮಾಂಡ್ ಎಚ್ಚರಿಸಿದೆ.

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸುಮಾರು ಮೂರು ಗಂಟೆ ನಡೆದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆಯಾಯಿತು. ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ, ಚುನಾವಣಾ ನೀತಿ ತಜ್ಞ ಸುನಿಲ್‌ ಕನುಗೋಲ್‌ ಅವರು ರಾಜ್ಯ ಘಟಕದ ಲೋಪಗಳ ಬಗ್ಗೆ ಬೊಟ್ಟು ಮಾಡಿದರು ಎಂದು ಮೂಲಗಳು ಹೇಳಿವೆ.

ಈ ಸಭೆಯ ಬಳಿಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುನಿಲ್‌ ಕನುಗೋಲ್‌ ಪ್ರತ್ಯೇಕ ಸಭೆ ನಡೆಸಿದರು. ಈ ವೇಳೆ, ಪಕ್ಷ ಸಂಘಟನೆಯಲ್ಲಿನ ಲೋಪ, ರಾಜ್ಯ ಕಾಂಗ್ರೆಸ್‌ನ ಬಣ ರಾಜಕಾರಣದ ಬಗ್ಗೆ ಸುದೀರ್ಘವಾಗಿ ಚರ್ಚೆಯಾಯಿತು. ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಉಭಯ ನಾಯಕರಿಗೆ ಖರ್ಗೆ ಕಿವಿಮಾತು ಹೇಳಿದರು ಎಂದು ಮೂಲಗಳು ತಿಳಿಸಿವೆ.

‘ಭಾರತ್‌ ಜೋಡೊ ಯಾತ್ರೆಯಿಂದ ಪಕ್ಷದ ಕಾರ್ಯಕರ್ತರಿಗೆ ದೊಡ್ಡ ಹುರುಪು ಬಂದಿತ್ತು. ಅದರ ನಂತರ, ಪಕ್ಷ ಸಂಘಟನಾ ಚಟುವಟಿಕೆ ಬಹುತೇಕ ನಿಂತ ನೀರಾಗಿದೆ’ ಎಂದು ಕನಗೋಳ್ ಸಭೆಯ ಗಮನಕ್ಕೆ ತಂದರು ಎಂದು ಮೂಲಗಳು ತಿಳಿಸಿವೆ.

‘ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ಜನರಿಗೆ ದೊಡ್ಡ ಮಟ್ಟದ ಅಸಮಾಧಾನ ಇದೆ. ಆದರೆ, ಇದರ ವಿರುದ್ಧ ಕಾಂಗ್ರೆಸ್‌ ದೊಡ್ಡ ಮಟ್ಟದ ಹೋರಾಟ ಮಾಡುತ್ತಿಲ್ಲ. ಬಿಜೆಪಿ ಗ್ರಾಫ್‌ ಕುಸಿಯುತ್ತಿದ್ದರೂ ಕಾಂಗ್ರೆಸ್‌ನ ಸ್ಥಿತಿ ಸುಧಾರಣೆ ಆಗಿಲ್ಲ. ಒಂದು ತಿಂಗಳಿಂದ ಪಕ್ಷವು ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಿಲ್ಲ. ಅದೇ ಹೊತ್ತಿಗೆ, ಮುಖ್ಯಮಂತ್ರಿ ಅವರೇ ಜನಸಂಕಲ್ಪ ಯಾತ್ರೆ ಹೆಸರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ಜೆಡಿಎಸ್‌ ಪಂಚರತ್ನ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ನಡೆಸದಿದ್ದರೆ ಹಿನ್ನಡೆ
ಖಚಿತ’ ಎಂದು ಅವರು ಎಚ್ಚರಿಸಿದರು. ಇದಕ್ಕೆ ಹಿರಿಯ ನಾಯಕರು ಧ್ವನಿಗೂಡಿಸಿದರು ಎಂದು ಮೂಲಗಳು ಹೇಳಿವೆ.

’ಅಧಿಕಾರಕ್ಕಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಬಣಗಳ ನಡುವೆ ಈಗಲೇ ಕಿತ್ತಾಟ ಆರಂಭವಾಗಿದೆಎಂಬು ದನ್ನು ಬಿಜೆಪಿಯು ಜನರ ಮನದಲ್ಲಿ ತುಂಬುತ್ತಿದೆ. ಈ ಗೊಂದಲವನ್ನು ಮೊದಲು ಪರಿಹರಿಸಬೇಕು. ಈ ವಿಷಯ ಪ್ರಸ್ತಾಪವಾದ ವೇಳೆ ಇಬ್ಬರು ನಾಯಕರು ಒಟ್ಟಾಗಿ ತಿರುಗೇಟು ನೀಡಬೇಕು. ಇಲ್ಲದಿದ್ದರೆ, ಬಿಜೆಪಿಯವರು ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲಿ ದ್ದಾರೆ’ ಎಂದೂ ಚರ್ಚೆಯಾಯಿತು.

ಬಸ್‌ ಯಾತ್ರೆಗೆ ಮೊದಲು ಕನಿಷ್ಠ 150 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಬೇಕು ಎಂದು ಹಲವು ಮುಖಂಡರು ಸಭೆಯಲ್ಲಿ ಸಲಹೆ ನೀಡಿ ದರು. ಪಕ್ಷದ ಚುನಾವಣಾ ಸಮಿತಿಯನ್ನು ಮಂಗಳವಾರ ಸಂಜೆಯೊಳಗೆ ಘೋಷಣೆ ಮಾಡಲಾಗುತ್ತದೆ. ಈ ಸಮಿತಿಯು ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲನೆ ನಡೆಸಲಿದೆ. ಗೊಂದಲ ಇಲ್ಲದ ಕ್ಷೇತ್ರ ಗಳ ಅಭ್ಯರ್ಥಿಗಳ ಹೆಸರನ್ನು ಶೀಘ್ರ ಪ್ರಕಟಿಸುವ ಕುರಿತು ಒಮ್ಮತಕ್ಕೆ ಬರಲಾ ಯಿತು ಎಂದು ಮೂಲಗಳು ಹೇಳಿವೆ.

75 ದಿನಗಳ ಕಾರ್ಯಸೂಚಿ: ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಸಜ್ಜುಗೊಳಿಸಲು ಪಕ್ಷವು ‘75 ದಿನಗಳ ಕಾರ್ಯಸೂಚಿ’ ಸಿದ್ಧಪಡಿಸಿದ್ದು, ಈ ಅವಧಿಯಲ್ಲಿ ಬಸ್ ಯಾತ್ರೆ, ಸರಣಿ ಸಮಾವೇಶ ನಡೆಸಲು ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ, ‘ಕರ್ನಾಟಕದ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ. ಸರ್ಕಾರದ ಶೇ 40ರಷ್ಟು ಭ್ರಷ್ಟಾಚಾರವನ್ನು ಮನೆ ಮನೆಗಳಿಗೆ ಮುಟ್ಟಿಸಲು ಪಕ್ಷ ಕಾರ್ಯತಂತ್ರ ರೂಪಿಸಿದೆ’ ಎಂದರು.

ಡಿ.30ರಂದು ವಿಜಯಪುರದಲ್ಲಿ ಭಾರಿ ಸಮಾವೇಶ ನಡೆಸಲಾಗುತ್ತದೆ. ಕೃಷ್ಣಾ ನದಿ ನೀರು ಹಂಚಿಕೆಯ ವಿಳಂಬದಿಂದ ವಿಜಯಪುರ, ಸುತ್ತಮುತ್ತಲಿನ ಜಿಲ್ಲೆಗಳಿಗೆ ಆಗಿರುವ ತೊಂದರೆಗಳ ಬಗ್ಗೆ ಬೆಳಕು ಚೆಲ್ಲಲಾಗು ತ್ತದೆ. ಜ. 2ರಂದು ಹುಬ್ಬಳ್ಳಿಯಲ್ಲಿ ‘ಮಹದಾಯಿ’ ಸಮಾವೇಶ, ಜ. 8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮಾವೇಶ ನಡೆಸಲಾಗುತ್ತದೆ. ಆ ಬಳಿಕ ಹಿಂದುಳಿದ ವರ್ಗಗಳ, ಮಹಿಳೆಯರ ಸಮಾವೇಶ ಏರ್ಪಡಿಸಲಾಗುತ್ತದೆ ಎಂದರು.

ಕ್ಷೇತ್ರಗಳಿಗೆ ಪ್ರತ್ಯೇಕ ಬಸ್‌ ಯಾತ್ರೆ

ಜನವರಿ ಎರಡನೇ ವಾರದಿಂದ ಜಿಲ್ಲಾವಾರು ಹಾಗೂ 224 ವಿಧಾನಸಭಾ ಕ್ಷೇತ್ರಗಳಿಗೆ ಬಸ್‌ ಯಾತ್ರೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಯಾತ್ರೆಯನ್ನು 50 ದಿನಗಳಲ್ಲಿ ಪೂರ್ಣಗೊಳಿಸಲು ಯೋಜಿಸಲಾಗಿದೆ.

ಬಣ ರಾಜಕಾರಣದ ಗೊಂದಲ ಉಂಟಾಗುವುದನ್ನು ತಡೆಯಲುಜಿಲ್ಲಾ ಕೇಂದ್ರಗಳಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಯಲ್ಲಿ ಹೋಗಲಿದ್ದಾರೆ. ವಿಧಾನಸಭಾ ಕ್ಷೇತ್ರಗಳಿಗೆ ಇಬ್ಬರು ನಾಯಕರು ಪ್ರತ್ಯೇಕವಾಗಿ ತೆರಳಲಿದ್ದಾರೆ. ಇಬ್ಬರು ಒಟ್ಟಿಗೆ ಸಾಗಿದರೆ ಎಲ್ಲ ಕ್ಷೇತ್ರಗಳನ್ನು 50 ದಿನಗಳಲ್ಲಿ ಮುಗಿಸುವುದು ಕಷ್ಟ ಎಂಬ ಅಭಿಪ್ರಾಯಕ್ಕೆ ಸಭೆಯಲ್ಲಿ ಬರಲಾಯಿತು ಎಂದು ಮೂಲಗಳು ತಿಳಿಸಿವೆ.

ಗೆಲುವಿಗೆ ಬಿಜೆಪಿ ಕಾರ್ಯತಂತ್ರ

ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಿ, ಶತಾಯಗತಾಯ ಅಧಿಕಾರದ ಗದ್ದುಗೆ ಏರಲು ಗುಜರಾತ್‌ ಮತ್ತು ಉತ್ತರಪ್ರದೇಶದಲ್ಲಿ ಹೆಣೆದ ಕಾರ್ಯತಂತ್ರವನ್ನೇ ರಾಜ್ಯ ದಲ್ಲೂ ಪ್ರಯೋಗಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಸಚಿವ ಸಂಪುಟ ವಿಸ್ತರಣೆ, ಟಿಕೆಟ್ ಹಂಚಿಕೆಯಲ್ಲಿ ಯುವಕರಿಗೆ ಆದ್ಯತೆ, ನಾಯಕರ ಒಗ್ಗಟ್ಟಿನ ಮಂತ್ರ, ವಿವಿಧ ಜಾತಿಗಳ ಜನರ ಮತವನ್ನು ಸೆಳೆಯುವ ಸೋಷಿಯಲ್ ಎಂಜಿನಿಯರಿಂಗ್‌, ರಾಜ್ಯ ಮಟ್ಟದಿಂದ ಬೂತ್‌ ಮಟ್ಟದವರೆಗೆ ಗೆಲುವಿಗಾಗಿ ಗರಿಷ್ಠ ಪ್ರಮಾಣದ ಪ್ರಯತ್ನ ನಡೆಸುವ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚುನಾವಣಾ ತಂತ್ರಗಾರಿಕೆಯ ಮೊದಲ ಹೆಜ್ಜೆಯಾಗಿ ಸದ್ಯವೇ ಸಚಿವ ಸಂಪುಟದ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ. ಈ ಸಂಬಂಧ ವರಿಷ್ಠರ ಮಟ್ಟದಲ್ಲಿ ಚರ್ಚೆಯೂ ನಡೆದಿದೆ.

ಇದಲ್ಲದೇ ರಾಜ್ಯದಲ್ಲಿ ಅಭಿವೃದ್ಧಿಪರ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲದೇ, ಗೃಹ ಸಚಿವ ಅಮಿತ್‌ ಶಾ ಅವರು ವಾರಕ್ಕೊಮ್ಮೆ ಭೇಟಿ ನೀಡಲಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಗರಿಷ್ಠ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ಹಲವು ಕೇಂದ್ರ ಸಚಿವರಿಗೆ ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿ ಉಸ್ತುವಾರಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

‘ಟಿಕೆಟ್‌ ಹಂಚಿಕೆಯ ವೇಳೆಯಲ್ಲಿ ಯಾವುದೇ ಹಿರಿಯರಿಗೆ ಟಿಕೆಟ್‌ ನೀಡದೇ ಇದ್ದಾಗ, ಅದರಿಂದ ಬೇಸರಗೊಂಡರೆ ಅವರನ್ನು ಸಮಾಧಾನಪಡಿಸಬೇಕು. ಬಂಡಾಯವೆದ್ದು ಪಕ್ಷ ಬಿಡಲು ಮುಂದಾದರೆ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ನೋಡಿಕೊಳ್ಳ
ಬೇಕು ಎಂದು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ವರಿಷ್ಠರು ಸೂಚಿಸಿದ್ದಾರೆ’ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ತಿಳಿಸಿದರು.

‘ಹಿಮಾಚಲ ಪ್ರದೇಶದಲ್ಲಿ ಬಂಡಾಯ ಎದ್ದವರನ್ನು ಸಮಾಧಾನಪಡಿಸದೇ ನಿರ್ಲಕ್ಷ್ಯ ಮಾಡಿದ್ದರಿಂದ ಅಲ್ಲಿ ಪಕ್ಷ ಸೋತಿತು. ಆ ಲೋಪ ಕರ್ನಾಟಕದಲ್ಲಿ ಮರುಕಳಿಸದಂತೆ ಎಚ್ಚರವಹಿಸಬೇಕು. ಆ ಚುನಾವಣೆ ನಮಗೆ ಪಾಠ ಆಗಬೇಕು ಎಂದು ವರಿಷ್ಠರು ಹೇಳಿದರು. ಅಲ್ಲಿ ಸುಮಾರು 13 ಮಂದಿ ಟಿಕೆಟ್‌ ಸಿಗದ ಕಾರಣಕ್ಕೆ ಬಂಡಾಯವೆದ್ದಿದ್ದರು. ಅವರಲ್ಲಿ ಕೆಲವರು ಕಾಂಗ್ರೆಸ್‌ನಿಂದ ಮತ್ತೆ ಕೆಲವರು ಸ್ವತಂತ್ರವಾಗಿ ಸ್ಪರ್ಧಿಸಿದರು. ಒಟ್ಟಾರೆ ಇದರಿಂದ ಬಿಜೆಪಿಗೆ ಆರರಿಂದ ಏಳು ಕಡೆಗಳಲ್ಲಿ ಸೋಲುಂಟಾಯಿತು’ ಎಂದು ಹೇಳಿದರು.

‘ಪಕ್ಷದಲ್ಲಿ ಸಂಘಟನಾತ್ಮಕವಾಗಿಯೂ ಕೆಲವು ಬದಲಾವಣೆ ಆಗುವ ಸಾಧ್ಯತೆ ಇದೆ. ಅದು ಯಾವ ಸ್ವರೂಪದ್ದು ಎಂಬುದನ್ನು ವರಿಷ್ಠರು ತೀರ್ಮಾನಿಸಲಿದ್ದಾರೆ’ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇದೇ 15 ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಅವರು ವರ್ಚುವಲ್‌ ಆಗಿ ಕೊಪ್ಪಳ, ವಿಜಯಪುರ, ರಾಯಚೂರು, ಬಳ್ಳಾರಿ, ಬೀದರ್‌, ಬಾಗಲಕೋಟೆ, ಚಾಮರಾಜನಗರ, ಕೋಲಾರ, ಹಾವೇರಿ ಮತ್ತು ಗದಗಗಳಲ್ಲಿ ನಿರ್ಮಾಣ ಮಾಡಿರುವ ಪಕ್ಷದ ನೂತನ ಕಚೇರಿ ಕಟ್ಟಡಗಳನ್ನು ಉದ್ಘಾಟಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT