ಶುಕ್ರವಾರ, ಮಾರ್ಚ್ 31, 2023
33 °C

ರೇವಣ್ಣ ತನ್ನ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿದ್ದಾರೆ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜಕೀಯ ಮುಖಂಡರ ನಡುವೆ ಕೆಸರೆರೆಚಾಟ ಜೋರಾಗಿದೆ. 

ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುತ್ತಿದ್ದೆ ಎಂದು ಆರೋಪಿಸಿರುವ ಬಿಜೆಪಿ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದೆ. 

‘ರಾಜ್ಯದಲ್ಲಿ ಕಾಂಗ್ರೆಸ್‌ನದ್ದು ಬೇರೆ ಬೇರೆ ಮನೆಗಳ ಅಪಾರ್ಟ್‌ಮೆಂಟ್‌, ಆದರೆ ಜೆಡಿಎಸ್‌ನದ್ದು ಕೌಟುಂಬಿಕ ವಠಾರ. ವಠಾರದೊಳಗೆ ಬಂದು ಹೋಗುವುದಕ್ಕೆ ಕಾರ್ಯಕರ್ತರಿಗೆ ಅವಕಾಶವಿದ್ದರೂ ಅಲ್ಲಿಯೇ ಕಾಯಂ ಆಗಿ ನೆಲೆ ನಿಲ್ಲಲು ಅವಕಾಶವಿಲ್ಲ. ಇವೆರಡೂ ಪಕ್ಷಗಳಿಗೆ ರಾಜ್ಯಕ್ಕಿಂತ ತಮ್ಮ ಮನೆಗಳ ಚಿಂತೆಯೇ ಹೆಚ್ಚು’ ಎಂದು ಬಿಜೆಪಿ ಲೇವಡಿ ಮಾಡಿದೆ. 

‘ಚುನಾವಣೆ ಎಂದರೆ ಜೆಡಿಎಸ್‌ಗೆ ಕುಟುಂಬದ ತೆನೆಯ ಹೊರೆಯೇ ಹೆಚ್ಚು. ಮೊದಲು ಅಪ್ಪ-ಮಕ್ಕಳ ಪಕ್ಷವಾಗಿತ್ತು. ನಂತರ ಅಣ್ಣ ತಮ್ಮನ ಪಕ್ಷವಾಯಿತು. ಈಗ ಓರಗಿತ್ತಿಯರ ಪಕ್ಷವಾಗುತ್ತಿದೆ. ಪಕ್ಷ ಮಾತ್ರವಲ್ಲ, ಕುಟುಂಬವನ್ನೂ ಮೀರಿ ಭವಾನಿ ರೇವಣ್ಣ ತಮಗೆ ತಾವೇ ಟಿಕೆಟ್‌ ಘೋಷಿಸಿ ದಾಖಲೆ ಮಾಡಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

‘ಹಿಂದೆ ರಾಜಮಹಾರಾಜರ ಕಾಲದಲ್ಲಿ ರಾಜಕೀಯಕ್ಕಾಗಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಆಧುನಿಕ ಭಾರತದಲ್ಲಿ ಅಂಥದ್ದೇ ರಾಜಕಲಹವನ್ನು ಜೆಡಿಎಸ್ ಪರಿಚಯಿಸುತ್ತಿದೆ. ಆ ರಾಜ-ರಾಣಿಯರಿಗೂ ಅಧಿಕಾರದ್ದೇ ಚಿಂತೆ, ಇಲ್ಲಿಯೂ ಅಧಿಕಾರಕ್ಕಾಗಿ ಕುಟುಂಬದಲ್ಲಿ ಬಡಿದಾಟ. ಕಾಲಚಕ್ರ ಪರಿಪೂರ್ಣ ವೃತ್ತ ಮುಗಿಸಿದೆ’ ಎಂದು ಬಿಜೆಪಿ ಕಾಲೆಳೆದಿದೆ. 

‘ಎಲ್ಲದಕ್ಕೂ ದೇವೇಗೌಡರಿದ್ದಾರೆ ಎನ್ನುತ್ತಾ ಗೌಡರನ್ನು ಉತ್ಸವ ಮೂರ್ತಿಯಾಗಿಟ್ಟುಕೊಂಡು ಜೆಡಿಎಸ್‌ ಕುಟುಂಬ ರಾಜಕಾರಣ ಮಾಡುತ್ತಿದೆ.  ಎಚ್‌.ಡಿ.ಕುಮಾರಸ್ವಾಮಿಯ ಬುದ್ಧಿವಂತಿಕೆಯ ಹೇಳಿಕೆಯ ಮೇಲೆ ಸೂರಜ್‌ ರೇವಣ್ಣ ಹೊರಹಾಕಿದ ಪ್ರಜ್ವಲದ ಬೆಂಕಿ ಬಿದ್ದಿದೆ. ಎಲ್ಲದಕ್ಕೂ ಪಾಪ ದೇವೇಗೌಡರು ಮೂಕ ಸಾಕ್ಷಿಯಾಗಬೇಕಿದೆ’ ಎಂದು ಬಿಜೆಪಿ ಛೇಡಿಸಿದೆ.

‘ಮೊದಲಿಗೆ ಎಲ್ಲರ ಮಾತನ್ನೂ ಕೇಳುವಂತೆ ನಾಟಕವಾಡಿ ಯಾರ ಮಾತನ್ನೂ ಕೇಳದಿರುವುದಕ್ಕೆ ಕುಮಾರಸ್ವಾಮಿ ಹೆಸರುವಾಸಿ. ಎಚ್‌.ಡಿ.ರೇವಣ್ಣ ಪಾಪ ಮಾತನಾಡಿ ಕೆಡುತ್ತಿದ್ದರು. ಆದರೆ, ಈಗ ಅವರೂ ರಾಜಕೀಯವಾಗಿ ಚತುರರಾಗಿದ್ದಾರೆ. ತಮ್ಮ ಮಾತುಗಳನ್ನು ಹೆಂಡತಿ-ಮಕ್ಕಳ ಬಾಯಲ್ಲಿ ಹೇಳಿಸಿ ಯಶಸ್ವಿಯಾಗಿದ್ದಾರೆ’ ಎಂದು ಬಿಜೆಪಿ ಕಿಡಿಕಾರಿದೆ. 

‘ಕುಮಾರಸ್ವಾಮಿಯದ್ದು ಅಲ್ಪ ಸ್ವಲ್ಪ ಸೀಟು ಗೆದ್ದು ಸಿಎಂ ಆಗುವ ಹಗಲುಗನಸು. ಕಾಂಗ್ರೆಸ್ ಹೇಗಿದ್ದರೂ 80 ಸ್ಥಾನಗಳ ಗಡಿಯೂ ತಲುಪುವುದಿಲ್ಲ’ ಎಂದು ಬಿಜೆಪಿ ಭವಿಷ್ಯ ನುಡಿದಿದೆ. 

ಓದಿ... ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ, ಸೂಕ್ತ ಅಭ್ಯರ್ಥಿ: ಸೂರಜ್ ರೇವಣ್ಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು