ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾಸೆಗೆ ಜಿಗಿ ನೆಗೆದಾಟ: ಶಾಸಕರು, ಸಚಿವರ ಪಕ್ಷಾಂತರ ‘ಪರ್ವ’ಕ್ಕೆ ವೇಗ

ಬಿಜೆಪಿ ಬಿಟ್ಟು ‘ಕೈ’ ಹಿಡಿದ ಪುಟ್ಟಣ್ಣ
Last Updated 9 ಮಾರ್ಚ್ 2023, 19:58 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುವುದಕ್ಕೂ ಮುನ್ನವೇ ಸೋಲು– ಗೆಲುವಿನ ಲೆಕ್ಕಾಚಾರದಲ್ಲಿರುವ ಸಚಿವರು ಮತ್ತು ಶಾಸಕರು ಅನುಕೂಲಕಾರಿ ಪಕ್ಷಗಳತ್ತ ಜಿಗಿ–ನೆಗೆದಾಟ ಆರಂಭಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಜಿಗಿತದ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ ಅವರು ಪರಿಷತ್‌ ಸದಸ್ಯತ್ವ ಮತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಗುರುವಾರ ಕಾಂಗ್ರೆಸ್‌ಗೆ ಸೇರಿದರು. ಇವರು ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲೇ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ.

ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ರೇಷ್ಮೆ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇಲ್ಲದ ಕಾರಣ ಕಾಂಗ್ರೆಸ್‌ಗೆ ಜಿಗಿಯಲು ತಯಾರಿ ನಡೆಸಿರುವ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆಯನ್ನೂ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು– ಮೈಸೂರು ದಶಪಥ ರಸ್ತೆ ಉದ್ಘಾಟಿಸಿದ ಬಳಿಕ ನಾರಾಯಣಗೌಡ ಬಿಜೆಪಿಗೆ ವಿದಾಯ ಹೇಳಿ, ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇವರು 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಸೋತಿದ್ದರು. 2013, 2018ರಲ್ಲಿ ಜೆಡಿಎಸ್‌ನಿಂದ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು, ಬಿಜೆಪಿ ಸರ್ಕಾರದಲ್ಲಿ ಸಚಿವರಾದರು.

ಗೊಂದಲದಲ್ಲಿ ಸೋಮಣ್ಣ: ವಸತಿ ಸಚಿವ ವಿ.ಸೋಮಣ್ಣ ಈಗ ಅಡಕತ್ತರಿಗೆ ಸಿಲುಕಿದಂತಾಗಿದ್ದಾರೆ. ಕಾಂಗ್ರೆಸ್ ಸೇರಲು ಬಯಸಿದ್ದ ಅವರು ಗೋವಿಂದರಾಜ ನಗರ ಅಥವಾ ಗುಂಡ್ಲುಪೇಟೆ ಕ್ಷೇತ್ರದ ಟಿಕೆಟ್‌ ಬಯಸಿದ್ದರು. ಆದರೆ, ಎರಡರಲ್ಲೂ ಗೆಲ್ಲಬಲ್ಲ ಅಭ್ಯರ್ಥಿಗಳು ಇರುವುದರಿಂದ ಆ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್‌ ತಯಾರಿಲ್ಲ. ಇತ್ತ ಬಿಜೆಪಿಯಲ್ಲಿ ಅವರು ಗೋವಿಂದರಾಜ ನಗರ ಕ್ಷೇತ್ರ ತಮಗೂ ಮತ್ತು ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಟಿಕೆಟ್‌ ತಮ್ಮ ಪುತ್ರ ಅರುಣ್‌ಗೆ ನೀಡಬೇಕು ಎಂದು ಒತ್ತಡ ಹೇರಿದ್ದಾರೆ. ಆದರೆ, ಸೋಮಣ್ಣ ಅವರ ಪುತ್ರನಿಗೆ ಹನೂರು ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ಸಿದ್ಧವಿಲ್ಲ. ಹೀಗಾಗಿ ಮುಂದೇನು ಮಾಡಬೇಕು ಎಂಬ ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಲವು ಹೊಂದಿದ್ದರೆ, ಸಿದ್ದರಾಮಯ್ಯ ಅವರು ಒಲವು ತೋರಿಸಿಲ್ಲ. ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ನಾಯಕರು ಸೋಮಣ್ಣ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕೂಡ್ಲಿಗಿ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಅವರು ಕಾಂಗ್ರೆಸ್‌ ಸೇರುವ ಸಾಧ್ಯತೆ
ದಟ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು.

ಜೆಡಿಎಸ್‌ನಲ್ಲಿ ಎಚ್‌.ಡಿ.ದೇವೇಗೌಡರ ಕುಟುಂಬದ ಬಗ್ಗೆ ಮುನಿಸಿಕೊಂಡಿರುವ ಹಲವು ಶಾಸಕರಲ್ಲಿ ಕೆಲವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಈಗಾಗಲೇ ತಾವು ಕಾಂಗ್ರೆಸ್‌ ಸೇರುವುದಾಗಿ ಘೋಷಿಸಿದ್ದು, ತಮ್ಮ ಕ್ಷೇತ್ರದ ಕಾರ್ಯಕ್ರಮವೊಂದಕ್ಕೆ ಸಿದ್ದರಾಮಯ್ಯ ಅವರನ್ನು ಕರೆಸಿಕೊಂಡು, ಅವರಿಂದಲೇ ಕಾಂಗ್ರೆಸ್‌ನ ಮುಂದಿನ ಅಭ್ಯರ್ಥಿ ಎಂದೂ ಹೇಳಿಸಿಕೊಂಡಿದ್ದಾರೆ. ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್‌ ಸೇರಲಿದ್ದಾರೆ. ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಕೂಡ ಜೆಡಿಎಸ್‌ ತೊರೆಯಲಿದ್ದು, ಕಾಂಗ್ರೆಸ್‌ ಅಥವಾ ಬಿಜೆಪಿ ಸೇರಲಿದ್ದಾರೆ.

ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರು ಎಚ್.ಡಿ.ಕುಮಾರಸ್ವಾಮಿ ಜತೆ ಮುನಿಸಿಕೊಂಡಿದ್ದು, ಪಕ್ಷವನ್ನು ತೊರೆಯುವುದಾಗಿ ಹಲವು ಬಾರಿ ಹೇಳಿದ್ದಾರೆ. ಚುನಾವಣಾ ದಿನಾಂಕ ಘೋಷಣೆ ಆದ ಬಳಿಕ ಅವರು ಬಹುತೇಕ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಬಿಜೆಪಿಯ ಬಗ್ಗೆ ತೆರೆದ ಮನಸ್ಸು ಹೊಂದಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರರಾಗಿ ಆಯ್ಕೆಯಾಗಿದ್ದ ಎಚ್‌.ನಾಗೇಶ್ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಆ ಪಕ್ಷಕ್ಕೆ ಬೆಂಬಲ ನೀಡಿ ಅಲ್ಪಕಾಲ ಸಚಿವರಾಗಿದ್ದರು. ಮಹದೇವಪುರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಅವರು ಕಾಂಗ್ರೆಸ್‌ ಕದ ತಟ್ಟಿದ್ದಾರೆ.

ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಆಮ್‌ ಆದ್ಮಿ ಪಕ್ಷ ತೊರೆದು ಬಿಜೆಪಿ ಸೇರಿದ್ದಾರೆ.

‘ಎಲ್ಲ ಶಾಸಕರಿಗೂ ಟಿಕೆಟ್ ಖಾತರಿ ಇಲ್ಲ’
‘ನೂರಕ್ಕೆ ನೂರರಷ್ಟು ಎಲ್ಲ ಶಾಸಕರಿಗೂ ಟಿಕೆಟ್ ಸಿಗುತ್ತದೆ ಅಂತ ಹೇಳಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಒಂದು ಚುನಾವಣೆಗಿಂತ ಇನ್ನೊಂದು ಚುನಾವಣೆ ಭಿನ್ನವಾಗಿರುವುದರಿಂದ ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್‌ ಕೊಟ್ಟ ಉದಾಹರಣೆಗಳಿಲ್ಲ. ಸಮೀಕ್ಷೆ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್‌ ನೀಡಲಾಗುತ್ತದೆ. ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚೆ ನಡೆಯುತ್ತದೆ’ ಎಂದರು.

ಬಿಜೆಪಿಯ ಹಾಲಿ ಕೆಲವು ಶಾಸಕರಿಗೆ ಟಿಕೆಟ್ ತಪ್ಪಲಿದೆ ಎಂದು ಬಿ.ಎಸ್‌. ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ‘ಯಡಿಯೂರಪ್ಪ ಸಂಸದೀಯ ಮಂಡಳಿ ಸದಸ್ಯರು, ಅವರಿಗೆ ಮಾಹಿತಿ ಇರಬಹುದು. 70 ವಯಸ್ಸು ದಾಟಿದವರಿಗೆ ಟಿಕೆಟ್‌ ನೀಡಬೇಕೇ ಅಥವಾ ಬೇಡವೇ ಎನ್ನುವ ವಿಚಾರ ನಮ್ಮ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಸುಮಲತಾ ಚಿತ್ತ ಕಮಲದತ್ತ ?
ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ ಸುಮಲತಾ ಅಂಬರೀಷ್ ಅವರು ಬಿಜೆಪಿ ಸೇರುವ ಸಾಧ್ಯತೆ ಇದ್ದು, ಈ ಕುರಿತು ಅವರು ಮಂಡ್ಯದಲ್ಲಿ ಶುಕ್ರವಾರ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಪ್ರಕಟಿಸಲಿದ್ದಾರೆ. ಅವರು ವಿಧಾನಸಭೆಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT