ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು ವಿಧಾನಸಭೆ ಕ್ಷೇತ್ರ: ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಕಿತ್ತಾಟ

Last Updated 9 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮಾಲೂರು (ಕೋಲಾರ ಜಿಲ್ಲೆ): ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಾದ ಕೆ.ಎಸ್‌. ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಬೆಂಬಲಿಗರ ನಡುವೆ ಗುರುವಾರ ಕಿತ್ತಾಟ ನಡೆದಿದೆ.

ಮಾರ್ಚ್‌ 12ರಂದು ಇಲ್ಲಿ ನಡೆಯಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆ ನಡೆಸಲು ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯು ಗಲಾಟೆ, ಗದ್ದಲ ಗೂಡಾಯಿತು.

‌ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್‌ ಭಾಷಣ ಆರಂಭಿಸುತ್ತಿದ್ದಂತೆ ಹೂಡಿ ವಿಜಯಕುಮಾರ್‌ ಬೆಂಬಲಿಗ ಕೂರಿ ಮಂಜು ಎಂಬುವರು ಗಲಾಟೆ ಆರಂಭಿಸಿದರು. ಇದಕ್ಕೆ ಮಾಜಿ ಶಾಸಕ ಕೆ.ಎಸ್‌. ಮಂಜುನಾಥ್ ಗೌಡ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಿತ್ತಾಟ ನಡೆಯಿತು. ಪುರಸಭೆ ಸದಸ್ಯ ಭಾನುತೇಜ ಮತ್ತು ಕೆವಿಎಸ್ ಮಂಜು ಕೈಕೈ ಮಿಲಾಯಿಸಿದರು.

ಈ ವೇಳೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಭೆ ಮುಂದುವರಿಸಲು ಅನುವು ಮಾಡಿಕೊಟ್ಟರು.

‘ಗುಂಪುಗಾರಿಕೆ ಬಿಟ್ಟು ಪಕ್ಷ ಸಂಘಟಿಸಲು ಒತ್ತು ಕೊಡಬೇಕು. ಎಷ್ಟೇ ಪ್ರಭಾವಶಾಲಿಗಳಾದರೂ ಸರಿ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ದಿಟ್ಟಕ್ರಮ ತೆಗೆದುಕೊಳ್ಳಲಾಗುವುದು’ ಎಂದು ವೇಣುಗೋಪಾಲ್‌ ಎಚ್ಚರಿಕೆ ನೀಡಿದರು.

ಕ್ಷೇತ್ರದ ಟಿಕೆಟ್‌ಗಾಗಿ ಮಂಜುನಾಥ್‌ ಗೌಡ ಹಾಗೂ ಹೂಡಿ ವಿಜಯಕುಮಾರ್‌ ಕಸರತ್ತು ನಡೆಸುತ್ತಿದ್ದು, ಬಹಳ ದಿನಗಳಿಂದಲೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇಬ್ಬರೂ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಹಿಂದೆ ಜೆಡಿಎಸ್‌ನಿಂದ ಶಾಸಕರಾಗಿದ್ದ ಮಂಜುನಾಥ್‌ ಗೌಡ ಕಳೆದ ವರ್ಷ ಬಿಜೆಪಿ ಸೇರಿದ್ದರು.

ಕಾರ್ಯಕ್ರಮದಲ್ಲಿದ್ದ ಮಂಜುನಾಥ್ ಗೌಡ, ಹೂಡಿ ವಿಜಯಕುಮಾರ್‌ ಗಲಾಟೆ ಸಂಬಂಧ ಪ್ರತಿಕ್ರಿಯೆ ನೀಡಿಲ್ಲ. ದೂರವಾಣಿ ಕರೆಯನ್ನೂ ಸ್ವೀಕರಿಸಲಿಲ್ಲ.

ಐಸಿಯುನಲ್ಲಿ ಕಾಂಗ್ರೆಸ್: ಜಗದೀಶ ಶೆಟ್ಟರ್
ಹುಣಸಗಿ (ಯಾದಗಿರಿ): ‘ರಾಜ್ಯದಲ್ಲಿ ಕಾಂಗ್ರೆಸ್ ಐಸಿಯುನಲ್ಲಿದ್ದು, ಉಸಿರಾಡುತ್ತಿದೆ. ಅದು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ’ ಎಂದು ಶಾಸಕ ಜಗದೀಶ ಶೆಟ್ಟರ್ ತಿಳಿಸಿದರು.

ಹುಣಸಗಿ ಪಟ್ಟಣದಲ್ಲಿ ಗುರುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಕೋವಿಡ್‌ ಸಂಕಷ್ಟದಿಂದ ವಿಶ್ವದ ಹಲವು ದೇಶಗಳು ತತ್ತರಿಸಿವೆ. ಆರ್ಥಿಕ ಸಂಕಷ್ಟದಲ್ಲಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಹಾಗೂ ಆರೋಗ್ಯ ಕಾಳಜಿಯಿಂದ ವಿಶ್ವವೇ ಭಾರತದತ್ತ ನೋಡುತ್ತಿದೆ’ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ‘ನಮ್ಮದು ಜಾತಿ ಮಾಡುವ ಪಕ್ಷವಲ್ಲ. ಬಡವರಿಗೆ ಬಲ ಕೊಡುವ ಪಕ್ಷ. ಎಲ್ಲರ ವಿಕಾಸವನ್ನು ಬಯಸುವ ಪಕ್ಷ, ಮತ್ತೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ’ ಎಂದರು.

ಸೋಮಣ್ಣ ಇದ್ದರಷ್ಟೇ ಪಕ್ಷಕ್ಕೆ ಅಧಿಕಾರ...
ಮೈಸೂರು:
‘ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲೇಬೇಕು. ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ನೀಡಬೇಕು. ಇಲ್ಲದಿದ್ದರೆ ಅವರು ಎಲ್ಲಿರುತ್ತಾರೋ ನಾವೂ ಅಲ್ಲೇ ಇರುತ್ತೇವೆ’ ಎಂದು ಬೆಂಬಲಿಗರು ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಬೆಂಬಲಿಗರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ‘ಲಕ್ಷಾಂತರ ಜನರನ್ನು ಸೇರಿಸುವ ಸಾಮರ್ಥ್ಯ ನಮ್ಮ ನಾಯಕರಿಗಿದೆ. ಆದರೆ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಇದೆಯೇ? ಸೋಮಣ್ಣ ಅವರನ್ನು ನಿರ್ಲಕ್ಷ್ಯ ಮಾಡಿದರೆ ಅಭಿಮಾನಿಗಳು ಸುಮ್ಮನಿರುವುದಿಲ್ಲ. ಪಾಠ ಕಲಿಸುತ್ತೇವೆ. ಬಿಜೆಪಿ ಅಳಿವು– ಉಳಿವಿನ ಪ್ರಶ್ನೆಯಿದು’ ಎಂದು ಎಚ್ಚರಿಸಿದರು.

‘ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಂದಿರುವ ಸೋಮಣ್ಣ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕನಿಷ್ಠ 40 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲುವುದಿಲ್ಲ’ ಎಂದರು. ಸಾವಿರಕ್ಕೂ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT