ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಯಡಿಯೂರಪ್ಪ ಮೇಲೆ ವಿಶ್ವಾಸವಿಟ್ಟು ಬಿಜೆಪಿಗೆ ಬಹುಮತ ಕೊಡಿ: ಅಮಿತ್‌ ಶಾ

ಭ್ರಷ್ಟಾಚಾರ ಮುಕ್ತ ಆಡಳಿತ: ಅಮಿತ್ ಶಾ
Last Updated 23 ಫೆಬ್ರುವರಿ 2023, 22:31 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ): ‘ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಒಂದು ಸಲ ವಿಶ್ವಾಸವಿಟ್ಟು ಬಿಜೆಪಿಗೆ ಬಹುಮತ ಕೊಡಿ, ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುತ್ತೇವೆ’ ಎಂದು ಗೃಹ ಸಚಿವ ಅಮಿತ್‌ ಶಾ ಭರವಸೆ ನೀಡಿದರು.

ಇಲ್ಲಿನ ಎಸ್ ಆರ್ ಎಸ್ ಮೈದಾನದಲ್ಲಿ ಗುರುವಾರ ನಡೆದ ‘ಬಿಜೆಪಿ ವಿಜಯ ಸಂಕಲ್ಪ ಯಾತ್ರೆ’ ಯಲ್ಲಿ ಮಾತನಾಡಿದ ಅಮಿತ್‌ ಶಾ, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರುವ ಸಂಕಲ್ಪ ಮಾಡಿ, ನಾವು ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ದಕ್ಷಿಣದ ನಂಬರ್‌ ಒನ್ ರಾಜ್ಯ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚಿಸಲು ಕೆಲವು ಸ್ಥಾನಗಳು ಕಡಿಮೆ ಬಿದ್ದವು. ರಾಜಕೀಯ ಚದುರಂಗದಾಟದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಹೊಂದಾಣಿಕೆ ಏರ್ಪಟ್ಟು, ವ್ಯಾಪಕ ಭ್ರಷ್ಟಾಚಾರ ನಡೆಯಿತು’ ಎಂದು ಶಾ ಆರೋಪಿಸಿದರು.

‘ಜೆಡಿಎಸ್ ಗೆ ನೀವು ಕೊಡುವ ಒಂದೊಂದು ಮತವೂ ಕಾಂಗ್ರೆಸ್‌ಗೆ ಹೋಗಲಿದೆ. ಕಾಂಗ್ರೆಸ್‌ಗೆ ಕೊಡುವ ಪ್ರತಿ ಮತ ಸಿದ್ದರಾಮಯ್ಯನವರ ಎಟಿಎಂ ಸರ್ಕಾರಕ್ಕೆ ಹೋಗಲಿದೆ. ದೆಹಲಿಗೆ (ಸೋನಿಯಾ, ರಾಹುಲ್‌ಗೆ) ಇದು ಎಟಿಎಂ’ ಎಂದು ಗೃಹ ಸಚಿವರು ದೂರಿದರು.

ಮೋದಿ ದೇಶದ ರಕ್ಷಕ: ‘ನರೇಂದ್ರ ಮೋದಿ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಹತ್ತು ವರ್ಷ ಅಧಿಕಾರ ನಡೆಸಿದ ಯುಪಿಎ ಅವಧಿಯಲ್ಲಿ ಗಡಿಯಲ್ಲಿ ನಮ್ಮ ಮೇಲೆ ಅನೇಕ ದಾಳಿ ನಡೆದರೂ ಪಾಕಿಸ್ತಾನಕ್ಕೆ ಬುದ್ಧಿಕಲಿಸಲು ಆಗಲಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಉರಿ ಮತ್ತು ಪುಲ್ವಾಮದ ಮೇಲೆ ದಾಳಿ ನಡೆದ ಹತ್ತೇ ದಿನದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ನೆರೆಯ ಶತ್ರು ರಾಷ್ಟ್ರಕ್ಕೆ ತಕ್ಕ ಪಾಠ ಕಲಿಸಲಾಯಿತು’ ಎಂದು ಅಮಿತ್‌ ಶಾ ಹೇಳಿದರು.

‘ಕಾಶ್ಮೀರದಲ್ಲಿ 370ನೇ ವಿಧಿ ರದ್ದು‍ಪಡಿಸುವುದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಮೋದಿಜೀ 370ನೇ ವಿಧಿ ರದ್ದುಪಡಿಸಿ ಕಾಶ್ಮೀರವನ್ನು ಭಾರತದಲ್ಲಿ ಜೋಡಿಸುವ ಕೆಲಸ ಮಾಡಿದರು. ಆದರೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತುಕಡೆ ತುಕಡೆ ಗ್ಯಾಂಗ್ ಕಟ್ಟಿಕೊಂಡು ದೇಶ ಒಡೆಯುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT