ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನೈತಿಕ 6 ಸಚಿವರ ಉತ್ತರ ಬೇಕಿಲ್ಲ: ಉಭಯ ಸದನಗಳಲ್ಲಿ ಕಾಂಗ್ರೆಸ್‌ ತಕರಾರು

‘ಕೈ’ಪಟ್ಟು: ಸರ್ಕಾರಕ್ಕೆ ಇಕ್ಕಟ್ಟು
Last Updated 10 ಮಾರ್ಚ್ 2021, 3:02 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ, ವಿಡಿಯೊ ಪ್ರಕಟಿಸಬಾರದು’ ಎಂದು ಕೋರಿ ಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ ಪಡೆದಿರುವ ಆರು ಸಚಿವರು ಹಾಗೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವ ಕಾಂಗ್ರೆಸ್‌ ನಾಯಕರು, ‘ಅನೈತಿಕ ಸಚಿವರ ಉತ್ತರ ಬೇಕಿಲ್ಲ’ ಎಂಬ ಘೋಷಣೆ ಮುಂದಿಟ್ಟು ವಿಧಾನಮಂಡಲದ ಉಭಯ ಸದನಗಳಲ್ಲೂ ಹೊಸ ಮಾದರಿಯ ಹೋರಾಟ ನಡೆಸಲು ಮುಂದಾಗಿದ್ದಾರೆ.

ಕಾಂಗ್ರೆಸ್‌ನ ಈ ಹೊಸ ಆಟ, ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ದೂಡುವ ಸಾಧ್ಯತೆ ಇದ್ದು, ಸದನವನ್ನು ಹೇಗೆ ನಡೆಸುವುದೆಂಬ ಸಂಕಟವೂ ಶುರುವಾಗಿದೆ.

‘ಲೈಂಗಿಕ ದೃಶ್ಯಗಳಿರುವ ಸಿ.ಡಿ ಪ್ರಸ್ತಾಪಿಸಲು ಹಾಗೂ ಆರು ಸಚಿವರನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಸೋಮವಾರ ಸಂಜೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಚಿವರು ಉತ್ತರ ನೀಡಲು ಮುಂದಾದಾಗ, ‘ಅನೈತಿಕ ಸಚಿವರ ಉತ್ತರ ಬೇಕಿಲ್ಲ’ ಎಂದು ಪ್ರತಿಪಾದಿಸಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ತಂತ್ರ ಹೆಣೆಯಲಾಗಿದೆ’ ಎಂದು ಮೂಲಗಳು ಹೇಳಿವೆ.

ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಈ ಪ್ರಯೋಗವನ್ನು ಕಾಂಗ್ರೆಸ್ ಶಾಸಕರು ಮಂಗಳವಾರ ಮಾಡಿದರು. ಕೋರ್ಟ್‌ ಮೊರೆ ಹೋಗಿರುವ ಸಚಿವರಾದ ಕೆ.ಸಿ. ನಾರಾಯಣಗೌಡ, ಶಿವರಾಂ ಹೆಬ್ಬಾರ್‌, ಎಸ್.ಟಿ. ಸೋಮಶೇಖರ್‌, ಬೈರತಿ ಬಸವರಾಜ, ಡಾ. ಕೆ. ಸುಧಾಕರ್ ಹಾಗೂ ಬಿ.ಸಿ. ಪಾಟೀಲ ಅವರನ್ನು ಗುರಿ ಮಾಡಿ ಕಾಂಗ್ರೆಸ್ ನಡೆ ಇಟ್ಟಿದೆ. ಪ್ರಶ್ನೋತ್ತರ ವೇಳೆಯಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಕೊಡುವಾಗ ನಿರಾಕರಿಸಿ, ಸಚಿವರನ್ನು ಮುಜುಗರಕ್ಕೆ ದೂಡುವುದು ಕಾಂಗ್ರೆಸ್ ತಂತ್ರದ ಭಾಗ.

‘ಇಲಾಖೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಬುಧವಾರ ಈ ಸಚಿವರ ಪೈಕಿ ಬಹುತೇಕರು ಉತ್ತರ ನೀಡಲಿದ್ದು, ಆ ವೇಳೆ ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದು ಕಾಂಗ್ರೆಸ್ ಉದ್ದೇಶ’ ಎಂದು ಶಾಸಕರೊಬ್ಬರು ತಿಳಿಸಿದರು.

‘ಚಾಮರಾಜನಗರ ಜಿಲ್ಲೆಯ ಶಾಸಕರಿಗೆ ಪ್ರದೇಶಾಭಿವೃದ್ಧಿ ನಿಧಿಯಿಂದ ಎಷ್ಟು ಅನುದಾನ ನೀಡಲಾಗಿದೆ’ ಎಂದು ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿ ಪ್ರಶ್ನೆ ಕೇಳಿದ್ದರು. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಕೆ.ಸಿ. ನಾರಾಯಣಗೌಡ ಉತ್ತರ ಕೊಡಲು ಮುಂದಾದರು. ಆಗ, ‘ಅನೈತಿಕ ಸಚಿವರಿಂದ ಉತ್ತರ ಬೇಕಿಲ್ಲ’ ಎಂದು ಶೆಟ್ಟಿ ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಸಚಿವ ಗೋವಿಂದ ಕಾರಜೋಳ, ‘ಅನೈತಿಕ ಎಂಬ ಪದ ಬಳಸಿದ್ದು ಸರಿಯಲ್ಲ. ವಾಪಸ್ ಪಡೆಯಿರಿ’ ಎಂದರು. ‘ಲಿಖಿತ ಉತ್ತರ ನಿಮಗೆ ಕಳುಹಿಸಿದ್ದಾರೆ. ನೀವು ಬೇಕಿದ್ದರೆ ಪಡೆಯಿರಿ. ಹೀಗೆ ಹೇಳುವುದು ಸರಿಯಲ್ಲ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

‘ತಮ್ಮ ವಿರುದ್ಧದ ಯಾವುದೇ ವಿಡಿಯೊ, ಮಾನಹಾನಿಕರ ಸುದ್ದಿ ಪ್ರಕಟಿಸಬಾರದು ಎಂದು ಕೋರ್ಟ್‌ಗೆ ಹೋಗಿದ್ದು ನೀವಲ್ಲವೇ? ನಿಮ್ಮದು ಏನಾದರೂ ಇರಬೇಕಲ್ಲ. ಅನೈತಿಕ ಅಲ್ಲದೇ ಇನ್ನೇನು’ ಎಂದು ಪುಟ್ಟರಂಗ ಶೆಟ್ಟಿ ಪ್ರಶ್ನಿಸಿದರು.

ಆ ವೇಳೆ ನಾರಾಯಣಗೌಡ, ‘ನಾನು ಯಾರ ಆಸ್ತಿ ಹೊಡೆದಿಲ್ಲ. ಯಾವುದೇ ತಪ್ಪು ಮಾಡಿಲ್ಲ. ನನ್ನ ನೈತಿಕತೆ ಬಗ್ಗೆ ಪ್ರಶ್ನಿಸಲು ನಿಮಗೇನು ಅಧಿಕಾರವಿದೆ. ವಾಪಸ್ ತೆಗೆದುಕೊಳ್ಳಿ; ಇಲ್ಲ ಕ್ಷಮೆಯಾಚಿಸಿ. ಆ ಪದವನ್ನು ಕಡತದಿಂದ ತೆಗೆದು ಹಾಕಬೇಕು’ ಎಂದು ಪಟ್ಟು ಹಿಡಿದರು. ಇದಕ್ಕೆ ಸಚಿವರಾದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್‌ ದನಿಗೂಡಿಸಿದರು.

‘ನೀವು ತಪ್ಪು ಮಾಡಿಲ್ಲವೆಂದರೆ ಕೋರ್ಟ್‌ಗೆ ಹೋಗಿದ್ದೇಕೆ? ಅಷ್ಟಕ್ಕೂ ಪುಟ್ಟರಂಗ ಶೆಟ್ಟಿಯವರು ಅಸಂಸದೀಯ ಪದ ಬಳಸಿಲ್ಲವಲ್ಲ’ ಎಂದು ಕಾಂಗ್ರೆಸ್‌ನ ಪಿ.ಟಿ. ಪರಮೇಶ್ವರ ನಾಯ್ಕ್ ಕುಟುಕಿದರು.

ಮಧ್ಯಪ್ರವೇಶಿಸಿದ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ, ‘ನೈತಿಕತೆ ಎಂಬುದು ಇದ್ದರೆ ನೀವು ಇಲ್ಲಿ ಬರುವ ಅಗತ್ಯವೇ ಇರಲಿಲ್ಲ’ ಎಂದು ಪುಟ್ಟರಂಗ ಶೆಟ್ಟಿ (ಪುಟ್ಟರಂಗ ಶೆಟ್ಟರು ಸಚಿವರಾಗಿದ್ದ ವೇಳೆ, ವಿಧಾನಸೌಧದ ಕಚೇರಿಯಲ್ಲೇ ಆಪ್ತ ಸಹಾಯಕ ₹22 ಲಕ್ಷ ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಾಗಿತ್ತು) ಅವರನ್ನು ಉದ್ದೇಶಿಸಿ ಹೇಳಿದರು. ಈ ಮಾತಿನಿಂದ ಶೆಟ್ಟಿ ಸುಮ್ಮನೆ ಕುಳಿತರು.

ಪರಿಷತ್‌ನಲ್ಲೂ ಗದ್ದಲ: ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಸದಸ್ಯರಾದ ಆರ್‌. ಪ್ರಸನ್ನಕುಮಾರ್‌ ಅವರು ನಗರ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡಗಳು ಹಾಗೂ ಬಸವರಾಜ್‌ ಪಾಟೀಲ್‌ ಇಟಗಿ ಅವರು ರಾಯಚೂರು ನಗರದ ಕುಡಿಯುವ ನೀರಿನ ಸಮಸ್ಯೆ ಕುರಿತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರಿಗೆ ಪ್ರಶ್ನೆ ಕೇಳಬೇಕಿತ್ತು. ಇಬ್ಬರೂ ಪ್ರಶ್ನೆ ಕೇಳುವುದನ್ನು ಬಹಿಷ್ಕರಿಸಿರುವುದಾಗಿ ಹೇಳಿದರು.

***
ಎಚ್.ಡಿ. ಕುಮಾರಸ್ವಾಮಿ, ರೇವಣ್ಣ ನನ್ನ ಪರ ಮಾತನಾಡಿದ್ದರು. ಯಡಿಯೂರಪ್ಪನವರು ಧೈರ್ಯ ತುಂಬಿದರು. ಬೆಂಬಲ ನೀಡಿ ನನ್ನ ಮನೋಬಲ ಹೆಚ್ಚಿಸಿದ ಕುಮಾರಸ್ವಾಮಿಗೆ ಕೃತಜ್ಞತೆಗಳು.
-ರಮೇಶ ಜಾರಕಿಹೊಳಿ, ಬಿಜೆಪಿ ಶಾಸಕ

*
ರಮೇಶ ಜಾರಕಿಹೊಳಿ ಪ್ರಕರಣ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಬುಕ್ ಆಫ್ ಲಾ ಪ್ರಕಾರ ತನಿಖೆ ನಡೆಸಲಾಗುವುದು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT