ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಅಸ್ತ್ರಕ್ಕೆ ಸಿದ್ದರಾಮಯ್ಯ ಪ್ರತ್ಯಸ್ತ್ರ: ಕಲಾಪದ ದಿಕ್ಕು ಬದಲಿಸಿದ ಕಡತ

ಸಚಿವರ ತಂತ್ರಕ್ಕೆ ವಿರೋಧ ಪಕ್ಷದ ನಾಯಕ ಗಲಿಬಿಲಿ
Last Updated 23 ಡಿಸೆಂಬರ್ 2021, 20:02 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಮತಾಂತರ ನಿಷೇಧ ಕಾಯ್ದೆ ವಿರುದ್ಧ ಸಮರ ಸಾರಲು ಹುರುಪಿನೊಂದಿಗೆ ವಿಧಾನಸಭೆ ಕಲಾಪಕ್ಕೆ ದಾಂಗುಡಿಯಿಟ್ಟ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಸರ್ಕಾರ ಮುಂದಿಟ್ಟ ಕಡತ, ಗುರುವಾರದ ಚರ್ಚೆಯ ದಿಕ್ಕನ್ನೇ ಬದಲಿಸಿಬಿಟ್ಟಿತು.

‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಮಸೂದೆಯ ಕರಡನ್ನು ಸಿದ್ಧಪಡಿಸಲಾಗಿತ್ತು‘ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ದಾಖಲೆಗಳನ್ನು ಪ್ರದರ್ಶಿಸಿದ್ದರಿಂದ ಸಿದ್ದರಾಮಯ್ಯ ಗಲಿಬಿಲಿಗೆ ಒಳಗಾದರು. ಅದಕ್ಕೆ ಪೂರಕವೆಂಬಂತೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪಣಿ ಬರೆದು ಸಹಿ ಹಾಕಿದ್ದ ದಾಖಲೆಯನ್ನೂ ತೋರಿಸಿದರು. ಇದರಿಂದಾಗಿ ಒಂದುಹಂತದಲ್ಲಿ ಸಿದ್ದರಾಮಯ್ಯ ಕಂಗೆಟ್ಟರು.

ಭೋಜನದ ವಿರಾಮದ ಬಳಿಕ ಹಳೆಯ ಕಡತಗಳ ಜತೆ ಸದನಕ್ಕೆ ಬಂದ ಸಿದ್ದರಾಮಯ್ಯ, ಅದರ ಮೂಲಕವೇ ಸಚಿವರು, ಬಿಜೆಪಿ ಸದಸ್ಯರನ್ನು ಹಿಮ್ಮೆಟ್ಟಿಸಿ, ತಮ್ಮ ಪಕ್ಷ ಮತಾಂತರ ನಿಷೇಧದ ಪರ ಇಲ್ಲ ಎಂದು ಪ್ರತಿಪಾದಿಸಿದರು.

2009ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಆರೆಸ್ಸೆಸ್‌ ಹಿನ್ನೆಲೆಯವರಾದ ಎಂ.ಚಿದಾನಂದಮೂರ್ತಿ, ಕೃ.ನರಹರಿ, ಮೈ.ಚ.ಜಯದೇವ, ಎಸ್.ಆರ್‌.ಲೀಲಾ, ಮತ್ತೂರು ಕೃಷ್ಣಮೂರ್ತಿ ಸೇರಿದಂತೆ ಹಲವರು ಮತಾಂತರ ನಿಷೇಧ ಕಾಯ್ದೆ ತರುವಂತೆ ಮನವಿ ಸಲ್ಲಿಸಿದ್ದರು. ಅಲ್ಲಿನ ಕಾಯ್ದೆಯಲ್ಲಿದ್ದ ಮಧ್ಯಪ್ರದೇಶದ ಹೆಸರನ್ನು ತೆಗೆದು ಕರ್ನಾಟಕದ ಹೆಸರು ಹಾಕಿದರೆ ಸಾಕು ಎಂದೂ ಸಲಹೆ ನೀಡಿದ್ದರು. ನ್ಯಾಯಮೂರ್ತಿ ರಾಮಾ ಜೋಯಿಸ್‌ ಅವರಿಂದ ಪಡೆಯಬಹುದು ಎಂಬುದಾಗಿಯೂ ಸಲಹೆ ನೀಡಿದ್ದರು‘ ಎಂದು ತಿರುಗೇಟು ನೀಡಿದರು.

ಮಸೂದೆ ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ಯಡಿಯೂರಪ್ಪ ಶಿಫಾರಸು ಮಾಡಿದ್ದರು. 2014ರಲ್ಲಿ ಆಯೋಗವು ಮಸೂದೆ ಸಿದ್ಧಪಡಿಸಿಕೊಟ್ಟಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಮಸೂದೆ ವಿವಿಧ ಇಲಾಖೆ ಮೂಲಕ ನನ್ನ ಮುಂದೆ ಬಂದಿತ್ತು. ಸಚಿವ ಸಂಪುಟ ಸಭೆ ಮುಂದೆ ಕಡತ ಮಂಡಿಸಿ ಎಂದು ಟಿಪ್ಪಣಿ ಬರೆದೆ. ನಂತರ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿದ್ದೆ. ಮತಾಂತರ ನಿಷೇಧಕ್ಕೆ ನಾವು ವಿರೋಧ ಇದ್ದುದರಿಂದ ಅದನ್ನು ಸಚಿವ ಸಂಪುಟದ ಮುಂದೆ ತರಲಿಲ್ಲ’ ಎಂದು ಹೇಳಿದರು.

’ನನ್ನ ಕಾಲದಲ್ಲಿ ಮನವಿ ಸ್ವೀಕರಿಸಿದ್ದು ನಿಜ. ಇದರಲ್ಲಿ ಮುಚ್ಚುಮರೆ ಇಲ್ಲ. ಆ ಬಳಿಕ ಹಲವು ಪ್ರಕ್ರಿಯೆಗಳು ನಡೆದಿವೆ. ನಿಮ್ಮ ಕಾಲದಲ್ಲಿ ಮಸೂದೆ ಸಿದ್ಧಪಡಿಸಿದ್ದು ನಿಜವಲ್ಲವೇ‘ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಬೆಳಿಗ್ಗೆ ನಡೆದಿದ್ದು ಏನು?:ಬೆಳಿಗ್ಗೆ 10.15ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಮಸೂದೆ ಯಾಕೆ ತಂದಿದ್ದೇವೆ ಎಂಬ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿವರಿಸಿದರು. ಬಳಿಕ ಸಿದ್ದರಾಮಯ್ಯ ಅವರಿಗೆ ಮಾತನಾಡಲು ಸಭಾಧ್ಯಕ್ಷ ಕಾಗೇರಿ ಅವಕಾಶ ನೀಡಿದರು. ಆಗ ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌, ‘ಕಾನೂನು ಸಚಿವರು ಪೂರಕವಾಗಿ ಕೆಲವು ವಿಷಯಗಳನ್ನು ಸಭೆಯ ಮುಂದಿಡಲಿದ್ದಾರೆ‘ ಎಂದರು.

ಜೆ.ಸಿ.ಮಾಧುಸ್ವಾಮಿ, ‘ಕಾಂಗ್ರೆಸ್‌ ಸರ್ಕಾರವೇ ಮಸೂದೆಯ ಕರಡು ಸಿದ್ಧಪಡಿಸುವಂತೆ ಕರ್ನಾಟಕ ಕಾನೂನು ಆಯೋಗಕ್ಕೆ ಸೂಚಿಸಲಾಗಿತ್ತು. ಈ ಕರಡನ್ನು ಪರಿಶೀಲನೆ ನಡೆಸಿ ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದರು. ಈ ಕರಡಿನಲ್ಲಿದ್ದ ಅಂಶಗಳಿಗೆ ಹೆಚ್ಚುವರಿಯಾಗಿ 2–3 ಅಂಶಗಳನ್ನು ಸೇರಿಸಿ ಈ ಮಸೂದೆ ತಂದಿದ್ದೇವೆ‘ ಎಂದರು.

‘ಕಾನೂನು ಆಯೋಗದವರು ಕರಡು ಸಿದ್ಧಪಡಿಸಿರಬಹುದು. ಈ ಕರಡನ್ನು ಪರಾಮರ್ಶೆ ನಡೆಸಲು ಸೂಚನೆ ನೀಡಿದ್ದೇನೆ ಎಂಬುದಕ್ಕೆ ಎಲ್ಲಿದೆ ದಾಖಲೆ‘ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಭಾಧ್ಯಕ್ಷ ಕಾಗೇರಿ, ‘2016ರ ನವೆಂಬರ್‌ 16ರಂದು ನಡೆಯುವ ಪರಿಶೀಲನಾ ಸಮಿತಿಯ ಸಭೆಯ ಮುಂದೆ ಮಸೂದೆಯ ಕರಡನ್ನು ಸಿದ್ಧಪಡಿಸುವಂತೆ ಆದೇಶ ನೀಡಲಾಗಿತ್ತು. ಬಳಿಕ ಇದಕ್ಕೆ ಜಯಚಂದ್ರ ಸಹಿ ಹಾಕಿದ್ದಾರೆ. ಸಚಿವ ಸಂಪುಟದ ಮುಂದೆ ಮಂಡಿಸುವಂತೆಯೂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ‘ ಎಂದು ದಾಖಲೆಗಳನ್ನು ಓದಿ ಹೇಳಿದರು. ಈ ಮಾತಿನಿಂದ ಸಿದ್ದರಾಮಯ್ಯ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಿಜೆಪಿ ಸದಸ್ಯರು ’ಶೇಮ್‌ ಶೇಮ್‌‘, ‘ಸಿದ್ದರಾಮಯ್ಯ ಹಿಟ್‌ ವಿಕೆಟ್‌‘ ಎಂದು ಘೋಷಣೆ
ಗಳನ್ನು ಕೂಗಿದರು. ‘ನೀವೇನೂ ಸ್ವಾತಂತ್ರ್ಯ ಹೋರಾಟದಲ್ಲಿ ಗೆದ್ದಂತೆ ಯಾಕೆ ಸಂಭ್ರಮಿಸತ್ತೀರಿ‘ ಎಂದು ಸಿದ್ದರಾಮಯ್ಯ ರೇಗಿದರು.

‘ಹೆಚ್ಚು ಚರ್ಚೆ ಬೇಡ’
ಬಿಜೆಪಿಯ ಯಡಿಯೂರಪ್ಪ, ’ಸಿದ್ದರಾಮಯ್ಯ ಕಾಲದಲ್ಲೇ ಮಸೂದೆಯ ಕರಡು ಸಿದ್ಧವಾಗಿದೆ. ಹೀಗಾಗಿ, ಹೆಚ್ಚು ಚರ್ಚೆ ನಡೆಸದೆ ಮಸೂದೆಗೆ ಅಂಗೀಕಾರ ಮಾಡಿ. ನೀವೇ ಮಾಡಿದ ದಾಖಲೆಗಳನ್ನು ಒಪ್ಪಿಲ್ಲ ಎಂದರೆ ನಿಮ್ಮನ್ನು ದೇವರೇ ಕಾಪಾಡಬೇಕು‘ ಎಂದು ಛೇಡಿಸಿದರು.

’ಕಾಂಗ್ರೆಸ್‌ನ ದ್ವಿಮುಖ ನೀತಿಗೆ ಈ ನಡೆ ಸಾಕ್ಷಿ‘ ಎಂದು ಕಂದಾಯ ಸಚಿವ ಆರ್‌.ಅಶೋಕ ಕಾಲೆಳೆದರು. ಈ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ’ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಅವರು ಸದನದ ದಿಕ್ಕು ತಪ್ಪಿಸಿದ್ದಾರೆ. ಅವರು ಕ್ಷಮೆ ಕೇಳಿ, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು‘ ಎಂದು ಆಗ್ರಹಿಸಿದರು.

ಯಡಿಯೂರಪ್ಪ, ‘ಸಿದ್ದರಾಮಯ್ಯ ಕಾನೂನು ಪಂಡಿತರು. ತಮ್ಮ ಕಾಲದಲ್ಲಿ ಏನು ನಿರ್ಣಯ ತೆಗೆದುಕೊಂಡಿದ್ದರು ಎಂಬುದನ್ನು ಪರಿಶೀಲಿಸಲಿ. ಅದಕ್ಕಾಗಿ ಸ್ವಲ್ಪ ಹೊತ್ತು ಕಲಾಪವನ್ನು ಮುಂದೂಡಲಿ. ಬಳಿಕ ಮಸೂದೆಗೆ ಬೆಂಬಲ ನೀಡಲಿ‘ ಎಂದು ವಿನಂತಿಸಿ
ದರು. ಬಳಿಕ ಕಲಾಪವನ್ನು 10 ನಿಮಿಷ ಕಲಾಪವನ್ನು ಮುಂದೂಡಲಾಯಿತು. ವಿಧಾನಸಭಾಧ್ಯಕ್ಷರ ಕೊಠಡಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ದಾಖಲೆಗಳ ಪರಿಶೀಲನೆ ನಡೆಸಿದರು.

ಕಲಾಪ ಪುನರಾರಂಭಗೊಂಡ ಬಳಿಕ ಸಿದ್ದರಾಮಯ್ಯ, ’ನಾನು ಕಡತಗಳನ್ನು ‍ಪರಿಶೀಲನೆ ನಡೆಸಿದೆ. ಕಡತವನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಎಂದು ಹೇಳಿದ್ದು ನಿಜ. 2015ರಲ್ಲೇ ಈ ಕರಡು ಸಿದ್ಧವಾಗಿತ್ತು. ಆ ಬಳಿಕ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದೆವು. ಬಳಿಕ ಮೈತ್ರಿ ಸರ್ಕಾರ ಬಂದಿತ್ತು. ಕಾಯ್ದೆ ಜಾರಿ ಮಾಡಬೇಕು ಎಂದು ಅನಿಸಿದ್ದರೆ ಒಂದೇ ನಿಮಿಷದಲ್ಲಿ ಮಾಡುತ್ತಿದ್ದೆವು. ನಮಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಅಂದಿನ ಕರಡು ಮಸೂದೆಗೆ, ನೀವು ತಂದಿರುವ ಮಸೂದೆಗೆ ಅಜಗಜಾಂತರವಿದೆ’ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT