ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಚರ್ಚೆ: ಧರಣಿಯಲ್ಲೇ ಕೊನೆಗೊಂಡ ವಿಧಾನಸಭೆ ಕಲಾಪ

ಕಾಲಾವಕಾಶ ನೀಡದ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ
Last Updated 24 ಡಿಸೆಂಬರ್ 2021, 19:47 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಲು ಹೆಚ್ಚಿನ ಸಮಯ ನೀಡಲಿಲ್ಲ ಎಂದು ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸದಸ್ಯರ ಧರಣಿಯ ಮಧ್ಯೆ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿತು.

ಸುಮಾರು ಒಂದು ತಾಸು ಮಾತನಾಡಿದ ಸಿದ್ದರಾಮಯ್ಯ, ‘ಉತ್ತರ ಕರ್ನಾಟಕ ಭಾಗದ ಇನ್ನೂ ಅನೇಕ ಸಮಸ್ಯೆಗಳು ಮತ್ತು ನೀರಾವರಿ ಯೋಜನೆಗಳ ಬಗ್ಗೆ ಮಾತನಾಡಬೇಕಿದ್ದು, ಇನ್ನೂ ಒಂದು ಗಂಡೆ ಮಾತನಾಡಲು ಅವಕಾಶ ನೀಡಬೇಕು’ ಎಂದು ಪಟ್ಟು ಹಿಡಿದರು. ಆದರೆ, ಮಾತು ಮುಂದುವರಿಸಲು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ ತಾವೇ ನೇರವಾಗಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಹೂಡಿದರು. ಕಾಂಗ್ರೆಸ್‌ನ ಇತರ ಸದಸ್ಯರು ಅವರ ಜತೆಗೂಡಿದರು.

ಈ ಹಂತದಲ್ಲಿ ಉತ್ತರ ನೀಡಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮುಂದಾದಾಗ ಅವರಿಗೆ ಘೋಷಣೆಗಳ ಮೂಲಕ ತಿರುಗೇಟು ನೀಡಿದರು. ‘ಬೇಕೇ ಬೇಕು ಚರ್ಚೆ ಬೇಕು’. ‘ಧಿಕ್ಕಾರ ಧಿಕ್ಕಾರ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ’. ‘ಉತ್ತರ ಕರ್ನಾಟಕ ವಿರೋಧಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಕಾರಜೋಳ, ‘ಸರ್ಕಾರದ ಉತ್ತರ ಕೇಳದೇ ಪಲಾಯನ ಮಾಡುತ್ತಿದ್ದೀರಿ. ಈ ಭಾಗಕ್ಕೆ ಅನ್ಯಾಯ ಆಗಿದ್ದರೆ ಅದು ಕಾಂಗ್ರೆಸ್‌ನಿಂದಲೇ. ಕೃಷ್ಣಾ ಮೇಲ್ದಂಡೆಗೆ ವರ್ಷಕ್ಕೆ ₹50 ಸಾವಿರ ಕೋಟಿ ಕೊಡ್ತೀರಿ ಎಂದು ಕೇವಲ ₹7,728 ಕೋಟಿ ಕೊಟ್ಟಿದ್ದೀರಿ. ನಿಮಗೆ ನಾಚಿಕೆ ಆಗಬೇಕು. ಇದರ ಬಗ್ಗೆ ಮಾತನಾಡಲು ನಿಮಗೆ ನೈತಿಕ ಅಧಿಕಾರ ಇಲ್ಲ’ ಎಂದರು.

‘ಬರೀ ಸುಳ್ಳು ಬರೀ ಸುಳ್ಳು... ಕೈಗೊಂಬೆ ಕೈಗೊಂಬೆ ಆರ್‌ಎಸ್‌ಎಸ್‌ ಕೈಗೊಂಬೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಡಾ.ರಂಗನಾಥ್‌, ಯತೀಂದ್ರ ಸಿದ್ದರಾಮಯ್ಯ ಮುಂತಾದವರು ಘೋಷಣೆಗಳನ್ನು ಮುಂದುವರಿಸಿದರು. ಈ ಗದ್ದಲದ ಮಧ್ಯೆ ಸಚಿವರು ಉತ್ತರ ಪೂರ್ಣಗೊಳಿಸಿದರು.

ಅಷ್ಟಕ್ಕೇ ಸುಮ್ಮನಾಗದ ಸಿದ್ದರಾಮಯ್ಯ, ‘ಎರಡೂವರೆ ವರ್ಷಗಳ ಬಳಿಕ ಬೆಳಗಾವಿ ಅಧಿವೇಶನ ನಡೆದಿದೆ. ಉತ್ತರಕರ್ನಾಟಕದ ಬಗ್ಗೆ ಮಾತನಾಡಲು ಹೆಚ್ಚಿನ ಕಾಲಾವಕಾಶ ನೀಡಬೇಕು. ಭೋಜನ ವಿರಾಮದ ನಂತರ ಕಲಾಪ ಮುಂದುವರಿಸಬೇಕು’ ಎಂದು ಆಗ್ರಹಿಸಿದರು. ಆದರೆ, ಅದಕ್ಕೆ ಅವಕಾಶ ನೀಡದ ಸಭಾಧ್ಯಕ್ಷರು ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಿದರು.

ಬೆಳಿಗ್ಗೆ ಚರ್ಚೆ ಆರಂಭಿಸಿದಾಗ ಆಡಳಿತ ಸದಸ್ಯರು ತಮಗೆ ಮಾತನಾಡಲು ಅವಕಾಶ ನೀಡಬೇಕು. ವಿರೋಧ ಪಕ್ಷದವರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠದ ಬಳಿ ಬಂದರು. ಅವರನ್ನು ಸಮಾಧಾನಪಡಿಸಿ ‘ಒಂದಿಬ್ಬರಿಗೆ ಅವಕಾಶ ನೀಡುತ್ತೇನೆ ನಿಮ್ಮ ಸ್ಥಳಗಳಿಗೆ ಹಿಂದಕ್ಕೆ ಹೋಗಿ’ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯ ಅವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಕಾಂಗ್ರೆಸ್‌ ಸದಸ್ಯರು ಶುಕ್ರವಾರ ಒಂದೇ ದಿನ ಮೂರು ಬಾರಿ ಧರಣಿ ನಡೆಸಿದರು.

ನೀರಾವರಿಗೆ ಕೊಟ್ಟಿದ್ದು ₹52 ಸಾವಿರ ಕೋಟಿ: ಸಿದ್ದರಾಮಯ್ಯ
‘ನಾವು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಯೋಜನೆಗಳಿಗೆ ವರ್ಷಕ್ಕೆ ₹10 ಸಾವಿರ ಕೋಟಿಯಂತೆ ಐದು ವರ್ಷಗಳಲ್ಲಿ ಒಟ್ಟು ₹51,217 ಕೋಟಿ ನೀಡಿದ್ದೇವೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

‘ನೀವು ತಪ್ಪು ಮಾಹಿತಿ ನೀಡಿದ್ದೀರಿ’ ಎಂದು ಅವರು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಿಮ್ಮ ಅವಧಿಯಲ್ಲಿ (2008–13)ಎಲ್ಲ ನೀರಾವರಿ ಯೋಜನೆಗಳಿಗೆ ಸೇರಿ ಒಟ್ಟು ಕೊಟ್ಟ ಹಣ ₹33,835 ಕೋಟಿ. ಅದರಲ್ಲಿ ಕೃಷ್ಣಾ ಮೇಲ್ದಂಡೆಗೆ ಕೊಟ್ಟಿದ್ದು ₹7,132 ಕೋಟಿ ಮಾತ್ರ’ ಎಂದು ಸಿದ್ದರಾಮಯ್ಯ ಎದಿರೇಟು ಕೊಟ್ಟರು.

ಕಳೆದ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ನೀರಾವರಿ ಯೋಜನೆಗಳು ಮತ್ತು ಕುಡಿಯುವ ನೀರು ಯೋಜನೆಗಳಿಗೆ ₹1.50 ಲಕ್ಷ ಕೋಟಿ ಹಣ ಕೊಡ್ತೀರಿ ಎಂದು ಘೋಷಿಸಿದ್ದೀರಿ. ಅಲ್ಲದೆ, ಯಡಿಯೂರಪ್ಪ ಅವರು ವಿಶ್ವಾಸ ಮತ ಕೇಳುವ ಸಂದರ್ಭದಲ್ಲಿ ಅದೇ ಮಾತು ಹೇಳಿದ್ದರು. ಕಳೆದ ಎರಡೂವರೆ ವರ್ಷಗಳಲ್ಲಿ ಖರ್ಚು ಮಾಡಿದ್ದು ಎಷ್ಟು? ₹17,734 ಕೋಟಿ ಖರ್ಚು ಮಾಡಿದ್ದೀರಿ ಎಂದು ಕುಟುಕಿದರು.

‘ನಮ್ಮ ಸರ್ಕಾರ ಇದ್ದಾಗ ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ನಿಮ್ಮ ಸರ್ಕಾರ ಎಷ್ಟು ಹುದ್ದೆಗಳನ್ನು ಭರ್ತಿ ಮಾಡಿದೆ ಎಂಬುದರ ಲೆಕ್ಕ ಕೊಡಿ? ನೀವು ಬಂದ ಮೇಲೆ ಒಂದೇ ಒಂದು ಹುದ್ದೆ ಭರ್ತಿ ಮಾಡಿದ್ದೀರಾ’ ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದರು.

ವಿರೋಧ ಪಕ್ಷದವರಿಗೆ ಪರಿಹಾರ ಬೇಕಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ
ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪರಿಹರಿಸುವುದು ವಿರೋಧ ಪಕ್ಷದವರಿಗೆ ಬೇಕಿಲ್ಲ. ಸಮಸ್ಯೆಗಳನ್ನು ಬಿಂಬಿಸುವುದಷ್ಟೇ ಅವರ ಆದ್ಯತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ವಿಧಾನಸಭೆ ಕಲಾಪ ಮುಗಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದಸ್ಯರ ಚರ್ಚೆಯನ್ನು ಆಲಿಸಿ ಸರ್ಕಾರದ ಪರವಾಗಿ ಸುದೀರ್ಘ ಉತ್ತರ ನೀಡಲು ಸಚಿವ ಗೋವಿಂದ ಕಾರಜೋಳ ಸಿದ್ಧರಿದ್ದರು. ಆದರೆ, ಕಾಂಗ್ರೆಸ್‌ನವರು ಧರಣಿ ನಡೆಸುವ ಮೂಲಕ, ನಮ್ಮ ಸರ್ಕಾರ ಈ ಭಾಗಕ್ಕೆ ಏನು ಮಾಡುತ್ತಾ ಇದೆ, ಮಾಡಿದೆ ಎಂಬುದನ್ನು ತಿಳಿಸಲು ಅವಕಾಶವನ್ನೇ ಕೊಡಲಿಲ್ಲ. ಕಾಂಗ್ರೆಸ್‌ನವರಿಗೆ ನಿಜವಾಗಿಯೂ ಈ ಭಾಗದ ಮೇಲೆ ಪ್ರೀತಿ ಇದ್ದರೆ ಸರ್ಕಾರದ ಉತ್ತರ ಪಡೆದು, ಅಭಿವೃದ್ಧಿಯ ಸಿಂಚನ, ಸಮಸ್ಯೆಗೆ ಪರಿಹಾರ ಏನು ಎಂಬುದನ್ನು ಜನರಿಗೆ ತಲುಪಿಸಬೇಕಾಗಿತ್ತು. ಅವರ ಆರೋಪಗಳು ಏನೇ ಇರಲಿ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ ಎಂದು ಪ್ರತಿಪಾದಿಸಿದರು.

‘ಈ ಅಧಿವೇಶನದಲ್ಲಿ ಕರ್ನಾಟಕದ ನೆಲ, ಜಲ, ಜನ, ಭಾಷೆ, ಸಂಸ್ಕೃತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂಬುದನ್ನು ಸಾರಿದ್ದೇವೆ. ಎರಡೂ ಸದನಗಳಲ್ಲಿ ಈ ಕುರಿತ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳುವ ಮೂಲಕ ಗಡಿ ತಕರಾರು ತೆಗೆಯುವವರಿಗೆ ತಕ್ಕ ಉತ್ತರವನ್ನು ಕೊಟ್ಟಿದ್ದೇವೆ. ಪುಂಡಾಟಿಕೆ ನಡೆಸುವವರಿಗೆ ತಕ್ಕ ಶಿಕ್ಷೆ ಕೊಡಿಸುವ ಎಚ್ಚರಿಕೆಯನ್ನೂ ನೀಡಿದ್ದೇವೆ’ ಎಂದು ಹೇಳಿದರು.

*
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 527 ಮೀಟರ್‌ಗೆ ಹೆಚ್ಚಿಸಬೇಕು. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡಬೇಕು.
-ವೀರಣ್ಣ ಚರಂತಿಮಠ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT