ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಪ್ರಕರಣ: ಹಕ್ಕು ಬಾಧ್ಯತಾ ಸಮಿತಿಗೆ

ಕಾಂಗ್ರೆಸ್ ಪ್ರತಿಭಟನೆ ಮಧ್ಯೆಯೇ ವಿಚಾರಣೆಗೆ ರೂಲಿಂಗ್‌ ನೀಡಿದ ಸಭಾಧ್ಯಕ್ಷ ಕಾಗೇರಿ
Last Updated 9 ಮಾರ್ಚ್ 2021, 20:36 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಅಂಗಿ ಬಿಚ್ಚಿ ಪ್ರತಿಭಟಿಸಿದ ಕಾಂಗ್ರೆಸ್‌ನ ಬಿ.ಕೆ. ಸಂಗಮೇಶ್ವರ ಅವರು ಸದಸ್ಯರ ಹಕ್ಕುಚ್ಯುತಿ ಮಾಡಿದ್ದಾರೆ ಎಂಬ ಪ್ರಸ್ತಾವವನ್ನು ಅಂಗೀಕರಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನ ತೀವ್ರ ಪ್ರತಿರೋಧದ ಮಧ್ಯೆಯೂ ಪ್ರಕರಣದ ವಿಚಾರಣೆಯನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದರು.

‘ಸಂಗಮೇಶ್ವರ ವರ್ತನೆಯಿಂದ ಇಡೀ ಸದನವೇ ತಲೆ ತಗ್ಗಿಸುವಂತಾಗಿದ್ದು, ಸದಸ್ಯರು ಮತ್ತು ಸಭಾಧ್ಯಕ್ಷರ ಹಕ್ಕುಚ್ಯುತಿಯಾಗಿದೆ’ ಎಂದು ಪ್ರತಿಪಾದಿಸಿದ ಬಿಜೆಪಿಯ ಆರಗ ಜ್ಞಾನೇಂದ್ರ ಪ್ರಸ್ತಾವ ಮಂಡಿಸಲು ಮುಂದಾದರು.

‘ಸಂಗಮೇಶ್ವರ ಅವರನ್ನು ಸದನದಿಂದ ಅಮಾನತು ಮಾಡಿ, ಒಳಬರದಂತೆ ತಡೆದಿದ್ದೀರಿ. ಸಮರ್ಥನೆಗೆ ಅವಕಾಶ ಇಲ್ಲದಂತೆ ಮಾಡಿ ಹಕ್ಕುಚ್ಯುತಿ ಮಂಡಿಸುವುದು ಸರಿಯಲ್ಲ. ವಿಧಾನಸಭೆ ಇತಿಹಾಸದಲ್ಲಿ ಸದಸ್ಯರೊಬ್ಬರ ವಿರುದ್ಧ ಈ ರೀತಿ ನಿರ್ಣಯ ಮಂಡಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಮ್ಮ ಪ‍ಕ್ಷದ ಸದಸ್ಯರ ಜತೆ ಧರಣಿ ನಡೆಸಿದರು. ಸಭಾಧ್ಯಕ್ಷರ ಪೀಠದ ಮುಂದೆ ಬಂದ ಕಾಂಗ್ರೆಸ್ ಸದಸ್ಯರು, ‘ಆರೆಸ್ಸೆಸ್‌ ಕೈಗೊಂಬೆ ಸರ್ಕಾರ, ಸಿ.ಡಿ ಸರ್ಕಾರ, ಅಶ್ಲೀಲ ಸರ್ಕಾರ, ರಾಸಲೀಲೆ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿದರು. ಅದಕ್ಕೆ ಪ್ರತಿಯಾಗಿ, ‘ಪಾಕಿಸ್ತಾನ ಕೈಗೊಂಬೆ, ಇಟಲಿ ಕಾಂಗ್ರೆಸ್‌’ ಎಂದು ಬಿಜೆಪಿಯವರು ತಿರುಗೇಟು ಕೊಟ್ಟರು.

ಗಲಾಟೆಯ ಮಧ್ಯೆಯೇ, ಸಭಾಧ್ಯಕ್ಷ ಕಾಗೇರಿ, ‘ಹಕ್ಕುಚ್ಯುತಿ ಪ್ರಸ್ತಾವದ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್‌ನವರು ತಯಾ
ರಿಲ್ಲ. ಹೀಗಾಗಿ, ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತಿದ್ದೇನೆ’ ಎಂದು ರೂಲಿಂಗ್‌ ನೀಡಿದರು.

ಕಾಗೇರಿ ಮಾತಿನ ಅಬ್ಬರ
‘ನೀವು ರಾಜಕೀಯ ಕಾರಣಕ್ಕೆ ನನ್ನ ಬಗ್ಗೆ ಎಷ್ಟೇ ಹಗುರವಾಗಿ, ಬೇಜವಾಬ್ದಾರಿಯಿಂದ ಮಾತನಾಡಿದರೂ ಈ ಸ್ಥಾನದಲ್ಲಿ ಕುಳಿತುಕೊಂಡಿರುವವರೆಗೆ ಪೀಠದ ಗೌರವ, ಘನತೆ ಎತ್ತಿ ಹಿಡಿಯುತ್ತೇನೆ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್‌ನವರನ್ನು ಉದ್ದೇಶಿಸಿ ಏರು ಧ್ವನಿಯಲ್ಲಿ ಹೇಳಿದರು.

‘ಇದು ಪ್ರಜಾಪ್ರಭುತ್ವದ ದೇಗುಲ. ಸಂಸದೀಯ ಮೌಲ್ಯಗಳನ್ನು ನಾವು ಹೆಚ್ಚಿಸಬೇಕಾಗಿದೆ. ಸಂಗಮೇಶ್ವರ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಲ್ಲದೇ, ಈ ಪೀಠದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಕ್ಕುಚ್ಯುತಿ ಚರ್ಚೆಗೂ ಸಿದ್ಧರಿಲ್ಲ. ಇದು ಸರಿ ನಡವಳಿಕೆಯಲ್ಲ’ ಎಂದು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT