ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಸಿಎಲ್‌: ಅರ್ಜಿ ಸಲ್ಲಿಕೆಗೆ ಕಾಲಮಿತಿ ಇಲ್ಲ: ಸಚಿವ ಆರ್. ಅಶೋಕ ಸ್ಪಷ್ಟನೆ

ಅನುದಾನ ಬೇಡಿಕೆ ಚರ್ಚೆ ವೇಳೆ ಶಾಸಕ ಎನ್.ಮಹೇಶ್‌ ಪ್ರಸ್ತಾಪ
Last Updated 21 ಮಾರ್ಚ್ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿ ಪರಭಾರೆ ನಿಷೇಧ (ಪಿಟಿಸಿಎಲ್) ಕಾಯ್ದೆಯ ಷರತ್ತು ಉಲ್ಲಂಘಿಸಿ ಮಾರಾಟ ಆಗಿರುವ ಭೂಮಿಯ ಮರುಮಂಜೂರಾತಿ ಕೋರಿ ಅರ್ಜಿ ಸಲ್ಲಿಸುವುದಕ್ಕೆ ಕಾಲಮಿತಿ ಇಲ್ಲ. ಇದನ್ನು ಸ್ಪಷ್ಟಪಡಿಸಿ ಸುತ್ತೋಲೆ ಹೊರಡಿಸಿದ್ದೇವೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಸ್ಪಷ್ಟಪಡಿಸಿದರು.

ಪಿಟಿಸಿಎಲ್‌ ಕಾಯ್ದೆಯ ಆಶಯ ಈಡೇರದ ಕುರಿತು ಶಾಸಕ ಎನ್.ಮಹೇಶ್‌ವಿಧಾನಸಭೆಯಲ್ಲಿ ಅನುದಾನ ಬೇಡಿಕೆ ಚರ್ಚೆ ವೇಳೆ ಪ್ರಸ್ತಾಪಿಸಿದರು.

‘ರಾಜ್ಯದಲ್ಲಿ 10 ವರ್ಷಗಳಲ್ಲಿ 8,501 ಪರಿಶಿಷ್ಟ ಕುಟುಂಬಗಳಿಗೆ ಒಟ್ಟು 4,705 ಎಕರೆ ಭೂಮಿ ನೀಡಲಾಗಿದೆ. ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಪಿಟಿಸಿಎಲ್‌ ಕಾಯ್ದೆಯಡಿ ಭೂಮಿ ಮರುಮಂಜೂರಾತಿ ಅರ್ಜಿಯನ್ನು ಸಮುಚಿತ ಸಮಯದೊಳಗೆ ಸಲ್ಲಿಸಬೇಕು ಎಂದುಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದ್ದರಿಂದಾಗಿ ಪರಿಶಿಷ್ಟ ಕುಟುಂಬಗಳು ಸುಮಾರು 5 ಸಾವಿರ ಎಕರೆಗಳಷ್ಟು ಭೂಮಿಯನ್ನು ಕಳೆದುಕೊಂಡಿವೆ’ ಎಂದು ಬೇಸರ ವ್ಯಕ್ತ‍ಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಶೋಕ, ‘ನೆಕ್ಕಂಟಿ ರಾಮಲಕ್ಷ್ಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಪೀಠವೊಂದು ಈ ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಿದ್ದು ನಿಜ. ಆ ಬಳಿಕ ಸುಪ್ರೀಂಕೋರ್ಟ್‌ನ ದ್ವಿಸದಸ್ಯ ಪೀಠವು ಪಿಟಿಸಿಎಲ್‌ ಕಾಯ್ದೆಯ ಆಶಯವನ್ನು ಎತ್ತಿ ಹಿಡಿದಿದ್ದು, ಅರ್ಜಿ ವಿಲೇವಾರಿಗೆ ಕಾಲಮಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೂ ಕೆಲವು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸುಪ್ರೀಂಕೋರ್ಟ್‌ನ ಬೇರೆ ಬೇರೆ ಆದೇಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಅರ್ಜಿ ಇತ್ಯರ್ಥಪಡಿಸುತ್ತಿದ್ದಾರೆ. ಇದನ್ನು ತಡೆಯಲೆಂದೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಚ್ಚರಿಸಿದರು.

‘ಸರ್ಕಾರದ ಸುತ್ತೋಲೆಯಿಂದ ಏನೂ ಪ್ರಯೋಜನವಾಗದು. ಪರಿಶಿಷ್ಟ ಕುಟುಂಬಗಳ ಭೂಮಿ ಪರಾಭಾರೆಯನ್ನು ಕಟ್ಟುನಿಟ್ಟಾಗಿ ತಡೆಯಲು ಪಿಟಿಸಿಎಲ್‌ ಕಾಯ್ದೆಗೆ ತಿದ್ದುಪಡಿ ತರಬೇಕು’ ಎಂದು ಮಹೇಶ್‌ಒತ್ತಾಯಿಸಿದರು.

10 ವರ್ಷಗಳಲ್ಲಿ ₹ 2.5 ಲಕ್ಷ ಕೋಟಿ ಅನುದಾನ
ಬೆಂಗಳೂರು:
‘2013ರ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ (ಎಸ್‌ಸಿಎಸ್‌ಪಿ–ಟಿಎಸ್‌ಪಿ) ಕಾಯ್ದೆ ಜಾರಿಗೆ ಬಂದ ಬಳಿಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸರ್ಕಾರದ ವಿವಿಧ ಬಜೆಟ್‌ಗಳಲ್ಲಿ ಒಟ್ಟು ₹ 2.5 ಲಕ್ಷ ಕೋಟಿಗಳಷ್ಟು ಅನುದಾನ ಕಾಯ್ದಿರಿಸಲಾಗಿದೆ. ಆದರೂ ಪರಿಶಿಷ್ಟ ಕುಟುಂಬಗಳು ಇದರಿಂದ ಎಷ್ಟರಮಟ್ಟಿಗೆ ಸಶಕ್ತವಾಗಿವೆ ಎಂದು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು.

ವಿಧಾನಸಭೆಯಲ್ಲಿ ಅನುದಾನ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಸೋಮವಾರ ಮಾತನಾಡಿದ ಅವರು, ‘ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆಯಿಂದಾಗಿ ಒಂದಷ್ಟು ಆಸ್ತಿಗಳು ನಿರ್ಮಾಣವಾಗಿದ್ದು ನಿಜ.ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಅಂದಾಜು 30 ಲಕ್ಷ ಕುಟುಂಬಗಳಿವೆ. ಈ ಕಾಯ್ದೆ ಜಾರಿಯಾದ ಬಳಿಕ ಪ್ರತಿ ಕುಟುಂಬಕ್ಕೆ ತಲಾ ₹ 8.30 ಲಕ್ಷದಷ್ಟು ಅನುದಾನ ಒದಗಿಸಿದಂತಾಗಿದೆ. ಈ ಅವಧಿಯಲ್ಲಿ ನೇರವಾಗಿ ಸವಲತ್ತು ಪಡೆದಿರುವುದು 3.38 ಲಕ್ಷ ಕುಟುಂಬಗಳು ಮಾತ್ರ. ಇಷ್ಟೆಲ್ಲ ಅನುದಾನ ನೀಡಿಯೂ ಅವರ ಆರ್ಥಿಕ ಸಬಲೀಕರಣವಾಗಿಲ್ಲ. ವಾಹನ ಖರೀದಿ, ಭೂಮಿ ಖರೀದಿಗೆ ನೆರವು ಮುಂತಾದ ಆರ್ಥಿಕ ಕಾರ್ಯಕ್ರಮಗಳಿಂದ ಮಾತ್ರ ಈ ಕುಟುಂಬಗಳನ್ನು ಮೇಲಕ್ಕೆತ್ತಬಹುದು’ ಎಂದು ಅಭಿಪ್ರಾಯಪಟ್ಟರು.

‘ಕಾಯ್ದೆಯ ಸೆಕ್ಷನ್ 7ಡಿ ಪ್ರಕಾರ ಲೋಕೋಪಯೋಗಿ ಹಾಗೂ ನೀರಾವರಿ ರೀತಿಯ ಕಾಮಗಾರಿಗಳಲ್ಲಿ 10 ವರ್ಷಗಳಲ್ಲಿ ₹ 20 ಸಾವಿರ ಕೋಟಿ ಅನುದಾನವನ್ನು ಪರಿಶಿಷ್ಟರ ಅಭಿವೃದ್ಧಿಗೆ ಬಳಸಲಾಗಿದೆ ಎಂದು ತೋರಿಸಲಾಗಿದೆ. ಕಾಯ್ದೆಯ 7ಡಿ ಸೆಕ್ಷನ್‌ ಅನ್ನು ರದ್ದುಪಡಿಸಬೇಕು. ಅದರ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಿಗಮಗಳಿಗೆ ಹಂಚಿಕೆ ಮಾಡಬೇಕು. ಆಗ ಮಾತ್ರ ಈ ಅನುದಾನವನ್ನು ಪರಿಶಿಷ್ಟ ಕುಟುಂಬಗಳ ಆರ್ಥಿಕ ಸಬಲೀಕರಣಕ್ಕೆ ಪರಿಣಾಮಕಾರಿಯಾಗಿ
ಬಳಸಲು ಸಾಧ್ಯ ಎಂದು’ ಎಂದು ಮಹೇಶ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT