ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಸು ಕೊಟ್ಟರಷ್ಟೇ ಪೊಲೀಸ್ ಬಾಸ್: ‘ಪ್ರಜಾವಾಣಿ’ ವರದಿ ಪ್ರಸ್ತಾಪಿಸಿದ ಸಿದ್ದರಾಮಯ್ಯ

Last Updated 24 ಮಾರ್ಚ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಸು ಕೊಟ್ಟರಷ್ಟೇ ಪೊಲೀಸ್‌ ಬಾಸ್‌’ ವರದಿಯ ಮೂಲಕ ‘ಪ್ರಜಾವಾಣಿ’ ಪೊಲೀಸ್‌ ಇಲಾಖೆಯಲ್ಲಿನ ಸಮಗ್ರ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಹೊಟೇಲ್‌ ತಿಂಡಿ ದರದ ಪಟ್ಟಿಯಂತೆ ಆಯಕಟ್ಟಿನ ಸ್ಥಳಕ್ಕೆಅಧಿಕಾರಿಗಳ ವರ್ಗಾವಣೆಯ ದರ ನಿಗದಿ ಆಗಿರುವುದನ್ನೂ ವರದಿ ಉಲ್ಲೇಖಿಸಿದೆ. ಇಡೀ ಪೊಲೀಸ್‌ ಇಲಾಖೆಯೇ ದಾರಿ ತಪ್ಪಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

ವಿಧಾನಸಭೆಯಲ್ಲಿ ಗುರುವಾರ ನಿಯಮ 69 ರಡಿ ‘ರಾಜ್ಯದಲ್ಲಿ ಕುಸಿದು ಬೀಳುತ್ತಿರುವ ಕಾನೂನು ಸುವ್ಯವಸ್ಥೆ’ಯ ಬಗ್ಗೆ ಅವರು ಮಾತನಾಡಿದರು. ‘ಇಲಾಖೆಯ ವಿವಿಧ ಹುದ್ದೆಗಳ ದರವನ್ನು ಹೊಟೇಲ್‌ಗಳಲ್ಲಿ ಕೇಸರಿ ಬಾತ್, ಮಸಾಲೆದೋಸೆ, ಇಡ್ಲಿ–ವಡೆ, ಉಪ್ಪಿಟ್ಟಿನ ದರದಂತೆ ನಿಗದಿಯಾಗಿದೆ. ಪತ್ರಿಕೆಯಲ್ಲಿ ಬಂದ ಈ ಆರೋಪವನ್ನು ನೀವಾಗಲಿ, ಮುಖ್ಯಮಂತ್ರಿಯವರಾಗಲಿ ಇಲ್ಲಿಯವರೆಗೆ ನಿರಾಕರಿಸಿಲ್ಲ, ಒಪ್ಪಿಕೊಂಡೂ ಇಲ್ಲ ಎಂದರೆ ಏನು ಅರ್ಥ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಒಬ್ಬರಂತೂ ₹65 ಲಕ್ಷವನ್ನು ಬಡ್ಡಿಗೆ ತಂದು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದೂ ವರದಿಯಾಗಿದೆ. ಇಂತಹ ಅಧಿಕಾರಿಗಳಿಂದ ನಾವು ಕಾನೂನು ಸುವ್ಯವಸ್ಥೆಯನ್ನು ನಿರೀಕ್ಷಿಸಲು ಸಾಧ್ಯವೇ? ಲಂಚ ತಿಂದು ನಾಯಿಗಳಂತೆ ಬಿದ್ದಿರುತ್ತಾರೆ ಎಂದು ಬಗ್ಗೆನೀವೇ (ಆರಗ ಜ್ಞಾನೇಂದ್ರ) ಒಮ್ಮೆ ಪೊಲೀಸರನ್ನು ಟೀಕಿಸಿದ್ದನ್ನು ಒಪ್ಪಿಕೊಳ್ಳುತ್ತೀರಾ’ ಎಂದು ಗೃಹ ಸಚಿವ ಜ್ಞಾನೇಂದ್ರ ಅವರನ್ನು ಕೆಣಕಿದರು.

‘ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ– ಸುವ್ಯವಸ್ಥೆ ಕದಡಿದೆ. ಶಾಂತಿ ಸುವ್ಯವಸ್ಥೆ ಇಲ್ಲದ ಕಡೆಗಳಲ್ಲಿ ಅಭಿವೃದ್ಧಿಯೂ ಆಗುವುದಿಲ್ಲ. ಇದನ್ನು ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಕಾಣಬಹುದು. ಬಹುತ್ವ ಮತ್ತು ಶಾಂತಿ–ಸುವ್ಯವಸ್ಥೆ ಇರುವ ನಾರ್ವೆ, ಸ್ವೀಡನ್‌, ಡೆನ್ಮಾರ್ಕ್‌, ಫಿನ್ಲೆಂಡ್‌, ಜಪಾನ್‌ ಮುಂತಾದ ಕಡೆಗಳಲ್ಲಿ ಅಭಿವೃದ್ಧಿ ಆಗಿದೆ. ಒಂದೇ ಧರ್ಮದ ಪ್ರಾಬಲ್ಯವಿರುವ ದಕ್ಷಿಣ ಆಫ್ರಿಕಾ, ಅಫ್ಗಾನಿಸ್ತಾನ, ಪಾಕಿಸ್ತಾನಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದ್ದೇವೆ. ಅಲ್ಲಿ ಕಾನೂನು ಸುವ್ಯವಸ್ಥೆಯೂ ಇಲ್ಲ ಅಭಿವೃದ್ಧಿಯೂ ಇಲ್ಲ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ‘ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದು ನಮ್ಮ ಕಾಲದಲ್ಲಿ ಅಲ್ಲ. ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲವೇ? ನಾನು ಗೃಹಮಂತ್ರಿ ಆದ ಬಳಿಕ ಏಜೆಂಟರನ್ನು ಇಟ್ಟುಕೊಂಡಿಲ್ಲ. ಆ ವ್ಯವಸ್ಥೆಗೆ ಇತಿಶ್ರೀ ಹಾಡಿದ್ದೇನೆ. ಹಳೆ ಕುದುರೆಗೆ ಹೊಸ ಸವಾರ ಅಷ್ಟೇ’ ಎಂದರು.

ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಈಗ ನಿಮ್ಮ ಸರ್ಕಾರ ಇದೆ. ಜನ ತೀರ್ಪು ಕೊಟ್ಟು ನಮ್ಮನ್ನು ಇಲ್ಲಿ ಕೂರಿಸಿದ್ದಾರೆ. ಆದರೆ, ನೀವು ಕೊಟ್ಟ ಕುದುರೆಯನ್ನು ಏರದ ಧೀರರೂ ಅಲ್ಲ ಶೂರರೂ ಅಲ್ಲ’ ಎಂದರು.

‘ನಿಮ್ಮ ಮೇಲೆ ಬಂದ ಆರೋಪಗಳಿಗೆ ಉತ್ತರ ಕೊಟ್ಟಿಲ್ಲ, ಕೇಸೂ ಹಾಕಿಲ್ಲ. ಅಂದರೆ ಒಪ್ಪಿಕೊಂಡಂತೆ ಅಲ್ಲವೇ’ ಎಂದು ಪ್ರಶ್ನಿಸಿದರು. ‘ಆರೋಪಗಳನ್ನು ನಿರಾಕರಿಸಿ ಪತ್ರಿಕೆಗೆ ಪತ್ರ ಬರೆದಿದ್ದೇನೆ’ ಎಂದು ಜ್ಞಾನೇಂದ್ರ ಹೇಳಿದರು. ‘ಹಾಗಿದ್ದರೆ ನಿಮ್ಮ ಪತ್ರಕ್ಕೆ ಉತ್ತರ ಬಂದರೆ ಅದನ್ನು ಸದನದಲ್ಲಿ ಇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT