ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಮನೆಯಲ್ಲೇ ಭ್ರಷ್ಟಾಚಾರ ನಡೆದಿದ್ದು ಸುಳ್ಳೇ: ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಭ್ರಷ್ಟರು, ಭಂಡರು ಎಂದು ವಾಗ್ದಾಳಿ
Last Updated 23 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯವರು ಭ್ರಷ್ಟರು, ಭಂಡರು. ತಮ್ಮ ಹುಳುಕು ಗೊತ್ತಾಗುತ್ತದೆ ಎಂದು ಚರ್ಚೆಗೆ ಅವಕಾಶ ಕೊಡಲಿಲ್ಲ. ಪೊಲೀಸ್‌, ಸಾರಿಗೆ ಮತ್ತು ಆರೋಗ್ಯ ಇಲಾಖೆಗಳಲ್ಲಿನ ವ್ಯಾಪಕ ಭ್ರಷ್ಟಾಚಾರ ವರದಿಗಳು ಪ್ರಕಟ ಆಗಿವೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ವಿರೋಧ ಪಕ್ಷಗಳು ಸುಮ್ಮನಿರಬೇಕಾ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ವಿಧಾನಸಭೆಯ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ಪ್ರಸ್ತಾಪಿಸುವುದು ಬಿಜೆಪಿಯವರಿಗೆ ಬೇಕಿಲ್ಲ. ಅದಕ್ಕಾಗಿ ತಡೆ ಒಡ್ಡಿದ್ದಾರೆ ಎಂದರು.

ಯಡಿಯೂರಪ್ಪ ಅವರ ಮನೆಯಲ್ಲೇ ಭ್ರಷ್ಟಾಚಾರ ನಡೆಯುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಲ್ಲವೇ? ಕೃಷ್ಣಾ ಮೇಲ್ದಂಡೆ ಯೋಜನೆಗೆ ₹20 ಸಾವಿರ ಕೋಟಿ ಟೆಂಡರ್‌ ಕರೆದಿದ್ದಾರೆ. ಇದರಲ್ಲಿ ಶೇ 10 ಕಮಿಷನ್‌ ತೆಗೆದುಕೊಳ್ಳುತ್ತಾರೆ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ತಮ್ಮ ಸರ್ಕಾರದ ವಿರುದ್ಧವೇ ಆರೋಪ ಮಾಡಿಲ್ಲವೆ? ಅವರ ಪಕ್ಷದವರೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಂತಹ ಲೂಟಿಯನ್ನು ತಡೆಯುವುದು ನಮ್ಮ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದು ಸುಮ್ಮನೆ ಕೂರಲಿಲ್ಲ. ಮಾಧ್ಯಮಗಳೆದುರು ಹೋಗಿದ್ದಾರೆ. ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ. ಅವರ ಪತ್ರ ಬಂದ ಮೇಲೆ ಪ್ರಧಾನ ಮಂತ್ರಿಗಳು ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಮೋದಿ ಅವರು ತಮ್ಮನ್ನು ಚೌಕಿದಾರ್‌ ಎಂದು ಹೇಳಿಕೊಳ್ಳುತ್ತಾರೆ. ನಾ ಖಾವೂಂಗ, ನಾ ಖಾನೆದೂಂಗ ಎಂದರೆ ಇದೇನಾ ಎಂದರು.

ಇವೆಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ನಿಯಮ 60 ರ ಅಡಿ ಅವಕಾಶ ಕೇಳಿದಾಗ ಅವಕಾಶವನ್ನೇ ನೀಡಲಿಲ್ಲ. ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು. ಬಿಜೆಪಿಯವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ, ಹಿಂದಿನ ಸರ್ಕಾರ ಮಾಡಿಲ್ಲವೇ ಎಂದು ಪ್ರಶ್ನೆ ಕೇಳುತ್ತಾರೆ. ಈಗ ಇರುವುದು ಬಿಜೆಪಿ ಸರ್ಕಾರ ತನಿಖೆ ಮಾಡಿಸಲಿ. ಸರ್ಕಾರದ ಹುಳುಕು ಜನರಿಗೆ ಗೊತ್ತಾಗಿ, ಭ್ರಷ್ಟಾಚಾರ ಬಯಲಾಗುತ್ತದೆ ಎಂದು ಹೆದರಿಕೊಂಡು ಸಭಾಧ್ಯಕ್ಷರ ಮೂಲಕ ತಿರಸ್ಕಾರ ಮಾಡಿಸಿದ್ದಾರೆ. ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಧಾನಿ ಮೋದಿ ಕಳೆದ ಚುನಾವಣೆ ವೇಳೆ ಕರ್ನಾಟಕಕ್ಕೆ ಬಂದು ಸಿದ್ದರಾಮಯ್ಯ ಅವರದು ಶೇ 10 ಕಮಿಷನ್‌ ಸರ್ಕಾರ ಅಂದಿದ್ದರು. ಅವರ ಬಳಿ ಏನು ದಾಖಲೆ ಇತ್ತು? ಚಪ್ಪಾಳೆಗಾಗಿ ಭಾಷಣ ಮಾಡಿದ್ರಲ್ಲ ಈಗೇನಂತಾರೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT